ಬೆಂಗಳೂರು ಗ್ರಾಮಾಂತರ

ಮಿಶ್ರತಳಿ ಕರುಗಳ ಪ್ರದರ್ಶನ ಉದ್ಘಾಟನೆ

Published On :

ರಾಮನಗರ: ಹೈನುಗಾರಿಕೆಯಲ್ಲಿ ತೊಡಗಿದ ರೈತರು ತಮ್ಮ ರಾಸುಗಳಿಗೆ ಮುಂಜಾಗ್ರತಾ ಲಸಿಕೆ ಹಾಕಿಸುವ ಜತೆಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಹಾಲು ಮಹಾ ಮಂಡಳ ನಿರ್ದೇಶಕ ಪಿ.ನಾಗರಾಜು ಕರೆ ನೀಡಿದರು.  ತಾಲೂಕಿನ ಚೌಕಳ್ಳಿ ಗ್ರಾಮದಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ನಡೆದ ಮಿಶ್ರತಳಿ ಕರುಗಳ ಪ್ರದರ್ಶನ  ಉದ್ಘಾಟಿಸಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮ ಕೈಗೊಂಡರೆ ಹೈನೋದ್ಯಮ ಹೆಚ್ಚು ಲಾಭದಾಯಕ ಎಂದು ಹೇಳಿದರು.  ಜಾನುವಾರುಗಳ ಪೋಷಣೆ, ವೈದ್ಯಕೀಯ ಚಿಕಿತ್ಸೆ, ಆಹಾರ ವಿಧಾನ ಸಹಿತ ಸಾಕಷ್ಟು ನೆರವನ್ನು ಹಾಲು ಒಕ್ಕೂಟ ನೀಡಲಿದೆ. ರಾಸುಗಳಿಗೆ ಮಾಡಿಸುವ ವಿಮೆ ಪ್ರೀಮಿಯಂನಲ್ಲಿ ಶೇಕಡ 50ರಷ್ಟು ಮೊತ್ತವನ್ನು ಹಾಲು ಒಕ್ಕೂಟವೇ ಭರಿಸಲಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ತಲೆದೋರಿದ ಕಾಲುಬಾಯಿ ಜ್ವರಬಾಧೆ ಮತ್ತು ಗಳಲೇ ರೋಗದಿಂದ ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿವೆ. ಮಾರಕ ರೋಗದಿಂದ ಹೈನೋದ್ಯಮದ ಮೇಲೆ ಬಲವಾದ ಪೆಟ್ಟು ಬಿದ್ದಿದ್ದು, ಸರ್ಕಾರ ನೆರವಿಗೆ ನಿಲ್ಲದಿದ್ದರೆ ಸಂತ್ರಸ್ತ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದರು ಎಂದರು.
ಕಡ್ಡಾಯ ಲಸಿಕೆ ಅಗತ್ಯ: ಕಳೆದ ವರ್ಷ ಕಾಡಿದ ರೋಗ ನಮ್ಮೆಲ್ಲರಿಗೂ ಪಾಠವಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರಾಸುಗಳಿಗೂ ಲಸಿಕೆ ಹಾಕಿಸಿದಲ್ಲಿ ರೋಗ ತಡೆಗಟ್ಟಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ರೈತರು ಸ್ವಯಂಪ್ರೇರಣೆಯಿಂದ ಮುಂದಾಗಬೇಕು ಎಂದು ನಾಗರಾಜು ಕರೆ ನೀಡಿದರು.  
ಹೈನುಗಾರಿಕೆಯು ಸಾಕಷ್ಟು ಲಾಭದಾಯಕವಾಗಿದ್ದು, ಅವಲಂಬಿತ ರೈತಾಪಿ ಸಮುದಾಯದ ಬದುಕನ್ನು ಹಸನುಗೊಳಿಸಿದೆ. ಹೀಗಾಗಿ ರಾಸುಗಳ ಲಾಲನೆ, ಪೋಷಣೆ ಮತ್ತು ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ ಎಂದು ಅವರು ಸಲಹೆಯಿತ್ತರು.  
