ಕ್ರಿಯಾ ಯೋಜನೆ ಕೇವಲ ಕಡತಗಳಿಗೆ ಸೀಮಿತ
ರಾಮನಗರ: ಸರ್ಕಾರದ ವಿವಿಧ ಇಲಾಖೆಗಳಿಂದ ರೂಪಿತವಾಗುವ ಕ್ರಿಯಾ ಯೋಜನೆಗಳು ಕೇವಲ ಕಡತಗಳಿಗೆ ಸೀಮಿತವಾಗುತ್ತಿವೆಯೇ ಹೊರತು ಅನುಷ್ಠಾನಗೊಳ್ಳುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಶಂಕರಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಜಿಲ್ಲಾ ಮುಖ್ಯಸ್ಥರ ಮರ್ಜಿಗೆ ಒಳಗಾಗಿರುವುದರಿಂದ ಕ್ರಿಯಾ ಯೋಜನೆಗಳ ಅನುಷ್ಠಾನ ಕೈಗೂಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಕಿಡಿ ಕಾರಿದರು.
ಅಧಿಕಾರಿಗಳು ತಮ್ಮ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸಿಬ್ಬಂದಿ ಕೊರತೆ, ವಾಹನ ಸೌಲಭ್ಯ ಇಲ್ಲದಿರುವ ಬಗ್ಗೆ ಸಮಸ್ಯೆ ತೋಡಿಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಶೇಕಡಾ ನೂರರಷ್ಟು ಜನಪರವಾಗಿ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ತಾಲೂಕಿನ 40 ಸರ್ಕಾರಿ ಶಾಲೆಗಳಲ್ಲಿ 190 ಶಿಕ್ಷಕರ ಕೊರತೆ ಇದೆ. ನೂತನ ಶೈಕ್ಷಣಿಕ ವರ್ಷದಲ್ಲಿ ಕೆಲವು ಶಾಲೆಗಳನ್ನು ತೆರೆಯಲೂ ಶಿಕ್ಷಕರಿಲ್ಲ ಎಂದು ತಮ್ಮ ಇಲಾಖೆಯ ಸಮಸ್ಯೆಗಳನ್ನು ಬಿಇಒ ತೆರೆದಿಟ್ಟರು. 18 ವರ್ಷಕ್ಕೂ ಹೆಚ್ಚು ಹಳೆಯದಾದ ವಾಹನದಲ್ಲಿ ತಾವು ಓಡಾಡಬೇಕಾಗಿದೆ. ಮೇಲಾಗಿ ಈ ವಾಹನಕ್ಕೆ ಚಾಲಕನೂ ಇಲ್ಲ. ಹೊರಗುತ್ತಿಗೆ ಚಾಲಕನನ್ನಾದರೂ ನೇಮಿಸಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ತಾಲೂಕಿನಲ್ಲಿರುವ 344 ಅಂಗನವಾಡಿ ಕೇಂದ್ರಗಳ ಮೇಲೆ ನಿಗಾವಹಿಸಲು ತಮಗೆ ವಾಹನ ವ್ಯವಸ್ಥೆ ಇಲ್ಲ ಎಂದರು. ತಮಗೂ ಸಹ ವಾಹನ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಕೆರಳಿದ ಉಪಾಧ್ಯಕ್ಷ: ಬಿಇಓ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳ ಈ ಮನವಿಗೆ ಕೆರಳಿದ ಉಪಾಧ್ಯಕ್ಷ ಕೆ.ಎಸ್.ಶಂಕರಯ್ಯ ಈ ವಿಚಾರವನ್ನು ತಮ್ಮ ಇಲಾಖೆಗಳ ಜಿಲ್ಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದೀರ ಎಂದು ಪ್ರಶ್ನಿಸಿದರು. ತಾಲೂಕು ಮಟ್ಟದ ಅಧಿಕಾರಿಗಳ ಅಂಜುಬುರುಕು ತನದಿಂದಾಗಿಯೇ ಸಮಸ್ಯೆಗಳು ಪರಿಹಾರ ಕಾಣಲಾಗುತ್ತಿಲ್ಲ. ಸದ್ಯದಲ್ಲೇ ನಡೆಯುವ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದರು.
ಆಕ್ಷೇಪ: ಇದೇ ದಿನ ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಅಂಬೇಡ್ಕರ್ ಭವನದ ಹಿಂಭಾಗ ಇರುವ ಸಾಮರ್ಥ್ಯ ಸೌಧದ ದುರಸ್ಥಿಗೆ ರು.4 ಲಕ್ಷದ ಕ್ರಿಯಾಯೋಜನೆ
ತಯಾರಿಸುವುದಾಗಿ ಸಭೆಗೆ ತಿಳಿಸಿದರು. ಇಒ ಅವರ ಪ್ರಸ್ತಾಪಕ್ಕೆ ಸದಸ್ಯ ಶಿವಪ್ರಸಾದ್ ಸಾಮರ್ಥ್ಯ ಸೌಧ ನಿರ್ಮಾಣವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ, ಇನ್ನೆಂತಹ ದುರಸ್ಥಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ ಸಾಲಿನ ಲಿಂಕ್ ಡಾಕ್ಯೂಮೆಂಟ್‌ಗಳನ್ನು ಸಭೆಯಲ್ಲಿ ಪರಿಶೀಲನೆ ನಡೆಸಿ ರೆಕಾರ್ಡ್ ಮಾಡಲಾಯಿತು. ಪ್ರಸ್ತುತ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ರು.68 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಸಭೆ ಅನುಮೋದನೆ ನೀಡಿತು. ಮುದ್ರಾಂಕ ಶುಲ್ಕದ ಮೂಲಕ ತಾ.ಪಂ. ಬಂದಿರುವ ರು.12 ಲಕ್ಷಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಹಣಕಾಸು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ವಹಿಸಿದ್ದರು. ಸದಸ್ಯೆ ಶೋಭಾ ಲಕ್ಷ್ಮಣಕುಮಾರ್, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

