ಶಾಸಕರಿಂದಲೇ ಕಸ ಹೊಡೆಸಿದ ಅಧಿಕಾರಿ: ಸಚಿವ
ಬೆಂಗಳೂರು: ಶಾಸಕರಿಂದಲೇ ಕಸ ಹೊಡೆಸಿದ ಪರಿಸರ ಪ್ರೇಮಿ, ಧೀಮಂತ ದಕ್ಷ ಅಧಿಕಾರಿ ಕೆ. ಅಮರನಾರಾಯಣ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಪ್ರಶಂಸಿಸಿದರು.
ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಸೋಮವಾರ ಸಂಜೆ ನಡೆದ ಅಮರನಾರಾಯಣರ ಅಭಿನಂದನೆ ಮತ್ತು ಸದ್ಭಾವನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
2006ರಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಅಮರನಾರಾಯಣರು ಬಂದಾಗ ನಾನು ಶಾಸಕನಾಗಿದ್ದೆ. ಊರೂರಿನ ಸ್ವಚ್ಛತೆ ದೃಷ್ಟಿಯಿಂದ ಇವರೇ ಕಸ ಗುಡಿಸಲು ಮುಂದೆ ಹೋಗುತ್ತಿದ್ದರು. ಇದರಿಂದ ನನಗೆ ಅವಮಾನವಾಗಬಾರದು ಎಂದು ನಾನು ಓಡಿಹೋಗಿ ಅವರ ಜೊತೆ ಕಸವನ್ನೂ ಗುಡಿಸಿದ್ದೇನೆ ಎಂದರು. ಬೆಟ್ಟಗುಡ್ಡಗಳ ಮೇಲೆ ಕುಡಿದು ಬಿಸಾಕಿದ ಬಾಟ್ಲು, ಕಸಕಡ್ಡಿ ತೆಗೆದು ಸಾವಿರಾರು ಸಸಿಗಳನ್ನು ನೆಡಿಸಿದರು. ಅವೆಲ್ಲ ಬೆಳೆದು ನಿಂತು ಅಮರನಾರಾಯಣರ ಹೆಸರನ್ನೇ ಹೇಳುತ್ತಿವೆ ಎಂದು ತಿಳಿಸಿದರು.
ಮೇಲ್ವರ್ಗದ ಅಮರನಾರಾಯಣರು ನಾನು ಅಸ್ಪೃಶ್ಯನಾದರೂ ನನ್ನನ್ನು ತಮ್ಮ ಮನೆ ಸದಸ್ಯನಂತೆ ಒಪ್ಪಿಕೊಂಡಿದ್ದಾರೆ. ಇಂಥ ಮಾನವೀಯ ಪ್ರೀತಿಯ, ಪ್ರಾಮಾಣಿಕತೆಯುಳ್ಳ ಇವರು ಹೃದಯವಂತ ಅಧಿಕಾರಿ ಎಂದು ಹೇಳಿದರು.
ಹಳ್ಳಿಹಳ್ಳಿಗೆ ಹೋಗಿ ಅಲ್ಲಿನ ಸೊಳ್ಳೆ, ತಿಗಣೆ ಕಾಟವನ್ನೂ ಲೆಕ್ಕಿಸದೆ ಗ್ರಾಮವಾಸ್ತವ್ಯ ಹೂಡಿ, ಜನರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವ ಜಿಲ್ಲಾಧಿಕಾರಿ ಇಲ್ಲವೆಂದೇ ಹೇಳಬೇಕು ಎಂದು ನುಡಿದರು. ಇನ್ನೊಂದು ತಿಂಗಳಿಗೆ ಸೇವೆಯಿಂದ ನಿವೃತ್ತರಾಗುವ ಮುನ್ನವೇ ಅವರ ಎಲ್ಲ ಅಭಿಮಾನಿಗಳು ಸೇರಿ ಅಮರನಾರಾಯಣರನ್ನು ಅಭಿನಂದಿಸಿದ್ದು ಅರ್ಥಪೂರ್ಣವಾಗಿದೆ. ಇವರಿಗೆ ಸರ್ಕಾರದ ಪರವಾಗಿ ನನ್ನ ಅಭಿನಂದನೆಗಳು ಎಂದರು. ತುಂಬಿತುಳುಕಿದ ಅದ್ಧೂರಿ ಸಮಾರಂಭದಲ್ಲಿ 'ಅಮರಸಿರಿ' ಸದ್ಭಾವನಾ ಗ್ರಂಥ ಬಿಡುಗಡೆ ಮಾಡಿ,
ಅಮರನಾರಾಯಣ ಮತ್ತು ಪ್ರಮೀಳಾ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ಗೋ.ನಾ. ಸ್ವಾಮಿ ತಂಡದಿಂದ ಗೀತಗಾಯನ ನಡೆಯಿತು.
ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಗುರುಪೀಠದ ಬಸವಮಾದಾರ ಚೆನ್ನಯ್ಯ ಸ್ವಾಮೀಜಿ, ಜ್ಯೋತಿಷಿ ಆನಂದ ಗುರೂಜಿ, ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಅಭಿನಂದನಾ ಸಮಿತಿಯ ಎಂ. ಪುಟ್ಟೇಗೌಡ,
ಡಿ. ಮುನಿರಾಜು ಉಪಸ್ಥಿತರಿದ್ದರು.
ಚಿತ್ರ ಶೀರ್ಷಿಕೆ-30ಬಿಕೆಆರ್24
ಪರಿಸರಪ್ರೇಮಿ ಅಮರನಾರಾಯಣ ಮತ್ತು ಪ್ರಮೀಳಾ ದಂಪತಿಗೆ ಅಭಿನಂದನೆ ಸಲ್ಲಿಸಿದ ಸಚಿವ ಎಚ್.
ಆಂಜನೇಯ. ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಜ್ಯೋತಿಷಿ ಆನಂದ ಗುರೂಜಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

