ಬೆಂಗಳೂರು: ದೃಷ್ಟಿ ವಿಕಲಚೇತನ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ನೇಮಕದಲ್ಲಿ ಮೀಸಲು ಕುರಿತಂತೆ ಕೂಡಲೇ ಸ್ಪಷ್ಟ ನಿಯಮ ರೂಪಿಸಿ, ಇಲ್ಲವೇ ನ್ಯಾಯಪೀಠ ಮಧ್ಯಪ್ರವೇಶಿಸಿ ಆದೇಶ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ಈಗಾಗಲೇ ನಿಯಮ ರೂಪಿಸಿದೆ. ಆದರೆ ರಾಜ್ಯದಲ್ಲಿ ಈ ಕುರಿತಂತೆ ಸ್ಪಷ್ಟ ನಿಯಮ ಇಂದಿನವರೆಗೂ ರಚನೆಯಾಗಿಲ್ಲ. ಇದರಿಂದ ಎಲ್ಲ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ವಿಕಲಚೇತನರಿಗೆ ಮೀಸಲು ಸೌಲಭ್ಯ ಸಿಗುತ್ತಿಲ್ಲ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು.