86 ಸಾವಿರ ಮತದಾರರ ಹೆಚ್ಚಳ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 23
ಐದು ವರ್ಷಗಳ ಅವಧಿಯಲ್ಲಿ 86 ಸಾವಿರ ಮತದಾರರು ಜಿಲ್ಲೆಯಲ್ಲಿ ಹೆಚ್ಚಳವಾಗಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಮತದಾರರ ಪಟ್ಟಿಯಲ್ಲಿ ಮಂಗಳಮುಖಿಯರಿಗಾಗಿ ಪ್ರತ್ಯೇಕ ಸಂಖ್ಯೆಯನ್ನು ಗುರುತಿಸಿ, ಇತರೆ ಎಂಬ ಪಟ್ಟಿಯಲ್ಲಿ ಸೇರಿಸುವ ಮೂಲಕ ಮಂಗಳಮುಖಿಯರಿಗೂ ಪ್ರಾಶಸ್ತ್ಯ ನೀಡಲಾಗಿದೆ.
ಈ ಮೊದಲು ಮತದಾರರ ಸಂಖ್ಯೆಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಜಿಲ್ಲಾಡಳಿತ ಪುರುಷ ಮತ್ತು ಮಹಿಳಾ ಮತದಾರರೆಂದು ಗುರುತಿಸಿತ್ತು. ಆದರೆ 2011ರ ಸುಪ್ರೀಂ ಕೋರ್ಟ್ ಆದೇಶದಂತೆ ಮತದಾರರ ಪಟ್ಟಿಯಲ್ಲಿ ಇತರೆ ಎಂದು ಸೇರಿಸುವ ಮೂಲಕ ಮಂಗಳಮುಖಿ ಮತದಾರರ ಸಂಖ್ಯೆ ನಮೂದಿಸುವ ಮೂಲಕ ಮಂಗಳಮುಖಿಯರಿಗೆ ಸ್ಥಾನ ಒದಗಿಸಿ ಕೊಟ್ಟಿದ್ದಾರೆ. ಈ ಮೊದಲು ಮಂಗಳಮುಖಿ ಮತದಾರರಿದ್ದರೂ, ಪುರುಷ ಅಥವಾ ಮಹಿಳಾ ಸಂಖ್ಯೆಯಲ್ಲಿ ಸೇರಿಸುತ್ತಿದ್ದರು. ಇದೀಗ ಪ್ರತ್ಯೇಕವಾಗಿ ಮಂಗಳಮುಖಿಯರಿಗೆ ಇತರೆ ಪಟ್ಟಿಯನ್ನು ತಯಾರಿಸುವ ಮೂಲಕ ಅವರಿಗೆ ಪ್ರಾಶಸ್ತ್ಯವನ್ನು ಚುನಾವಣೆ ಆಯೋಗ ನೀಡಿದೆ.
99 ಮಂಗಳಮುಖಿ ಮತದಾರರು: ಬಳ್ಳಾರಿ ಜಿಲ್ಲೆಯಲ್ಲಿ 99 ಮಂಗಳಮುಖಿ ಮತದಾರರಿದ್ದಾರೆ. ಬಳ್ಳಾರಿ ಗ್ರಾಮೀಣದಲ್ಲಿ 5 ಜನ, ಬಳ್ಳಾರಿ ನಗರದಲ್ಲಿ 7, ಹಡಗಲಿಯಲ್ಲಿ 2, ಹಗರಿಬೊಮ್ಮನಹಳ್ಳಿಯಲ್ಲಿ 10, ಕಂಪ್ಲಿಯಲ್ಲಿ 8, ಕೂಡ್ಲಿಗಿಯಲ್ಲಿ 6, ಸಂಡೂರಿನಲ್ಲಿ 23, ಸಿರುಗುಪ್ಪದಲ್ಲಿ 5 ಹಾಗೂ ವಿಜಯನಗರದಲ್ಲಿ 33 ಮಂಗಳಮುಖಿ ಮತದಾರರು ಇದ್ದಾರೆ. ಹೊಸಪೇಟೆ ನಗರದಲ್ಲೇ ಅತಿಹೆಚ್ಚು ಮಂಗಳಮುಖಿಯರು ಇದ್ದಾರೆ. ಈ ಮುಂಚೆ ಮಂಗಳಮುಖಿಯರಿಗೆ ಮತದಾನ ಮಾಡುವ ಹಕ್ಕಿದ್ದರೂ ಪ್ರತ್ಯೇಕವಾಗಿ ಗುರುತಿಸುತ್ತಿರಲ್ಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಗಳಮುಖಿಯರಿಗೆ ಮತದಾರರ ಸಂಖ್ಯೆಗಳ ಪಟ್ಟಿಯಲ್ಲಿ ಇತರೆ ಎಂದು ನಮೂದಿಸಿ ಆದ್ಯತೆ ನೀಡಿರುವುದು ವಿಶೇಷ.
