ರಾಯಲು ಸೀಮಾ ಹೌಸ್ ಸಿಕ್ರೇಟ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 13
ಅದೆಷ್ಟೋ ವಸ್ತುಗಳ, ಸ್ಥಳದ ಹೆಸರು ನಮ್ಮ ಎದುರುಗಡೆ ಇದ್ದರೂ ಅವುಗಳ ಹಿನ್ನೆಲೆ, ಇತಿಹಾಸ ಗೊತ್ತಿರುವುದಿಲ್ಲ. ಬಳ್ಳಾರಿಯ ಹೃದಯ ಭಾಗದಲ್ಲಿರುವ ರಾಯಲ್ ವೃತ್ತ (ಈಗಿನ ಗಡಿಗಿ ಚನ್ನಪ್ಪ ವೃತ್ತ) ಹಿನ್ನೆಲೆ ಮಾತ್ರ ಬಳ್ಳಾರಿ ನಗರ ಜನತೆಯಲ್ಲಿ ಕುತೂಹಲ ಕೆರಳಿಸುವಂತದ್ದು.
ಈ ವೃತ್ತಕ್ಕೆ ಹೇಗೆ ಹೆಸರು ಬಂದಿತು ಎಂಬುದು ಹಲವರಿಗೆ ತಿಳಿದಿಲ್ಲ. ಬಹುತೇಕರು ಈ ವೃತ್ತದ ಬಳಿ ರಾಯಲ್ ಟಾಕೀಸ್ ಮತ್ತು ಆರ್‌ಟಿಎಚ್ ಹೋಟೆಲ್ ಇರುವುದರಿಂದ ರಾಯಲ್ ವೃತ್ತ ಎಂಬ ಹೆಸರು ಬಂದಿರಬಹುದು ಎಂದು ತಿಳಿದಿದ್ದಾರೆ. ಆದರೆ ಇದು ರಾಯಲ್ ವೃತ್ತವಲ್ಲ, ಬದಲಾಗಿ ರಾಯಲು ಸೀಮಾ ಹೌಸ್ ವೃತ್ತವಾಗಿದ್ದು, ಕಾಲಕ್ರಮೇಣ ಅದು ರಾಯಲ್ ವೃತ್ತ ಎಂದು ಹೆಸರು ಪಡೆದುಕೊಂಡಿದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಇನ್ನು ಹಲವು ಕುತೂಹಲಕಾರಿ ಅಂಶಗಳು ಬಳ್ಳಾರಿಯ ವಿವಿಧ ಸ್ಥಳ ಹಾಗೂ ಬಳ್ಳಾರಿ ಹೆಸರಿನ ಹಿಂದಿವೆ.
ರಾಯಲು ಸೀಮಾ ಹೌಸ್: ಬಳ್ಳಾರಿ ಈ ಹಿಂದೆ 20 ತಾಲೂಕುಗಳುಳ್ಳ ದೊಡ್ಡ ಜಿಲ್ಲೆಯಾಗಿತ್ತು. 1910ರ ಪೂರ್ವದಲ್ಲಿ ಬಳ್ಳಾರಿಯ ಈಗಿನ ರಾಯಲ್ ವೃತ್ತ ಎಂಬ ಪ್ರದೇಶದಲ್ಲಿ ಆಂಧ್ರಪ್ರದೇಶದ ಶ್ರೀಮಂತರೊಬ್ಬರು ರಾಯಲು ಸೀಮಾ ಹೌಸ್ ಕಟ್ಟಿಕೊಂಡಿದ್ದರು. ಕಾಲಾಂತರದಲ್ಲಿ ರಾಯಲು ಸೀಮಾ ಹೌಸ್ ಹೋದ ಮೇಲೆ ಅಲ್ಲಿ ಹೋಟೆಲ್ ಮತ್ತು ಸಿನಿಮಾ ಚಿತ್ರಮಂದಿರ ನಿರ್ಮಿಸಿದ್ದಾರೆ. ಹೋಟೆಲ್ ಹಾಗೂ ಸಿನಿಮಾ ಟಾಕೀಸ್‌ಗೆ ರಾಯಲ್ ಎಂದು ಹೆಸರು ಬಂತು. ಈ ಹಿನ್ನೆಲೆಯಲ್ಲಿ ರಾಯಲು ಸೀಮಾ ಹೌಸ್ ಇದ್ದ ಕಾರಣ ಹಾಗೂ ನಗರದ ಹೃದಯ ಭಾಗದಲ್ಲಿರುವ ಈ ವೃತ್ತ ರಾಯಲು ವೃತ್ತವಾಯಿತು. ನಂತರದಲ್ಲಿ ರಾಯಲು ಹೋಗಿ ರಾಯಲ್ ಎಂಬ ಹೆಸರು ಪಡೆಯಿತು.
