ಬೆಂಗಳೂರು ಗ್ರಾಮಾಂತರ

ರಸ್ತೆ ದುರಸ್ತಿಗೆ ಆಗ್ರಹ

Published On :

ಮಾಗಡಿ: ಗುಂಡಿಗಳಿಂದ ಕೂಡಿದ ಪಟ್ಟಣದ ತಿರುಮಲೆ ಚೌಡೇಶ್ವರಿ ಬೀದಿ ರಸ್ತೆ  ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಕೂಡಲೆ ಪುರಸಭೆ ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಪಡಿಸದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈಗಾಗಲೇ ಹತ್ತಾರು ಮಂದಿ ಬಿದ್ದು, ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಇದರಿಂದಾಗಿ ಪುರಾಡಳಿತ ನಾಗರಿಕರ ಆಕ್ರೋಶಕ್ಕೂ ಗುರಿಯಾಗಿದೆ. ಇತ್ತ ಪುರಸಭೆಗೆ ಆಯ್ಕೆಯಾದವರು ಇದೆ ರಸ್ತೆಯಲ್ಲೇ ನಿತ್ಯ ಸಂಚರಿಸುತ್ತಾರೆ. ಮತಯಾಚಿಸುವ ವೇಳೆ ಭರವಸೆಯ ಮಹಾಪೂರವೇ ಹರಿಸುವ ಸದಸ್ಯರಿಗೆ ನಮ್ಮ ಈ ಗೋಳು ಕೇಳಿಸುವುದಿಲ್ಲವೆ. ಕಳೆದ 15 ವರ್ಷಗಳಿಂದಲೂ ಒಂದು ಇಡೀ ಮಣ್ಣಾಗಲಿ ಈ ರಸ್ತೆ ಕಂಡಿಲ್ಲ. ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ. ಮಹಿಳೆಯರು ನೀರಿನ ಕೊಡ ಹೊತ್ತು ಸಂಚರಿಸಲಾಗದೆ ಬಿದ್ದು, ಎದ್ದು ನಡೆಯುತ್ತಿದ್ದಾರೆ. ಇನ್ನು ಮುಂದಾದರೂ ಪುರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸುವ ಮೂಲಕ ಡಾಂಬರೀಕರಣಕ್ಕೆ ಮುಂದಾಗಬೇಕಿದೆ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.


ಒಣಗಿದ ಮರ ತೆರವುಗೊಳಿಸಿ
ರಾಮನಗರ: ನಗರದ ಛತ್ರದ ಬೀದಿಯ ಸಂವರ್ಧನ ಶಾಲೆಯ ಕಟ್ಟಡದ ಬಳಿ ಬೃಹತ್ ಮರವೊಂದು ಸಂಪೂರ್ಣವಾಗಿ ಒಣಗಿದ್ದು, ಯಾವ ಸಮಯದಲ್ಲಾದರೂ ನೆಲಕ್ಕುರುಳುವ ಸಾಧ್ಯತೆಗಳಿವೆ. ಈ ರಸ್ತೆಯಲ್ಲಿ ಸದಾ ಜನಸಂಚಾರವಿರುತ್ತದೆ, ವಿಶೇಷವಾಗಿ ಶಾಲಾ ಮಕ್ಕಳು ಇಲ್ಲಿ ಹೆಚ್ಚು ಓಡಾಡುವವರಿದ್ದಾರೆ. ಒಣಗಿರುವ ಮರವನ್ನು ತೆರವುಗೊಳಿಸುವಂತೆ ಸ್ಥಳೀಯರು ನಗರಸಭೆಗೆ ಹಲವಾರು ಬಾರಿ ಮನವಿ ಮಾಡಿ ತಿಂಗಳುಗಳೇ ಕಳೆದರೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ನಗರಸಭೆಗೆ ಮಾತ್ರವಲ್ಲದೆ, ಅರಣ್ಯ ಇಲಾಖೆಗೂ ಲಿಖಿತ ದೂರು ನೀಡಲಾಗಿದೆ. ಮರ ನೆಲಕ್ಕುರುಳಿದರೆ ವಿದ್ಯುತ್ ತಂತಿಗಳ ಮೇಲೆ ಬೀಳುವ ಸಂಭವವಿದ್ದು, ಭಾರಿ ಅನಾಹುತ ಸಂಭವಿಸಲಿದೆ. ಬೆಸ್ಕಾಂ ಸಿಬ್ಬಂದಿಯೂ ಮರವನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಅನಾಹುತ ನಡೆಯುವ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿದ್ದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಮರವನ್ನು ತೆರವುಗೊಳಿಸಲು ಮುಂದಾಗದಿರುವುದು ದುರದೃಷ್ಟಕರ ಸಂಗತಿ. ನಾಗರಿಕರ ಪ್ರಾಣ ಮತ್ತು ಆಸ್ತಿಯ ಬಗ್ಗೆ ಕಾಳಜಿ ವಹಿಸಬೇಕಾದುದು ನಗರಸಭೆ ಅಧಿಕಾರಿಗಳ ಕರ್ತವ್ಯವಾಗಿದೆ. ಮರ ನೆಲಕ್ಕುರುಳಿ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಒಣಗಿರುವ ಮರ ತೆರವುಗೊಳಿಸಬೇಕೆಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.


