ಸುದ್ದಿ ಸಂಕ್ಷೇಪ್ಙ
ಬಳ್ಳಾರಿ: ಸಾರ್ವಜನಿಕ ಶಿಕ್ಷಣ ಇಲಾಖೆಯು 2012-13ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಏ. 6ರಂದು ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಏ. 14ರಂದು ಪ್ರೌಢ ಶಾಲೆಗಳಲ್ಲಿ ಏರ್ಪಡಿಸಲಾಗಿದೆ ಎಂದು ಡಿಡಿಪಿಐ ಟಿ. ನಾರಾಯಣಗೌಡ ತಿಳಿಸಿದ್ದಾರೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮುದಾಯದ ಭಾಗವಹಿಸುವಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಮಕ್ಕಳ ಕಲಿಕೆ ಬಗ್ಗೆ ಪೋಷಕರು ಗಮನಹರಿಸಬೇಕು. ಎಲ್ಲ ಮಕ್ಕಳು ಶಾಲೆಗೆ ಬರುವಂತಾಗಬೇಕು ಹಾಗೂ ಗುಣಮಟ್ಟದ ಕಲಿಕೆ ಸಾಧಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳ ಪಾಲಕ ಪೋಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ವಾರ್ಷಿಕ ಪ್ರಗತಿಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿ: ಓರ್ವ ಡಿಬಾರ್
ಹೊಸಪೇಟೆ: ಇಲ್ಲಿನ ಪಟೇಲ್ ಹೈಸ್ಕೂಲ್ನ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ಓರ್ವ ವಿದ್ಯಾರ್ಥಿ ಡಿಬಾರ್ ಆಗಿರುವ ಘಟನೆ ಶುಕ್ರವಾರ ನಡೆದಿದೆ. ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ (ಇಂಗ್ಲಿಷ್) ಪರೀಕ್ಷೆ ಬರೆಯುತ್ತಿದ್ದ ವೇಳೆ ತಾಲೂಕು ಮಟ್ಟದ ಮತ್ತು ಅಂತರ್ ಜಿಲ್ಲಾ ಮಟ್ಟದ ಜಾಗೃತಿ ದಳದ ಮುಖ್ಯಸ್ಥರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ನಕಲು ಮಾಡುತ್ತಿದ್ದ ಓರ್ವ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಡಿಬಾರ್ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ತಿಳಿಸಿದ್ದಾರೆ.
ರು. 6 ಲಕ್ಷ ವಶ
ಹೊಸಪೇಟೆ: ಅಧಿಕೃತ ದಾಖಲೆಗಳು ಇಲ್ಲದೆ ಕಾರೊಂದರಲ್ಲಿ ರು. 6 ಲಕ್ಷ ಸಾಗಿಸುತ್ತಿದ್ದ ವೇಳೆ ಹೊಸಪೇಟೆ ಗ್ರಾಮೀಣ ಠಾಣಾ ಪೊಲೀಸರು ತಾಲೂಕಿನ ಮಲಪನಗುಡಿ ಗ್ರಾಮದ ಸಮೀಪದ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದಿಂದ ಗಫೂರ್ಸಾಬ್ ತಾತ ಅವರು ಹೊಸ ಕಾರು ಖರೀದಿಗಾಗಿ ಹೊಸಪೇಟೆ ನಗರಕ್ಕೆ ಕಾರ್ನಲ್ಲಿ ಬರುವಾಗ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಶೋಧಿಸಿದ್ದಾರೆ. ಆಗ ಹಣ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪೊಲೀಸರು ತೋರಿಸಿ ಎಂದಾಗ ದಾಖಲೆಗಳು ಇಲ್ಲದ ಕಾರಣ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರು. 50 ಸಾವಿರಗಳಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗುವಂತಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಉಂಟಾದ ಹಿನ್ನೆಲೆಯಲ್ಲಿ ರು. 6 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಣಿ ಬೇಟೆಗೆ ನಿಷೇಧ
