ಕ.ಪ್ರ.ವಾರ್ತೆ ಬೆಂಗಳೂರು ನ. 13-
ಹಳೇ ಕಟ್ಟಡದ ಗೋಡೆ ಕೆಡುವುತ್ತಿದ್ದ ಕಾರ್ಮಿಕರ ಮೇಲೆ ಗೋಡೆ ಬಿದ್ದು ಓರ್ವ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ವಾಲ್ಮೀಕಿನಗರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಅಲಂ (26) ಮೃತ ದುರ್ದೈವಿ. ರಫಿಕ್ ಉಲ್ಲಾ (60)ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ನಗರದ ಪುಲಕೇಶಿನಗರದಲ್ಲಿ ವಾಸಿಸುತ್ತಿದ್ದರು.
ಮೊದಲನೇ ಮಹಡಿ ಗೋಡೆ ಕೆಡವಲು ಗುತ್ತಿಗೆ ಪಡೆದುಕೊಂಡಿದ್ದರು. ಬುಧವಾರ ಮಧ್ಯಾಹ್ನ ಚಾವಣಿ ಕೆಡವಿದ ಬಳಿಕ ಗೋಡೆ ಕೆಡವುತ್ತಿರುವಾಗ ಏಕಾಏಕಿ ಗೋಡೆ ಕುಸಿದು ಇಬ್ಬರ ಮೇಲೆ ಬಿದ್ದಿದೆ. ಗಾಯಗೊಂಡಿದ್ದ ಇಬ್ಬರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅಲಂ ಮೃತಪಟ್ಟಿದ್ದಾರೆ. ರಫೀಕ್ ಭುಜ, ಕೈಗಳಿಗೆ ತೀವ್ರ ಪೆಟ್ಟಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.