ಭಾರತ ನಿರ್ಮಾಣ ಯಾತ್ರೆ ಪ್ರಯುಕ್ತ ಪಾದಯಾತ್ರೆ
ರಾಮನಗರ: ಭಾರತ ನಿರ್ಮಾಣ ಯಾತ್ರೆ ಅಂಗವಾಗಿ ಮಾ.11ರಂದು ತಾಲೂಕಿನ ಮಂಚನಬೆಲೆಯಿಂದ ರಾಮನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಮರಿದೇವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು
ಪಾದಯಾತ್ರೆಯಲ್ಲಿ ಭಾಗವಹಿಸುವರು ಎಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ಸೂಚನೆಯಂತೆ ಭಾರತ ನಿರ್ಮಾಣ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ಯುಪಿಎ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಸಮ ಸಮಾಜದ ನಿರ್ಮಾಣ: ದೇಶದಲ್ಲಿ ಬಡವ-ಬಲ್ಲಿದರ ನಡುವೆ ಅಂತರವನ್ನು ಕಡಿಮೆ ಮಾಡಲು, ಜಾತಿ-ಧರ್ಮಗಳ ನಡುವಿನ ಕಂದಕವನ್ನು ಮುಚ್ಚಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಹಲವಾರು ಕ್ರಾಂತಿಕಾರಕ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜದ ನಿರ್ಮಾಣ ಮಾಡಲು ಶ್ರಮಿಸಿದೆ ಎಂದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಪಂಚವಾರ್ಷಿಕ ಯೋಜನೆಗಳು, ಲಾಲ್ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್ ಜೈಕಿಸಾನ್ ಘೋಷಣೆ ಮೂಲಕ ರೈತರಿಗೆ ಆದ್ಯತೆ ನೀಡಲಾಯಿತು. ಇಂದಿರಾ ಗಾಂಧಿಯವರು ಗರೀಬಿ ಹಠಾವೋ, ಬ್ಯಾಂಕ್ ರಾಷ್ಟ್ರೀಕರಣವನ್ನು ಜಾರಿಗೊಳಿಸಿದರು ಎಂದರು.
ರಾಜೀವ್ ಗಾಂಧಿಯವರ ತಂತ್ರಜ್ಞಾನ ಕ್ರಾಂತಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣ, ಪಿ.ವಿ.ನರಸಿಂಹರಾವ್ ಅವರ ಆರ್ಥಿಕ ಉದಾರೀಕರಣ ಮತ್ತು ಡಾ. ಮನಮೋಹನ್ ಸಿಂಗ್ ಅವರ ಭಾರತ್ ನಿರ್ಮಾಣ್ ಯೋಜನೆಗಳು ದೇಶವನ್ನು ವಿಶ್ವದ ಬಲಿಷ್ಠ ಮತ್ತು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಿವೆ ಎಂದು ಮರಿದೇವರು ಹೇಳಿದರು.
ಮಹತ್ತರ ಬದಲಾವಣೆ: 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಳೆದ 10 ವರ್ಷದಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಯುಪಿಎ ಸರ್ಕಾರದ ಸಾಧನೆ ಶೂನ್ಯ ಎಂದು ಬಿಂಬಿಸುತ್ತಿರುವ ಪ್ರತಿ ಪಕ್ಷಗಳ ಟೀಕೆಗಳು ಕೇವಲ ರಾಜಕೀಯ ಪ್ರೇರಿತವಾದವು ಎಂದು ತಿಳಿಸಿದರು. ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಭರವಸೆ ನೀಡುವ ನರೇಗಾ, ಶಿಕ್ಷಣ ಹಕ್ಕು ಕಾಯ್ದೆ, ಜೆ-ನರ್ಮ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಇಂದಿರಾ ಆವಾಸ್ ಯೋಜನೆ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಆಹಾರ ಭದ್ರತಾ ಕಾಯ್ದೆ ಮೂಲಕ ಜನರ ಬದುಕನ್ನು ಹಸನುಗೊಳಿಸಲು ಕಾಂಗ್ರೆಸ್ ಸರ್ಕಾರವು ಪಣ ತೊಟ್ಟಿದೆ ಎಂದರು.
ಜನೋಪಯೋಗಿ ಕಾರ್ಯಕ್ರಮ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೊದಲ ದಿನವೇ ಬಡವರ ಮತ್ತು ರೈತಪರ ದಿಟ್ಟ ತೀರ್ಮಾನಗಳನ್ನು ತೆಗೆದುಕೊಂಡಿದೆ. ಕೇವಲ ಹತ್ತು ತಿಂಗಳಲ್ಲಿಯೇ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದೆ ಎಂದು ಮರಿದೇವರು ಹೇಳಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಹೈನುಗಾರಿಕೆಗೆ ಪ್ರೋತ್ಸಾಹಧನ, ಮನಸ್ವಿನಿ-ಮೈತ್ರಿ ಯೋಜನೆಗಳು, ಅಲ್ಪಸಂಖ್ಯಾತರ ಸಾಲ ಮನ್ನಾ, ರೈತರಿಗೆ ಬಡ್ಡಿರಹಿತ ಸಾಲ, ಯಶಸ್ವಿನಿ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸಮಾಜ ಕಲ್ಯಾಣದ ಮಹತ್ವದ ಕಾನೂನು ಯೋಜನೆಗಳು, ಗುಡಿಸಲು ಮುಕ್ತ ಕರ್ನಾಟಕವನ್ನಾಗಿಸಲು ಸರ್ವರಿಗೂ ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಭಾರತ ನಿರ್ಮಾಣ ಯಾತ್ರೆ ವೇಳೆ ಈ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುವುದು. ದೇಶದಲ್ಲಿ ಪ್ರಜಾಪ್ರಭುತ್ವ ಬಲವಾಗಿ ಬೇರೂರಲು ಭದ್ರ ಬುನಾದಿ ಹಾಕಿ, ಸಾಮರಸ್ಯ, ಸಹಬಾಳ್ವೆಯ
ಸಿದ್ಧಾಂತದಡಿ ಭಾರತವನ್ನು ವಿಶ್ವವನ್ನೇ ಬಲಿಷ್ಠ ರಾಷ್ಟ್ರವನ್ನಾಗಿಸಲು ಕಾಂಗ್ರೆಸ್ ಶ್ರಮಿಸುತ್ತಿದೆ. ಪ್ರತಿಪಕ್ಷಗಳ ಆಧಾರರಹಿತ ಟೀಕೆಗಳಿಗೆ ಈ ಯಾತ್ರೆ ಮೂಲಕ ಉತ್ತರ ನೀಡಲಾಗುವುದು ಎಂದು ಮರಿದೇವರು ತಿಳಿಸಿದರು. ಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ನಗರಸಭೆ ಸದಸ್ಯ ಡಿ.ಕೆ.ಶಿವಕುಮಾರ್, ಮುಖಂಡರಾದ ಜಯರಾಮಯ್ಯ, ಕಾಂತರಾಜಪಟೇಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