ಗರಿಷ್ಠ ವಹಿವಾಟು: ಚೌಕಳ್ಳಿ ಗ್ರಾಮವು ರಾಮನಗರ ಜಿಲ್ಲೆಯಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ಗ್ರಾಮ. ಇಲ್ಲಿ ಪ್ರತಿನಿತ್ಯ 4 ಸಾವಿರ ಲೀಟರ್‌ಗಿಂತ ಅಧಿಕ ಹಾಲು ಉತ್ಪಾದನೆ ಆಗುತ್ತಿದ್ದು, ವಾರ್ಷಿಕ ವಹಿವಾಟು ರು.4 ಕೋಟಿ ಮೀರಿದೆ ಎಂದು ನಾಗರಾಜು ವಿವರಿಸಿದರು.  ಇಂತಹ ಗ್ರಾಮ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಈ ಗ್ರಾಮದ ಅಭಿವೃದ್ಧಿ ಜತೆಗೆ ಸ್ವಚ್ಛತೆಗೂ ಒತ್ತು ನೀಡಬೇಕಿದೆ. ಸ್ಥಳೀಯ ಸಹಕಾರ ಸಂಘ ತನ್ನ ಪಾಲಿನ ಲಾಭಾಂಶವನ್ನು ಗ್ರಾಮದ ಸ್ವಚ್ಛತೆ ಗ್ರಾಮಸ್ತರ ಹಿತ ಕಾಯುವುದಕ್ಕೂ ವಿನಿಯೋಗಿಸಬೇಕು ಎಂದರು.
ಕರುಗಳ ಪೋಷಣೆ: ಕರುಗಳನ್ನು ಪೋಷಣೆ ಮಾಡಿ, ಉತ್ತಮವಾಗಿ ಬೆಳೆಸಿದರೆ ಸರಾಸರಿ ರು.50 ಸಾವಿರ ಬೆಲೆ ಬಾಳುತ್ತವೆ. ಹೀಗಾಗಿ ರೈತರು ಕರುಗಳನ್ನು ಸದೃಢವಾಗಿ ಬೆಳೆಸುವ ಕಡೆಗೂ ಗಮನ ಹರಿಸಿ, ಲಾಭ ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನವನ್ನು ರು.4ಕ್ಕೆ ಹೆಚ್ಚಿಸಿದ್ದು, ಇದಕ್ಕಾಗಿ ವಾರ್ಷಿಕ ರು.900 ಕೋಟಿ ವಿನಿಯೋಗಿಸುತ್ತಿದೆ. ಸಹಕಾರ ಸಂಘಗಳ ನೌಕರರಿಗೂ ಪ್ರತಿ ಲೀಟರ್ಹಾಲಿಗೆ 20 ಪೈಸೆ ನೀಡುತ್ತಿರುವುದು ಸ್ವಾಗತಾರ್ಹ ಎಂದರು.  
ಸಲಹೆ ಪಾಲಿಸಿ: ರೈತರು ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಪಶು ವೈದ್ಯರು ನೀಡುವ ಸಲಹೆಗಳ ಬಗ್ಗೆ ತಾತ್ಸಾರ ಮಾಡದೆ ಪಾಲಿಸಿದ್ದೇ ಆದಲ್ಲಿ ಹೈನೋದ್ಯಮ ಮತ್ತಷ್ಟು ಲಾಭದಾಯಕ ಆಗಲಿದೆ ಎಂದು ಬಮೂಲ್‌ಲ್ನಿವಣತ್ತ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸಮೂರ್ತಿ  ಹೇಳಿದರು.
ರಾಸುಗಳಿಗೆ ಸಮತೋಲನ ಆಹಾರ ನೀಡುವುದರಿಂದ ಅವು ಮತ್ತಷ್ಟು ಆರೋಗ್ಯಯುತವಾಗಲಿದ್ದು, ಹಾಲಿನ ಇಳುವರಿಯೂ ಹೆಚ್ಚಲಿದೆ. ರೈತರು ರಾಸುಗಳಿಗೆ ಶೇಕಡ 65ರಷ್ಟು ಹಸಿ ಮೇವು, ಶೇಕಡ 35ರಷ್ಟು ಒಣ ಮೇವು ನೀಡುವುದು ಸೂಕ್ತ ಎಂದರು.  ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಕೆ.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಮೂಲ್ ವ್ಯವಸ್ಥಾಪಕ ಡಾ.ಜಗದೀಶ್, ಉಪ ವ್ಯವಸ್ಥಾಪಕ ಶಿವಶಂಕರ್, ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಪಾರ್ಥ, ರಾಜಣ್ಣ, ಅಂಜನಪ್ಪ, ಪ್ರಕಾಶ್, ಬಾಬುರೆಡ್ಡಿ ಭಾಗವಹಿಸಿದ್ದರು.
ಬಹುಮಾನ ವಿತರಣೆ: ಸ್ಥಳೀಯ ಸಹಕಾರ ಸಂಘಕ್ಕೆ ದಿನವಹಿ 180 ಲೀ. ಹಾಲು ಸರಬರಾಜು ಮಾಡುತ್ತಿರುವ ಲೀಲಾಮೂರ್ತಿ ಅವರನ್ನು ಸನ್ಮಾನಿಸಲಾಯಿತು. 1 ರಿಂದ 5, 6 ರಿಂದ 12 ತಿಂಗಳ ಮತ್ತು 1 ರಿಂದ 2 ವರ್ಷ ಹೀಗೆ ಮೂರು ಹಂತದಲ್ಲಿ ಉತ್ತಮ ಕರುಗಳ ಸ್ಪರ್ಧೆ ನಡೆಸಿ, ಮಾಲೀಕರಿಗೆ ಬಹುಮಾನ ನೀಡಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.