ಕೈ ಪಾಳಯದಲ್ಲಿ ಪಟಾಕಿ ರಾಜಕಾರಣ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 4
ತಮಗೆ ಟಿಕೆಟ್ ಸಿಕ್ಕಿದೆ ಎಂದು ಒಬ್ಬ ಆಕಾಂಕ್ಷಿಯ ಬೆಂಬಲಿಗರು ಪಟಾಕಿ ಸಿಡಿಸಿದರೆ, ಆತನ ಪ್ರತಿಸ್ಪರ್ಧಿ ಟಿಕೆಟ್ ಪಡೆಯಲು ದೆಹಲಿ, ಬೆಂಗಳೂರಿಗೆ ದೌಡಾಯಿಸುತ್ತಾನೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಾಡು ಇದು. ಹೀಗಾಗಿ, ಇಲ್ಲೀಗ ಪಟಾಕಿ ರಾಜಕಾರಣ ಶುರುವಾಗಿದೆ.
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ನಗರ ಸಾಕಷ್ಟು ಕುತೂಹಲ ಕೆರಳಿಸಿದೆ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯ ಸಾಧಿಸಿದ್ದ ಬಳ್ಳಾರಿಯನ್ನು ಮತ್ತೆ ಕೈಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ನೇರ ದೃಷ್ಟಿ ಸಂಭಾವ್ಯ ಅಭ್ಯರ್ಥಿಗಳತ್ತ ನೆಟ್ಟಿದೆ.
ಪಟಾಕಿ ಸಿಡಿಸಿದರೆ ದೆಹಲಿಗೆ ದೌಡು
ಬಳ್ಳಾರಿ ನಗರ ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಚಿವ ಎಂ. ದಿವಾಕರಬಾಬು, ಕೆ.ಸಿ. ಕೊಂಡಯ್ಯ, ಸಂಸದ ಅನಿಲ್ ಲಾಡ್, ಇಕ್ಬಾಲ್ ಅಹಮ್ಮದ್ ಹೊತ್ತೂರು ಹಾಗೂ ಜೆ.ಎಸ್. ಆಂಜನೇಯಲು ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಹಲವು ದಿನಗಳ ಹಿಂದೆ ದಿವಾಕರಬಾಬು ಬೆಂಬಲಿಗರು ತಮ್ಮ ನಾಯಕನಿಗೇ ಟಿಕೆಟ್ ಸಿಕ್ಕಿದೆ ಎಂದು ಪಟಾಕಿ ಹೊಡೆದರು. ಇದು ಉಳಿದ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿತು. ದೆಹಲಿ, ಬೆಂಗಳೂರಿಗೆ ದೌಡಾಯಿಸಿ ಟಿಕೆಟ್‌ಗಾಗಿ ಲಾಬಿ ನಡೆಸಿದರು. ಆದರೆ ಸೋಮವಾರ ಜೆ.ಎಸ್. ಆಂಜನೇಯಲು ಬೆಂಬಲಿಗರು ಪಟಾಕಿ ಸಿಡಿಸಿ, ದಿವಾಕರಬಾಬು ಬಳಗದಲ್ಲಿ ಆತಂಕ ಮೂಡಿಸಿದ್ದಾರೆ. ಹೀಗಾಗಿ, ಬಳ್ಳಾರಿ ಮಹಾನಗರ ಪಾಲಿಕೆಯ 26 ಸದಸ್ಯರ ಸೈನ್ಯ ಕಟ್ಟಿಕೊಂಡು ದಿವಾಕರಬಾಬು ದೆಹಲಿಗೆ ಹಾರಿದ್ದಾರೆ.
ಹೆಚುತ್ತಿರುವ ಲಾಬಿ
ಹತ್ತು ವರ್ಷಗಳ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುತ್ತಿರುವುದು ಈ ಎಲ್ಲ ಬೆಳವಣಿಗೆಗೆ ಕಾರಣ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಟಿಕೆಟ್‌ಗಾಗಿ ಲಾಬಿ ಇತ್ತು. ಸ್ಥಳೀಯ ಸಂಸ್ಥೆಗಳ ಫಲಿತಾಂಶದಿಂದ ಉಲ್ಲಸಿತರಾಗಿರುವ ಕಾಂಗ್ರೆಸಿಗರು ಇನ್ನಷ್ಟು ಹುರುಪಿನಿಂದ ಕಣಕ್ಕೆ ಧುಮುಕುತ್ತಿದ್ದಾರೆ. ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿ ಹೈಕಮಾಂಡ್ ಇದೆ. ರಾಜ್ಯ ಹಾಗೂ ಕೇಂದ್ರ ನಾಯಕರಿಗೂ ಇದೇ ತಲೆನೋವು. ಯಾರಿಗೆ ಟಿಕೆಟ್ ಕೊಟ್ಟರೂ ಮಿಕ್ಕವರು ಬಂಡಾಯ ಏಳುವುದು ಖಂಡಿತ ಎಂಬ ಸ್ಥಿತಿ ಇರುವುದೇ ಇದಕ್ಕೆ ಕಾರಣ.
ಪಾಲಿಕೆ ಸದಸ್ಯರಿಗೆ ಜೋತು ಬಿದ್ದರು
ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ 26 ಸದಸ್ಯರನ್ನು ಮುಂದಿಟ್ಟುಕೊಂಡು ತಮ್ಮ ಪ್ರಾಬಲ್ಯ ತೋರಿಸಲು ಟಿಕೆಟ್ ಆಕಾಂಕ್ಷಿಗಳು ಮುಂದಾಗಿದ್ದಾರೆ. ದಿವಾಕರಬಾಬು ಮೊದಲಿನಿಂದಲೂ ಪತ್ರಿಕಾಗೋಷ್ಠಿಯಲ್ಲಿ ಈ ಸದಸ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪರೋಕ್ಷವಾಗಿ ತಮ್ಮ ಬಲ ತೋರಿಸುತ್ತಿದ್ದಾರೆ.
ಬಹುತೇಕ ಟಿಕೆಟ್ ಆಕಾಂಕ್ಷಿಗಳೂ ಈ ತಂತ್ರವನ್ನೇ ಅನುಸರಿಸಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್ ಗೆಲುವಿಗೆ ತಾವೇ ಕಾರಣ ಎಂದು ಅನಿಲ್ ಲಾಡ್ ಮತ್ತಿತರ ಆಕಾಂಕ್ಷಿಗಳು ಹೈಕಮಾಂಡ್‌ಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ. ಟಿಕೆಟ್ ಯಾರಿಗೆ ಎಂಬುದು ಮಾತ್ರ ಇನ್ನೂ ನಿಗೂಢ.
ಟಿಕೆಟ್ ಸಿಗುವ ಮೊದಲೇ ಹೀಗೆ ಪಟಾಕಿ ಸಿಡಿಸುತ್ತಾರೆ. ಇನ್ನು ಟಿಕೆಟ್ ಸಿಕ್ಕು, ಬಹುಮತದಿಂದ ಗೆದ್ದರೆ ಇವರನ್ನು ಹಿಡಿಯುವುದು ಸಾಧ್ಯವೇ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

