ವಾರದೊಳಗೆ ಕೊಲೆ ಪ್ರಕರಣ ಬಯಲು
ಕೊಟ್ಟೂರು: ಕೊಟ್ಟೂರು ಭಾಗದ ಜನತೆಯ ನೆಮ್ಮದಿ ಕೆಡಿಸಿದ್ದ ನಿವೃತ್ತ ಶಿಕ್ಷಕ ಜವಳಿ ರಾಜಣ್ಣ ಕೊಲೆ ಮತ್ತು ಮನೆಯ ಭಾರೀ ಪ್ರಮಾಣದ ಕಳ್ಳತನ ಪ್ರಕರಣವನ್ನು ಇಲ್ಲಿನ ಪೊಲೀಸರು ವಾರದೊಳಗೆ ಭೇದಿಸುವ ಮೂಲಕ ಜನತೆಯ ನೆಮ್ಮದಿಗೆ ಕಾರಣರಾಗಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಡ್ಲಿಗಿ ಡಿವೈಎಸ್‌ಪಿ ಪಿ.ಡಿ. ಗಜಕೋಶ, ಪ್ರಕರಣದ ಬೆನ್ನುಹತ್ತಿ ಪೊಲೀಸ್ ಕಾರ್ಯಾಚರಣೆ ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಎಂ. ಕರಿಬಸಪ್ಪ (37), ಕಾರ್ ಚಾಲಕ ಎನ್.ಬಿ. ಸಂತೋಷ್ (33), ಬ್ಯೂಟಿಪಾರ್ಲರ್ ಕೆಲಸಗಾರ್ತಿ ಎಂ. ಚಂದ್ರಕಲಾ (25), ಭದ್ರಾವತಿ ಮೂಲದ ಜ್ಯುವೆಲರಿ ಶಾಪ್‌ನ ಮಾಲೀಕ ಎಂ. ಕುಮಾರ್ (30) ಎಂಬ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ರಾಜಣ್ಣನವರಿಗೆ ಸೇರಿದ್ದ ರು. 4.80 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ, ರು. 11 ಸಾವಿರ ಮೌಲ್ಯದ 290 ಗ್ರಾಂ ಬೆಳ್ಳಿ ಒಡವೆ ಮತ್ತು ರು. 1 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.
ಹಿನ್ನೆಲೆ: ಪ್ರಕರಣದ ಪ್ರಮುಖ ಆರೋಪಿ ಎಂ. ಕರಿಬಸಪ್ಪ ತನ್ನ ಎರಡನೇ ಪತ್ನಿ ಹೊಸಪೇಟೆ ಮೂಲದ ಎಂ. ಚಂದ್ರಕಲಾರೊಂದಿಗೆ ಆಗಸ್ಟ್ 5ರಂದು ಬೆಳಗ್ಗೆ 9.30ರ ಸುಮಾರಿಗೆ ರಾಜಣ್ಣರ ಮನೆಗೆ ತೆರಳಿ ನಕಲಿ ಲಗ್ನಪತ್ರಿಕೆಯನ್ನು ತೋರಿಸಿ ಹಣದ ಸಹಾಯ ನೀಡುವಂತೆ ಕೋರಿದ್ದಾರೆ. ಅಲ್ಲದೆ, ಆರೋಪಿ ಕರಿಬಸಪ್ಪ, ರಾಜಣ್ಣನವರನ್ನು ಕುಡಿಯಲು ನೀರು ಕೇಳಿ ಹಠಾತ್ ಅವರ ಮೇಲೆರಗಿ ಕುತ್ತಿಗೆ ಇರಿದು ಕೊಲೆಗೈದಿದ್ದಾನೆ. ನಂತರ ಮನೆಯಲ್ಲಿದ್ದ 25 ತೊಲೆ ಬಂಗಾರ, ಬೆಳ್ಳಿ, ಮತ್ತು 1 ಲಕ್ಷ ನಗದು ದೋಚಿಕೊಂಡು ಪತ್ನಿ ಚಂದ್ರಕಲಾರೊಂದಿಗೆ ಪರಾರಿಯಾದೆ ಎಂದು ತನಿಖೆ ವೇಳೆ ಆರೋಪಿ ಕರಿಬಸಪ್ಪ ತಿಳಿಸಿದ್ದಾನೆ ಎಂದು ಡಿವೈಎಸ್‌ಪಿ ಹೇಳಿದರು.
ಸೂತ್ರಧಾರ: ಇಲ್ಲಿನ ಇಂಡಿಕಾ ಕಾರ್ ಚಾಲಕ ಎನ್.ಬಿ. ಸಂತೋಷ್ ಈ ಪ್ರಕರಣದ ಪ್ರಮುಖ ರೂವಾರಿ. ಆರೋಪಿ ಕರಿಬಸಪ್ಪನ ಎರಡನೇ ಪತ್ನಿ ಚಂದ್ರಕಲಾ ಕಾರ್ ಚಾಲಕ ಸಂತೋಷನ ಅತ್ತೆಯ ಮಗಳು ಅಲ್ಲದೇ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ಕಾರಣಕ್ಕಾಗಿ ಪತಿ-ಪತ್ನಿಯರನ್ನು ಹೋಟೆಲ್ ಉದ್ಯಮ ನಡೆಸುವ ನೆಪ ಮಾಡಿಕೊಂಡು ಕೊಟ್ಟೂರಿಗೆ ಕರೆಸಿಕೊಂಡಿದ್ದ ಸಂತೋಷ್ ಸೂಚನೆ ಮೇರೆಗೆ ಈ ಕೃತ್ಯ ನಡೆದಿದೆ ಎಂದರು.
ಎಸ್‌ಪಿ ಗೈಡ್: ಕೊಟ್ಟೂರಿನಲ್ಲಿ ಈ ಪ್ರಕರಣ ಜರುಗುತ್ತಿದ್ದಂತೆ ಜಿಲ್ಲಾ ವರಿಷ್ಠಾಧಿಕಾರಿ ಚೇತನ ಸಿಂಗ್ ರಾಠೋಡ್, ಪೊಲೀಸ್ ಪಡೆ ಸಜ್ಜುಗೊಳಿಸಿ ಆರೋಪಿಗಳ ನಡುವೆ ನಡೆದ ಮೊಬೈಲ್ ಕರೆಗಳ ಸಂಭಾಷಣೆ ಕಲೆಹಾಕಿ ಆರೋಪಿಗಳು ಖಾಯಂ ಆಗಿ ಅಡಗಿಕೊಂಡಿರುವ ತಾಣದ ಬಗ್ಗೆ ಮಾಹಿತಿ ನೀಡಿ ಕಾರ್ಯಾಚರಣೆಗೆ ತೊಡಗಿಸಿಕೊಳ್ಳಲು ಸರ್ಕಲ್ ಇನ್ಸ್‌ಪೆಕ್ಟರ್ ಎಚ್. ವಿಜಯಕುಮಾರ್, ಸಬ್‌ಇನ್ಸ್‌ಪೆಕ್ಟರ್ ಗುರುರಾಜ್ ಎನ್. ಮೈಲಾರ್ ತಂಡದವರಿಗೆ ಪ್ರೇರಕರಾಗಿದ್ದರ ಕಾರಣಕ್ಕಾಗಿ ಈ ಪ್ರಕರಣ ಶೀಘ್ರಗತಿಯಲ್ಲಿ ಪತ್ತೆಹಚ್ಚಲು ಸಹಕಾರಿಯಾಯಿತು ಎಂದು ಗಜಕೋಶ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