ಕಡಿಮೆಯಾದ ಮಹಿಳಾ ಮತದಾರರು: ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ, 2008ಕ್ಕೆ ಹೋಲಿಸಿಕೊಂಡರೆ ತೀರಾ ಕಡಿಮೆಯಾಗಿದೆ. 2008ರಲ್ಲಿ ಬಳ್ಳಾರಿ ಗ್ರಾಮೀಣದಲ್ಲಿ ಪುರುಷರಿಗಿಂತ 1242 ಮಹಿಳಾ ಮತದಾರರು ಹೆಚ್ಚಿದ್ದರೆ, ಈ ಬಾರಿ ಕೇವಲ 601 ಮತದಾರರು ಹೆಚ್ಚಾಗಿದ್ದಾರೆ. ಇನ್ನು 2008ರಲ್ಲಿ ಕಂಪ್ಲಿ ಕ್ಷೇತ್ರದಲ್ಲಿ 2,569 ಮಹಿಳಾ ಮತದಾರರು ಹೆಚ್ಚಿದ್ದರೆ, ಈ ಬಾರಿ ಕೇವಲ 8 ಹೆಚ್ಚಿದೆ.
ಅದರೆ ಸಿರುಗುಪ್ಪ ಕ್ಷೇತ್ರದಲ್ಲಿ 2008ರಲ್ಲಿ 4,540 ಮಹಿಳಾ ಮತದಾರರಿದ್ದರೆ, 2013ರಲ್ಲಿ 2,386 ಹೆಚ್ಚಿನ ಮಹಿಳಾ ಮತದಾರರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದರೂ ಅದು ತೀರಾ ಕಡಿಮೆಯಾಗಿದೆ. 2008ರಲ್ಲಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ 5,270 ಹೆಚ್ಚಿನ ಪುರುಷ ಮತದಾರರಿದ್ದರೆ, 2013ರಲ್ಲಿ 13,529ಕ್ಕೆ ಏರಿಕೆಯಾಗಿದೆ. ಒಟ್ಟಾರೆ 2008ಕ್ಕೆ ಹೊಲಿಸಿದರೆ 2013ರಲ್ಲಿ ಮಹಿಳಾ ಮತದಾರರು ಕಡಿಮೆಯಾಗಿದ್ದಾರೆ.
86 ಸಾವಿರ ಹೆಚ್ಚಳ: 2008ರಲ್ಲಿ 14,87,586 ಮತದಾರರಿದ್ದರೆ, 2013ರಲ್ಲಿ 15,74,030 ಮತದರಾರಿದ್ದಾರೆ. ಅಂದರೆ ಈ ಬಾರಿ ಒಟ್ಟು 86,444 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲಿ 47,302 ಪುರುಷ, 39,043 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಸಂಖ್ಯೆ ಗಣನೀಯ ಇಳಿಕೆ ಕಂಡಿದ್ದು ಆಶ್ಚರ್ಯ ಮೂಡಿಸಿತ್ತು. ಕಾರಣ ಬೋಗಸ್ ಓಟು ಹೆಚ್ಚಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಕಡೆ ಇರುವ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಮತದಾರರ ಸಂಖ್ಯೆ ಏರಿಕೆ ಕಂಡಿದೆ.
86 ಸಾವಿರ ಮತದಾರರು ಈ ಬಾರಿ ಹೆಚ್ಚಳವಾಗಿದ್ದಾರೆ. ಸ್ವೀಪ್ ಯೋಜನೆಯ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಮಂಗಳಮುಖಿಯರನ್ನು ಮತದಾರರ ಸಂಖ್ಯೆಯಲ್ಲಿ ಸೇರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಇತರೆ ಎಂದು ಸೇರಿಸಿ, ಅದರಲ್ಲಿ ಮಂಗಳಮುಖಿ ಮತದಾರರ ಸಂಖ್ಯೆಯಲ್ಲಿ ಸೇರಿಸಲಾಗಿದೆ.
ಣ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಚುನಾವಣಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

