ಶಾಸಕರ ಸ್ವಜನ ಪಕ್ಷಪಾತ: ಜೆಡಿಎಸ್ ಆಕ್ರೋಶ
ದೊಡ್ಡಬಳ್ಳಾಪುರ: ಶಾಸಕ ಟಿ.ವೆಂಕಟರಮಣಯ್ಯ ಅವರು ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಸ್ವಜನ ಪಕ್ಷಪಾತ ಮೆರೆಯುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಂತೆ ಹೈಜಾಕ್ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನೇರ ಆರೋಪ ಮಾಡಿದೆ.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ನಗರಸಭಾ ಸದಸ್ಯರು ನಗರಸಭೆಯ ಆಡಳಿತ ಯಂತ್ರದ ವೈಫಲ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಮತ್ತು ಅಧಿಕಾರಿಗಳು ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಆಕ್ಷೇಪಾರ್ಹ. ನಗರಸಭಾ ಸದಸ್ಯರಿಗೇ ಮಾಹಿತಿ ಕೊಡದೆ ಅನೇಕ ಕಾಮಗಾರಿಗಳ ಉದ್ಘಾಟನೆ, ಚಾಲನೆ ದೊರೆಯುತ್ತಿದೆ. ಇಂದು ಕೂಡ ಶಾಲೆಯೊಂದರ ಕೊಠಡಿ ಉದ್ಘಾಟನಾ ಸಮಾರಂಭ ಶಾಸಕರ ನೇತೃತ್ವದಲ್ಲಿ ನಡೆಯುತ್ತಿದೆ. ವಾಸ್ತವವಾಗಿ ಇದು 2012-13ರ ಸಾಲಿನ ಕಾಮಗಾರಿ. ಇದನ್ನು ಅವರು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಸರ್ಕಾರಿ ಕಾರ್ಯಕ್ರಮಗಳನ್ನು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಗರಸಭೆ ಆಡಳಿತ ಹದಗೆಟ್ಟಿದೆ. ಪೌರಾಯುಕ್ತರು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ನಗರಸಭೆಯಲ್ಲಿ ಕಂದಾಯ ಸಂಗ್ರಹ ಆಗುತ್ತಿಲ್ಲ. 31 ವಾರ್ಡುಗಳಿಗೆ ಭೇಟಿ ಕೊಟ್ಟು ಮಾಡಿದ ವಾರ್ಡ್ ಸಭೆಗಳ ಸಾಫಲ್ಯ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮಹತ್ವಾಕಾಂಕ್ಷೆಯ ಕಸ ಸಂಗ್ರಹ ಯೋಜನೆ ವಿಫಲವಾಗಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ. ಇತ್ತೀಚೆಗೆ 15 ಲಕ್ಷ ವೆಚ್ಚದಲ್ಲಿ ಮನೆಗಳಿಗೆ ಕಸ ಸಂಗ್ರಹ ಡಬ್ಬಿಗಳನ್ನು ವಿತರಿಸಲಾಗಿದೆ. ಆದರೆ ಅದು ಬಳಕೆಯಾಗುತ್ತಿಲ್ಲ. ಕಸ ಸಂಗ್ರಹಿಸುವವರಿಗೆ 4 ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದಾಗಿ ಯೋಜನೆಯ ಸ್ಥಿತಿಯೇ ಡೋಲಾಯಮಾನವಾಗಿದೆ. ನಗರಸಭಾ ಸದಸ್ಯರಿಗೆ ಗೊತ್ತಿಲ್ಲದೇ ಪಿಂಚಣಿ ಅದಾಲತ್ಗಳನ್ನು ಆಯೋಜಿಸುವ ಶಾಸಕರ ಆಣತಿಗೆ ತಹಶೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಮೂಕಪ್ರೇಕ್ಷಕರಂತೆ ಅಸ್ತು ಎನ್ನುತ್ತಿರುವುದು ಖಂಡನೀಯ. ಈ ಕೂಡಲೇ ಈ ಧೋರಣೆ ನಿಲ್ಲಬೇಕು. ತಪ್ಪಿದಲ್ಲಿ ವ್ಯಾಪಕ ಹೋರಾಟ ನಡೆಸಬೇಕಾದೀತು ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಗೋವಿಂದರಾಜು, ನಗರಾಧ್ಯಕ್ಷ ತ.ನ.ಪ್ರಭುದೇವ್, ನಗರಸಭಾ ಸದಸ್ಯರಾದ ಶಿವಕುಮಾರ್, ವಡ್ಡರಹಳ್ಳಿರವಿ, ಆರ್.ಕೆಂಪರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