ಬಳ್ಳಾರಿ: ಯುಗಾದಿ ಹಬ್ಬವನ್ನು ಯಾವುದೇ ವನ್ಯಜೀವಿ ಹತ್ಯೆ ಮಾಡದೆ ಶಾಂತಿಯುತವಾಗಿ ಆಚರಿಸುವ ಸಲುವಾಗಿ ಜಿಲ್ಲಾದ್ಯಂತ ವನ್ಯಜೀವಿ ಬೇಟೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಅರಣ್ಯ ವಲಯಗಳಲ್ಲಿ ವನ್ಯಜೀವಿ ಬೇಟೆಯಾಡುವ ಸಂಭವವಿರುವುದರಿಂದ ಈ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಏ. 8ರಿಂದ ಏ. 15ರವರೆಗೂ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅರಣ್ಯ ಮತ್ತು ವನ್ಯ ಜೀವಿಗಳ ವಲಯದಲ್ಲಿ ಜನ ಸಂಚಾರ, ಗುಂಪುಗೂಡಿ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಯಾವುದೇ ವ್ಯಕ್ತಿ ಶಸ್ತ್ರ, ಬಡಿಗೆ, ಬರ್ಚಿ ಬಂದೂಕು ಅಥವಾ ಮಾರಣಾಂತಿಕ ವಸ್ತುಗಳನ್ನು, ಸ್ಪೋಟಕ ವಸ್ತುಗಳನ್ನು ಒಯ್ಯವುದು ನಿಷೇಧಿಸಿದೆ. ಮಾರಣಾಂತಿಕ ವಸ್ತುಗಳನ್ನಿಟ್ಟುಕೊಂಡು ತಿರುಗಾಡಿದರೆ, ಕೂಡಲೇ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಂದು ಶೈಕ್ಷಣಿಕಚಟುವಟಿಕೆ ಸಮಾರೋಪ
ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘ, ವೀರಶೈವ ಮಹಾವಿದ್ಯಾಲಯ ಜಂಟಿಯಾಗಿ 2012-13ನೇ ಶೈಕ್ಷಣಿಕ ವರ್ಷದ ಸರ್ವ ಸಂಘಗಳ ಸಮಾರೋಪ ಸಮಾರಂಭ ಏ. 6ರಂದು ಸಂಜೆ 5.30ಕ್ಕೆ ನಗರದ ವೀರಶೈವ ಕಾಲೇಜಿನ ಆವರಣದಲ್ಲಿ ಏರ್ಪಡಿವೆ. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆವಹಿಸಲಿದ್ದಾರೆ. ವೀ.ವಿ. ಸಂಘದ ಮಾಜಿ ಅಧ್ಯಕ್ಷ ಕೋಳೂರು ಬಸವನಗೌಡ, ಮಾಜಿ ಕಾರ್ಯದರ್ಶಿ ಅಲ್ಲಂ ದೊಡ್ಡಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ, ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕೋಶಾಧಿಕಾರಿ ಸಂಗನಕಲ್ ಹೀಮಂತರಾಜ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ. ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: ಇಂದು ನೀರುಪೂರೈಕೆಯಲ್ಲಿ ವ್ಯತ್ಯಯ
ಬಳ್ಳಾರಿ: ನಗರದ ಅಲ್ಲೀಪುರ ಕೇಂದ್ರ ಸ್ಥಾವರದಿಂದ ಮದರ್ ಟ್ಯಾಂಕ್ಗೆ ಪೂರೈಕೆ ಮಾಡುತ್ತಿದ್ದ 900 ವ್ಯಾಸದ ಪಿಎಸ್ಸಿ ನೀರಿನ ಪೈಪ್ ಸೋರುತ್ತಿದ್ದು, ಏ. 6ರಂದು ಈ ಪೈಪಿನ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರಕ್ಕೆ ಏ. 6 ಮತ್ತು 7ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಜಲಮಂಡಳಿ ಮತ್ತು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

