ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣ ತಾಲೂಕಿನಲ್ಲಿ ಬಿಜೆಪಿಗೆ ಪೂರಕ ವಾತಾವರಣ

Published On :

ಚನ್ನಪಟ್ಟಣ:  ತಾಲೂಕಿನಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿದ್ದು ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಸಾಕಷ್ಟು ಮುಖಂಡರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್ ಗೌಡ ತಿಳಿಸಿದರು.
ತಾಲೂಕಿನ ಹರೂರು ಗ್ರಾಮದಲ್ಲಿ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈಗಾಗಲೇ ಜೆಡಿಎಸ್‌ನ ಸಾಕಷ್ಟು ಮುಖಂಡರು ಬಿಜೆಪಿಗೆ ಬೆಂಬಲಿಸಲು ತುದಿಗಾಲ ಮೇಲೆ ನಿಂತಿದ್ದು ಅವರೆಲ್ಲರೂ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.
ಕುಮಾರಸ್ವಾಮಿ ಕಟ್ಟಾ ಬೆಂಬಲಿಗರು ಇದೊಂದು ಬಾರಿ ಮೋದಿ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದು, ಅವರು ನಮ್ಮ ಪಕ್ಷಕ್ಕೆ ಬಂದು ಕೆಲಸ ಮಾಡಿದರೂ ಸರಿಯೇ, ಅವರ ಪಕ್ಷದಲ್ಲೇ ಇದ್ದು ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವುದಾದರೂ ಸರಿಯೇ ನಮ್ಮ ಪಕ್ಷ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಆಹ್ವಾನ ನೀಡಿದರು.
ಸ್ವಹಿತಕ್ಕಾಗಿ ಯೋಗೇಶ್ವರ್ ಪಕ್ಷಾಂತರ: ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರ್ಪಡೆ ಗೊಳ್ಳುತ್ತಿರುವುದು ತಾಲೂಕಿನ ಅಭಿವೃದ್ಧಿಯಿಂದಲ್ಲ, ತಮ್ಮ ಸ್ವಾರ್ಥಕ್ಕಾಗಿ. ಇವರ ಪಕ್ಷಾಂತರದಿಂದ ತಾಲೂಕಿನಲ್ಲಿ ಬಿಜೆಪಿ ಪರವಾಗಿ ಎದ್ದಿರುವ ಅಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಕ್ಷೇತ್ರಕ್ಕ ಹಿಂದೆಂದೂ ನೀಡದ ಕೊಡುಗೆಯನ್ನು ಬಿಜೆಪಿ ಸರ್ಕಾರ ನೀಡಿದೆ. ಯೋಗೇಶ್ವರ್ ಬಿಜೆಪಿ ಈ ತಾಲೂಕಿಗೆ ನೀಡಿರುವ ಕೊಡುಗೆಯನ್ನು ಮರೆತಿರಬಹುದು. ಆದರೆ ತಾಲೂಕಿನ ಜನತೆ ಮರೆಯುವುದಿಲ್ಲ. 220 ಕೋಟಿ ರು. ಮೌಲ್ಯದ ಏತನೀರಾವರಿ ಯೋಜನೆ ಸೇರಿದಂತೆ ಅನುಷ್ಠಾನ ಗೊಳಿಸಿರುವ ಎಲ್ಲಾ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಜನತೆ ಬಿಜೆಪಿ ಪರ ಈ ಬಾರಿಯ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ.
ಬೂತ್ ಮಟ್ಟದಲ್ಲಿ ಕಾರ್ಯಕರ್ತ ಗೆದ್ದಾಗ ಮಾತ್ರ ದೇಶದಲ್ಲಿ ನರೇಂದ್ರ ಮೋದಿ ಗೆಲ್ಲಲು ಸಾಧ್ಯ. ಈ ಸಂಗತಿಯನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿ ಕೊಡುವ ಉದ್ದೇಶದಿಂದ ನಾವು ತಳ ಮಟ್ಟದಲ್ಲಿ ಕಾರ್ಯಕರ್ತ ಸಭೆ ಮತ್ತು ಕಾರ್ಯಾಗಾರ ನಡೆಸುತ್ತಿದ್ದೇವೆ ಎಂದು ತಿಳಿಸಿದ ಅವರು ನಾವು ಯಾವುದೇ ಕಾರಣಕ್ಕೂ ಅಬ್ಬರಕ್ಕೆ ಆಸ್ಪದ ನೀಡದೆ ಸರಳ ಮತ್ತು ಸ್ಪಷ್ಟವಾಗಿ ಪಕ್ಷದ ಕಾರ್ಯಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಮೋ ಅಲೆ: ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಕಾಂತ್‌ರೆಡ್ಡಿ, ನಮೋ ಅಲೆ ದೇಶವ್ಯಾಪಿ ಹರಡಿರುವಂತೆ ಈ ಕ್ಷೇತ್ರದಲ್ಲೂ ಹರಡಿದೆ, ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಅದಾಗಲೇ ಸಂಚಾರ ಮಾಡಿದ್ದು ಈ ಕ್ಷೇತ್ರದ ಮತದಾರರು ನಮ್ಮ ಪಕ್ಷಕ್ಕೆ ಬೆಂಬಲಿಸಲು ಉತ್ಸುಕರಾಗಿದು, ಕನಕಪುರ ತಾಲೂಕನ್ನು ಹೊರತು ಪಡಿಸಿ ಉಳಿದ 7 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಇದ್ದು ಕನಕಪುರವನ್ನು ಸರಿಪಡಿಸಲು ಪಕ್ಷದ ಹಿರಿಯ ಮುಖಂಡರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ಮುನಿರಾಜೇಗೌಡ ಪ್ರಾಮಾಣಿಕ ಅಭ್ಯರ್ಥಿಯಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಚಿಂತನೆಗಳನ್ನು ಕರಾರು ವಕ್ಕಾಗಿ ಜಾರಿಗೆ ತರಲಿದ್ದು, ಇಂತಹ ತರುಣನನ್ನು ಬೆಂಬಲಿಸಲು ಜನತೆ ಮುಂದಾಗಬೇಕೆಂದು  ಮನವಿ ಮಾಡಿದರು.
ಸಭೆಯಲ್ಲಿ ಯುವ ಘಟಕದ ಉಪಾಧ್ಯಕ್ಷ ಪರೀಕ್ಷಿತರಾಜ್ ಅರಸ್, ಬಿಜೆಪಿ ಹಿರಿಯ ಮುಖಂಡ ಮುರುಳಿ ಮೋಹನ್, ತಾಲೂಕು ಅಧ್ಯಕ್ಷ ಪುಟ್ಟಪ್ಪ, ಜಿಲ್ಲಾ ಉಪಾಧ್ಯಕ್ಷ ಹರೂರು ಶಿವಣ್ಣ, ಪುಟ್ಟರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.