ಇಂದು ದೆಹಲಿಗೆ ಮೇಯರ್
ಬೆಂಗಳೂರು: ನಗರದ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ನೆರವು ಪಡೆಯಲು ಮೇಯರ್ ವೆಂಕಟೇಶ್‌ಮೂರ್ತಿ ನೇತೃತ್ವದ 35ಕ್ಕೂ ಹೆಚ್ಚು ಸದಸ್ಯರು, ಅಧಿಕಾರಿಗಳ ತಂಡ ಗುರುವಾರ ದೆಹಲಿಗೆ ತೆರಳಲಿದೆ. ನಗರದಲ್ಲಿ ರೇಲ್ವೆ ಅಂಡರ್‌ಪಾಸ್ ಮತ್ತು ರೇಲ್ವೆ ಮೇಲು ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ 45 ಎಕರೆಗೂ ಹೆಚ್ಚಿನ ಜಾಗ ಹಸ್ತಾಂತರವಾಗಬೇಕಿದೆ. ಹಾಗೆಯೇ ನಗರದಲ್ಲಿರುವ ರಕ್ಷಣಾ ಇಲಾಖೆ ಜಾಗಗಳಲ್ಲಿ 45 ಎಕರೆಯನ್ನು ಪಾಲಿಕೆಗೆ ಬಿಟ್ಟುಕೊಡಬೇಕಿದೆ. ಇದಕ್ಕಾಗಿ ಪಾಲಿಕೆ ಅಧಿಕಾರಿಗಳು ಈವರೆಗೂ ಕೇಂದ್ರ ಸರ್ಕಾರದ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮೇಯರ್ ನೇತೃತ್ವದ ತಂಡ ರೇಲ್ವೆ ಸಚಿವಾಲಯ, ರಕ್ಷಣಾ ಇಲಾಖೆ ಸಚಿವಾಲಯಗಳಿಗೆ ಭೇಟಿ ನೀಡಿ ಸಮಸ್ಯೆ ವಿವರಿಸಲಿದೆ. ಇದೇ ವೇಳೆ, ನಗರದಲ್ಲಿ ಹೊಸ ಮೇಲು ಸೇತುವೆಗಳು ಮತ್ತು ಮಳೆ ಮೋರಿಗಳನ್ನು ನಿರ್ಮಿಸಲು ನರ್ಮ್ ಯೋಜನೆಯಡಿ 1200 ಕೋಟಿ ನೆರವು ಕೋರಿಕೆ ಸಲ್ಲಿಸಲು ಮೇಯರ್ ತಂಡ ಮುಂದಾಗಲಿದೆ. ಬೆಂಗಳೂರು ಪ್ರತಿನಿಧಿಸುವ ಸಂಸದರಾದ ಅನಂತಕುಮಾರ್, ಪಿ.ಸಿ. ಮೋಹನ್ ಹಾಗೂ ಡಿ.ಬಿ. ಚಂದ್ರೇಗೌಡ ಅವರು ಬಿಬಿಎಂಪಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೇಯರ್ ವೆಂಕಟೇಶ್‌ಮೂರ್ತಿ ತಿಳಿಸಿದರು.
973 ಬೋರ್‌ವೆಲ್ ನಿಷ್ಕ್ರಿಯ: ಸಿದ್ದಯ್ಯ
ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದ್ದಾರೆ. ಕಳೆದ 2 ವರ್ಷಗಳಲ್ಲಿ ನಗರದಲ್ಲಿ 1375 ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದು, ಇವುಗಳಲ್ಲಿ 973 ಬೋರ್‌ವೆಲ್‌ಗಳು ನೀರಿಲ್ಲದೆ ನಿಷ್ಕ್ರಿಯವಾಗಿವೆ. ಹೀಗಾಗಿ ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಹೊಸ ವಾರ್ಡ್‌ಗೆ 10 ಲಕ್ಷ ಹಾಗೂ ಹಳೇ ವಾರ್ಡ್‌ಗೆ 30 ಲಕ್ಷ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿವರಿಸಿದರು. ಈ ಹಣವನ್ನು ಹೊಸ ಬೋರ್‌ವೆಲ್ ಕೊರೆಸುವುದು, ಕೆಟ್ಟು ನಿಂತ ಬೋರ್‌ಗಳನ್ನು ದುರಸ್ತಿಗೊಳಿಸುವುದು ಹಾಗೂ ಟ್ಯಾಂಕರ್‌ಗಳಿಂದ ನೀರು ಪೂರೈಸುವುದಕ್ಕೂ ಬಳಸಲಾಗುವುದು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ
ದೇವನಹಳ್ಳಿ: ಇಲ್ಲಿನ ಪುರಸಭೆಯ 19ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮೀ ವೆಂಕಟೇಶ್ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಜಿಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಬಿ.ರಾಜಣ್ಣ ಮಾತನಾಡಿ, ವೆಂಕಟೇಶ್ ಕಾರಣಾಂತರದಿಂದ ಇತರ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರು. ಈಗ ಮಾತೃಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು. ಶಾಸಕ ವೆಂಕಟಸ್ವಾಮಿ, ಮುಖಂಡರಾದ ಸಿ.ಜಗನ್ನಾಥ್, ಎ.ಚಿನ್ನಪ್ಪ, ಎನ್.ರಘು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

