ಹಾಡಹಗಲೇ ದರೋಡೆ, ಕೊಲೆ
ಕೊಟ್ಟೂರು: ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ದರೋಡೆಕೋರರ ತಂಡವೊಂದು ನಿವೃತ್ತ ಶಿಕ್ಷಕರೊಬ್ಬರನ್ನು ಬೀಭತ್ಸವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಸರ್ಕಾರಿ ಆಸ್ಪತ್ರೆ ಹಿಂಭಾಗದ ಪ್ರದೇಶದಲ್ಲಿ ಸೋಮವಾರ ಜರುಗಿದೆ.
ದರೋಡೆಕೋರರ ಕುಕೃತ್ಯಕ್ಕೆ ಪ್ರಾಣತೆತ್ತ ನತದೃಷ್ಟ ನಿವೃತ್ತ ಶಿಕ್ಷಕನನ್ನು ಜವಳಿ ರಾಜಣ್ಣ (65) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಸೋಮವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆ ಹಿಂಭಾಗ ಪ್ರದೇಶದ ಮೊದಲ ಅಂತಸ್ತಿನ ಮನೆಯಲ್ಲಿ ವಾಸವಿದ್ದ ಜವಳಿ ರಾಜಣ್ಣ ತಮ್ಮ ಪುತ್ರಿ, ಶಿಕ್ಷಕಿ ಶಾಂಭವಿ ಮತ್ತು ಪತ್ನಿ ಭಾಗ್ಯಮ್ಮ ಅವರನ್ನು ಸಮೀಪದ ಅಲಬೂರು ಶಾಲೆಗೆ ಸೇವೆಗೆಂದು ಕಾರಿನಲ್ಲಿ ಕಳುಹಿಸಿ ವಾಪಸ್ಸಾಗಿ ಸೋಫಾದಲ್ಲಿ ಮಲಗಿ ಟಿವಿ ವೀಕ್ಷಿಸುತ್ತಿದ್ದರು. ದರೋಡೆಕೋರರ ತಂಡ ಹಠಾತ್ ಮನೆಗೆ ನುಗ್ಗಿ ಶಿಕ್ಷಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದೆ.
ಆಗ ರಾಜಣ್ಣ ಪ್ರತಿರೋಧವೊಡ್ಡಲು ಮುಂದಾಗುತ್ತಿದ್ದಂತೆಯೇ ಕಳ್ಳರು ರಾಜಣ್ಣರ ತಲೆ ಮತ್ತು ಹೊಟ್ಟೆ, ಕುತ್ತಿಗೆ ಭಾಗಕ್ಕೆ ಚುಚ್ಚಿ ಕೊಲೆಗೈದಿದ್ದಾರೆ. ನಂತರ ಮನೆಯಲ್ಲಿನ ಗೋದ್ರೆಜ್ ಮತ್ತಿತರೆ ಅಲ್ಮೇರಾಗಳನ್ನು ಮುರಿದು ಅದರಲ್ಲಿದ್ದ 25 ತೊಲೆ ಬಂಗಾರ, ರು. 1 ಲಕ್ಷಕ್ಕೂ ಹೆಚ್ಚು ನಗದು ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ 11.30ರ ಸುಮಾರಿಗೆ ಮನೆ ಕೆಲಸಕ್ಕೆಂದು ಬಂದ ಮಹಿಳೆ ಒಳಪ್ರವೇಶಿಸುತ್ತಿದ್ದಂತೆಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿವೃತ್ತ ಶಿಕ್ಷಕರ ಶವ ಕಂಡಾಗಲೇ ಕೃತ್ಯ ಬಯಲಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಿ.ಡಿ. ಗಜಕೋಶ, ಸಿಪಿಐ ಕಲ್ಲೇಶಪ್ಪ, ಪಿಎಸ್ಐಗಳಾದ ಗುರುರಾಜ್ ಮೈಲಾರ, ಎರ್ರಿಸ್ವಾಮಿ, ನವೀನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ವ್ಯಾಪಕ ಪರಿಶೀಲನೆ ಕೈಗೊಂಡಿದ್ದಾರೆ.
ತನಿಖೆ ಆರಂಭ: ಪಟ್ಟಣದಲ್ಲಿ ನಡೆದಿರುವ ರಾಜಣ್ಣ ಅವರ ಕೊಲೆ ಮತ್ತು ಮನೆ ದರೋಡೆ ಪ್ರಕರಣ ಭೇದಿಸಲು ತಕ್ಷಣ ಸಿಪಿಐಗಳಾದ ವಿ.ಎಚ್. ವಿಜಯಕುಮಾರ್, ಕೂಡ್ಲಿಗಿ ಸಿಪಿಐ ಕಲ್ಲೇಶಪ್ಪ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದೇವೆ. ವಿಜಯಕುಮಾರ್ ನೇತೃತ್ವದ ತಂಡದಲ್ಲಿ ಕೊಟ್ಟೂರು ಪಿಎಸ್ಐ, ಹೊಸಳ್ಳಿ ಪಿಎಸ್ಐ ಇರುತ್ತಾರೆ. ಕೂಡ್ಲಿಗಿ ಸಿಪಿಐ ಕಲ್ಲೇಶಪ್ಪ ನೇತೃತ್ವದ ತಂಡದಲ್ಲಿ ಕೂಡ್ಲಿಗಿ ಮತ್ತು ಗುಡೇಕೋಟೆ ಪಿಎಸ್ಐಗಳು ಇದ್ದು, ತನಿಖೆ ಆರಂಭಿಸಿದ್ದಾರೆ. ಕೆಲ ಮಾಹಿತಿಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಡಿವೈಎಸ್ಪಿ ಗಜಕೋಶ ತಿಳಿಸಿದರು.
ಶವಪರೀಕ್ಷೆಗಾಗಿ ಧರಣಿ: ಸರ್ಕಾರಿ ಅಸ್ಪತ್ರೆಗೆ ಸಂಜೆ 4ಕ್ಕೆ ಶವವನ್ನು ಸಂಬಂಧಿಕರು ಶವ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಕಾರಣಕ್ಕೆ ಇದುವರೆಗೂ ಶವ ಪರೀಕ್ಷೆ ಮಾಡಿಲ್ಲ. ಇದರಿಂದ ರೊಚ್ಚಿಗೆದ್ದ ರಾಜಣ್ಣ ಸಂಬಂಧಿಕರು ಮತ್ತು ಪಟ್ಟಣದ 500ಕ್ಕೂ ಹೆಚ್ಚು ಸಾರ್ವಜನಿಕರು ಆಸ್ಪತ್ರೆ ಎದುರು ಧರಣಿ ನಡೆಸಿದರು. ವೈದ್ಯರ ನಿರ್ಲಕ್ಷ್ಯಕ್ಕೆ ಜನತೆ ಖಂಡನೆ ವ್ಯಕ್ತಪಡಿಸಿದರು. ಡಿಎಚ್ಒ, ಟಿಎಚ್ಒ ಮತ್ತು ಶಾಸಕರಿಗೆ ಈ ಕುರಿತು ದೂರವಾಣಿ ಮೂಲಕ ತಿಳಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಜನತೆ ಅಸಮಾಧಾನಗೊಂಡಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

