ಕಾಂಗ್ರೆಸ್, ಬಿಜೆಪಿಯಿಂದ ರಾಜ್ಯಕ್ಕೆ ನಿರಂತರ ಅನ್ಯಾಯ
ಕನಕಪುರ: ದೇಶವನ್ನಾಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಎಸಗಿವೆ. ತೃತೀಯ ರಂಗಮಾತ್ರ ದೇಶಕ್ಕೆ ಸುಭದ್ರ ಆಳ್ವಿಕೆ ನೀಡಬಲ್ಲದು ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಅವರು ಕನಕಪುರದ ಶ್ರೀನಿವಾಸ ಕಲ್ಯಾಣಮಂಟಪದಲ್ಲಿ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ ರೆಡ್ಡಿ ಸಂಭಾವಿತ, ಯೋಗ್ಯ ವ್ಯಕ್ತಿಯಾಗಿದ್ದು ಕನಕಪುರದ ಜನತೆ ಬೆಂಬಲಿಸಬೇಕೆಂದು ಕರೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ನಿರ್ಮೂಲನೆ ಮಾಡಲು ಆಪರೇಷನ್ ಕಾರ್ಯಾಚರಣೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿಗಳು ತಮ್ಮ ಘನತೆಯನ್ನು ತೊರೆದು ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದು ಖಂಡನೀಯ ಎಂದು ಹೇಳಿದ ದೇವೇಗೌಡ, ತಮ್ಮನ್ನು ಏಕವಚನದಲ್ಲಿ ಕರೆಯುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. 60-70 ಸ್ಥಾನಗಳನ್ನು ಗಳಿಸಲು ಕೂಡಾ ತಿಣುಕಾಡುವಂತಾಗಿದೆ ಎಂದರು.
ನೀರು ಕೊಟ್ಟಿದ್ದೇನೆ: ಕನಕಪುರ, ರಾಮನಗರಗಳಿಗೆ ಕಾವೇರಿ ನೀರು ಕೊಟ್ಟಿದ್ದು ತಾವು ಎಂಬುದನ್ನು ಮರೆತು ಬಾಲಿಷ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡರು ಇಗ್ಗಲೂರು ಬ್ಯಾರೇಜ್ನಿಂದ ಜಿಲ್ಲೆಗೆ ನೀರನ್ನು ಹರಿಸುತ್ತೇವೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತಿದ್ದಾರೆ, ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಿಲ್ಲ, ಮುಂಬರುವ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಲಿದೆ ಎಂದು ದೇವೇಗೌಡರು ನುಡಿದರು.
ಕಾವೇರಿ ನ್ಯಾಯಾಧಿಕರಣ ತೀರ್ಪಿನಲ್ಲಿ ರಾಜ್ಯಕ್ಕೆ ಅಪಾರ ಅನ್ಯಾಯವಾದಾಗ, ರಾಜ್ಯಸರ್ಕಾರ ಕೈಕಟ್ಟಿ ಕುಳಿತಾಗ ಸಂಸತ್ನಲ್ಲಿ ಮಾತನಾಡಿದ ತಾವು ತೀವ್ರ ನೋವಿನಿಂದ ಕಣ್ಣೀರು ಸುರಿಸಿದ್ದಿದೆ. ಅದನ್ನು ನಾಟಕದ ಕಣ್ಣೀರು ಎಂದು ಟೀಕಿಸುವವರಿಗೆ ಕಾವೇರಿ ಸಮಸ್ಯೆ ತೀವ್ರತೆ ಅರಿವಿದೆಯೇ ಎಂದು ದೇವೇಗೌಡರು ಟೀಕಿಸಿದರು.
ಸಮಾವೇಶದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್, ಮಾಜಿ ಶಾಸಕ ಕೆ.ರಾಜು, ನಾರಾಯಣಗೌಡ ಮೊದಲಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