ಶಸ್ತ್ರಚಿಕಿತ್ಸಕರ ನೇಮಿಸಲು ಆಗ್ರಹ
ಚನ್ನಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿಂದ ಶಸ್ತ್ರಚಿಕಿತ್ಸಕರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಸಚಿವರಿಗೆ ಈ ಬಗ್ಗೆ ಗಮನಸೆಳೆಯಲಾಗಿದ್ದರೂ ತಾಲೂಕಿನ ಜನತೆಗೆ ಸರ್ಜನ್ ಸೇವೆ ಸಿಗುತ್ತಿಲ್ಲ. ರಾಮನಗರದಲ್ಲಿ ಜಿಲ್ಲಾಆಸ್ಪತ್ರೆ ಇದೆಯಾದರೂ ಈ ಆಸ್ಪತ್ರೆಗೆ ಮೊದಲಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು, ಕಳೆದ ಆರು ತಿಂಗಳಿಂದ ಸರ್ಜನ್ ಇಲ್ಲದಿರುವುದು ರೋಗಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಶಸ್ತ್ರಚಿಕಿತ್ಸಕರು ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಶಸ್ತ್ರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯನ್ನು ಅವಲಂಭಿಸುವುದು ಅನಿವಾರ್ಯವಾಗಿದ್ದು, ಇದನ್ನೇ ಲಾಭವಾಗಿಸಿರುವ ಖಾಸಗಿ ಆಸ್ಪತ್ರೆಗಳು ಜನತೆಯಿಂದ ಸಣ್ಣ ಶಸ್ತ್ರಚಿಕಿತ್ಸೆಗೂ ದುಬಾರಿ ಹಣ ಕೀಳುತ್ತಿದ್ದು ಆರೋಗ್ಯ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಸಾರ್ವಜನಿಕ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕರನ್ನು ನೇಮಿಸಬೇಕಿದೆ.                      
ಟಿ ಕೇಶವಮೂರ್ತಿ, ಕುಂತೂರು ದೊಡ್ಡಿ




ಗೂಡಿನ ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸಿ
ರೇಷ್ಮೆ ನಾಡೆಂದು ಹೆಸರಾಗಿರುವ ರಾಮನಗರ ಜಿಲ್ಲೆಯ ರೇಷ್ಮೆಗೂಡಿನ ಮಾರುಕಟ್ಟೆಗಳು ಅವ್ಯವಸ್ಥೆಯ ಆಗರವಾಗಿವೆ ಎಂಬುದಕ್ಕೆ ಕನಕಪುರ ಗೂಡಿನ ಮಾರುಕಟ್ಟೆ ಸಾಕ್ಷಿ. ಮೂಲ ಸೌಕರ್ಯಗಳ ಕೊರತೆ, ದಳ್ಳಾಳಿಗಳ ಹಾವಳಿ, ಭದ್ರತಾ ಅವ್ಯವಸ್ಥೆಗಳಿಂದ ರೈತರು ಪರದಾಡಬೇಕಾಗಿದೆ. ಕನಕಪುರದ ಗೂಡಿನ ಮಾರುಕಟ್ಟೆಯಲ್ಲಿ ದಣಿದು ಬಂದ ರೈತರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಅವ್ಯವಸ್ಥೆ ಹೇಳತೀರದಾಗಿದೆ. ಮಾರುಕಟ್ಟೆ ಆವರಣದಲ್ಲಿ ಈ ಹಿಂದೆ ನಾಲ್ಕಾರು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಈಗ ಆಡಳಿತ ಮಂಡಳಿಯವರು ಭದ್ರತಾ ಸಿಬ್ಬಂದಿಯನ್ನು ತೆರವುಗೊಳಿಸಿರುವ ಕಾರಣ ರೈತರ ವಸ್ತುಗಳಿಗೆ, ವಾಹನಗಳಿಗೆ ಭದ್ರತೆ ಇಲ್ಲವಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಐದಕ್ಕೂ ಹೆಚ್ಚು ರೈತರ ಬೈಕ್‌ಗಳು ಕಳುವಾಗಿವೆ. ಸಂಬಂಧಪಟ್ಟವರು ಈ ಅವ್ಯವಸ್ಥೆ ಸರಿಗೊಳಿಸಲು ಪ್ರಯತ್ನಿಸುತ್ತಾರೆ ಎಂಬುದು ಸಾರ್ವಜನಿಕರ ಅಹವಾಲಾಗಿದೆ.
ಟಿ ಎಸ್. ರವಿ, ಕನಕಪುರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.