ಸಿಎಂ ಸಿದ್ದರಾಮಯ್ಯರಿಂದ ನಾನು ಕಲಿಯಬೇಕಾದ್ದಿಲ್ಲ
ಕ.ಪ್ರ.ವಾರ್ತೆ ರಾಮನಗರ ಮಾ.24
ರಾಜಕೀಯವಾಗಿ ಬೆಳೆಸಿದ ಜೆಡಿಎಸ್ ಪಕ್ಷದ ಬೆನ್ನಿಗೆ ಇರಿದು, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಾಲಿಡಿದು ಕುರ್ಚಿ ಏರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನು ಕಲಿಯ ಬೇಕಾದದ್ದು ಏನೂ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಒಂದೂ ಸ್ಥಾನ ಗೆಲ್ಲದು ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸುವುದಾಗಿ ಅವರು ತಿಳಿಸಿದರು.
ಸಿದ್ದರಾಮಯ್ಯ ಸ್ವಕ್ಷೇತ್ರ ಮೈಸೂರು ಸಹಿತ ರಾಜ್ಯದಲ್ಲಿ 12-13 ಸ್ಥಾನಗಳನ್ನು ಗೆದ್ದು, ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಸಾಮರ್ಥ್ಯ ಏನೆನ್ನುವುದನ್ನು ಸಾಬೀತುಪಡಿಸಿ ತೋರಿಸಲು ಪಣ ತೊಟ್ಟಿದ್ದೇನೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ತಮ್ಮೊಂದಿಗೆ ಕೈ ಜೋಡಿಸಿ ಶಕ್ತಿ ಧಾರೆ ಎರೆಯಬೇಕು ಎಂದು ಮನವಿ ಮಾಡಿದರು.
ಭ್ರಷ್ಟರ ಅಪ್ಪುಗೆ: ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಕೋಲಾರ ಕ್ಷೇತ್ರದಲ್ಲಿ ಗೆಲ್ಲಲು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯಶೆಟ್ಟಿಯನವರ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅಧಿಕಾರಕ್ಕಾಗಿ ಭ್ರಷ್ಟ ವ್ಯವಸ್ಥೆಯನ್ನು ಅಪ್ಪಿಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಕುಮಾರಸ್ವಾಮಿ ಎದಿರೇಟು ನೀಡಿದರು.
ಬಿಜೆಪಿಯಂತೆ ಮೋದಿ, ಕಾಂಗ್ರೆಸಿಗರಂತೆ ರಾಹುಲ್ಗಾಂಧಿ ಫೋಟೋ ಹಿಡಿದು ಓಟು ಕೇಳಲು ನಾನು ಬರುತ್ತಿಲ್ಲ ಎಂದರು.
ಮತ್ತೆ ಕಣ್ಣೀರಿಟ್ಟ ಎಚ್ಡಿಕೆ
ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ವಿಷಯವಾಗಿ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಸಭೆಯಲ್ಲಿ ಕಣ್ಣೀರಿಟ್ಟು ಬೆಂಬಲಿಗರನ್ನು ಕರಗಿಸಿದ್ದ ಕುಮಾರಸ್ವಾಮಿ, ಅಭ್ಯರ್ಥಿ ಪ್ರಭಾಕರರೆಡ್ಡಿ ನಾಮಪತ್ರ ಸಲ್ಲಿಕೆಗೆ ಮುನ್ನ ಭಾಷಣದಲ್ಲೂ ಕಣ್ಣೀರು ಸುರಿಸಿ ರಾಮನಗರದ ಜತೆಗಿನ ಭಾವನಾತ್ಮಕ ಸಂಬಂಧವನ್ನು ಮೆಲಕು ಹಾಕಿದರು. ನನ್ನ ಉಸಿರು ನಿಂತರೆ ಇದೇ ರಾಮನಗರ ತಾಲೂಕಿನ ಬಿಡದಿ-ಕೇತಗಾನಹಳ್ಳಿಯಲ್ಲಿರುವ ನನ್ನ ಜಮೀನಿನಲ್ಲೇ ಮಣ್ಣಾಗುತ್ತೇನೆ. ನನಗೆ ರಾಜಕೀಯವಾಗಿ ಜನ್ಮ ನೀಡಿ, ಬೆಳೆಸಿದ ರಾಮನಗರವನ್ನು ಎಲ್ಲೇ ಹೋದರೂ ಮರೆಯಲಾರೆ. ಪ್ರಭಾಕರರೆಡ್ಡಿ ಅವರನ್ನು ಗೆಲ್ಲಿಸಿ, ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಯನ್ನು ಮಟ್ಟ ಹಾಕಿ ಎಂದರು.
ಪೊಲೀಸರ ಜತೆ ಜಟಾಪಟಿ
ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಾಗಿರುವ ಹಿನ್ನೆಲೆಯಲ್ಲಿ ಭಾಷಣ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದಾಗ ಗರಂ ಆದ ಕುಮಾರಸ್ವಾಮಿ ಜಟಾಪಟಿಗೆ ಇಳಿದರು. ಈ ನೆಲದಲ್ಲಿ ಕಾಂಗ್ರೆಸ್ ನಾಯಕರಿಗೇ ಒಂದು ಕಾನೂನು, ನನಗೇ ಒಂದು ಕಾನೂನೇ ಎಂದು ಏರು ಧ್ವನಿಯಲ್ಲಿ ಪೊಲೀಸರ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಹೆದ್ದಾರಿಯ ಇದೇ ವೃತ್ತದಲ್ಲಿ ಎರಡೂವರೆ ತಾಸು ಮೆರವಣಿಗೆ, ಭಾಷಣ ಮಾಡಿದ್ದಾರೆ. ಆಗೆಲ್ಲಾ ಟ್ರಾಫಿಕ್ ಜಾಂ ಆಗಿರಲಿಲ್ಲವೇ. ನಾನು ಬಂದು 10 ನಿಮಿಷಕ್ಕೇ ನಿಮಗೆ ತೊಂದರೆಯಾಗಿಬಿಟ್ಟೀತೆ. ನನ್ನನ್ನು ತೆರವು ಮಾಡಿಸಲು ಬೇರೆ ಯಾರಾದರೂ ಸೂಚನೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