ಬಳ್ಳಾರಿ ಇತಿಹಾಸದ ಕುರಿತಾದ ಪುಸ್ತಕದಲ್ಲಿ ಇದರ ಬಗ್ಗೆ ಪ್ರಸ್ತಾಪವಿಲ್ಲ ಎಂಬುದು ಇತಿಹಾಸಕಾರರ ಅಭಿಪ್ರಾಯ. 1964ರಲ್ಲಿ ಗಡಿಗೆ ಕುಟುಂಬದವರು ಗಡಿಯಾರದ ಗೋಪುರ ಕಟ್ಟಿದ್ದರಿಂದ ಗಡಿಗಿ ಚನ್ನಪ್ಪ ವೃತ್ತ ಎಂದು ಕರೆಯಲಾಯಿತು. ಆದರೂ ಹೆಚ್ಚಿನವರು ಇದನ್ನು ರಾಯಲ್ ಸರ್ಕಲ್ ಎಂದೇ ಸಂಬೋಧಿಸುತ್ತಾರೆ.
ಬಳ್ಳಾರಿ ಬ್ಯಾಕ್ ಡಿಸ್ಟ್ರಿಕ್ಟ್: ಬಳ್ಳಾರಿ ಜಿಲ್ಲೆಗೆ ಬಿಸಿಲು ಬಳ್ಳಾರಿ, ಗಣಿನಾಡು ಬಳ್ಳಾರಿ ಎಂಬ ಅನ್ವರ್ಥನಾಮಗಳು ಇರುವುದು ಬಹುತೇಕರಿಗೆ ಗೊತ್ತಿದೆ. ಈ ಹಿಂದೆ ಅಂದರೆ ನಿಜಾಮರ, ಬ್ರಿಟಿಷರ ಕಾಲದಲ್ಲಿ ಬಳ್ಳಾರಿಯನ್ನು ಇಆಈಓ (ಬ್ಯಾಕ್) ಡಿಸ್ಟ್ರಿಕ್ಟ್ ಎಂತಲೂ ಕರೆಯುತ್ತಿದ್ದರು.
ಬ್ಯಾಕ್ ಎಂದರೆ ಹಿಂದುಳಿದ ಜಿಲ್ಲೆ ಎಂಬ ಅರ್ಥವಲ್ಲ, ಬಿ ಎಂದರೆ ಬಳ್ಳಾರಿ, ಎ ಅಂದರೆ ಅನಂತಪುರ, ಸಿ ಎಂದರೆ ಕಡಪ, ಕೆ ಎಂದರೆ ಕರ್ನೂಲು. ಈ ನಾಲ್ಕು ಊರುಗಳನ್ನು ಬಳ್ಳಾರಿ ಜಿಲ್ಲೆ ಒಳಗೊಂಡಿದ್ದರಿಂದ ಬಳ್ಳಾರಿಯನ್ನು ಇಆಈಓ ಡಿಸ್ಟ್ರಿಕ್ಟ್ ಎಂದು ಸಂಕ್ಷಿಪ್ತವಾಗಿ ಕರೆಯುವ ಪ್ರತೀತಿ ಅಂದಿನ ದಿನಗಳಲ್ಲಿ ಇತ್ತು. ಈಗ ಬಳ್ಳಾರಿಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಬಿಸಿಲ ಬಳ್ಳಾರಿ, ಗಣಿಗಾರಿಕೆ ಹೆಚ್ಚು ನಡೆಯುವುದರಿಂದ ಗಣಿನಾಡು ಬಳ್ಳಾರಿ ಎಂದು ಕರೆಯಲಾಗುತ್ತಿದೆ.
ಬ್ರಿಟಿಷ್ ಅಧಿಕಾರಿಗಳ ಹೆಸರು: ಈಗಿನ ಮಿಲ್ಲರ್ ಪೇಟೆ ಹಾಗೂ ಬ್ರೂಸ್ಪೇಟೆ ಆಂಗ್ಲ ಅಧಿಕಾರಿಗಳ ಹೆಸರು ಎಂಬುದು ಕೂಡ ಕುತೂಹಲಕಾರಿ ಸಂಗತಿ. ಬ್ರಿಟಿಷರ ಆಡಳಿತಾವಧಿಯಲ್ಲಿ ಮಿಲ್ಲರ್ ಎಂಬ ಜಿಲ್ಲಾಧಿಕಾರಿ ಈಗಿನ ಮಿಲ್ಲರ್ ಪೇಟೆ ಎಂದು ಕರೆಸಿಕೊಳ್ಳುವ ಪ್ರದೇಶದಲ್ಲಿ ಮನೆ ಕಟ್ಟುವುದಕ್ಕೆ ಜಾಗ ನೀಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಮಿಲ್ಲರ್ ಪೇಟೆ ಎಂದು ಕರೆಯಲು ಕಾರಣವಾಯಿತು.
ಇನ್ನು ಬ್ರೂಸ್ ಎಂಬ ಜಿಲ್ಲಾ ನ್ಯಾಯಾಧೀಶರು ಬಳ್ಳಾರಿಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಬ್ರೂಸ್ಪೇಟೆ ಪೊಲೀಸ್ ಠಾಣೆ ಎಂದು ಹೆಸರು ಪಡೆದಿದೆ. ಹೀಗೆ ಬಳ್ಳಾರಿಯಲ್ಲಿ ಬಹುತೇಕ ಪ್ರದೇಶ, ಸ್ಥಳಗಳು ತನ್ನದೆಯಾದ ಹಿನ್ನೆಲೆ ಹೊಂದಿವೆ.
ಇತಿಹಾಸ ಪ್ರಸಿದ್ಧಿ ಇರುವ ಹಂಪಿ, ಹೊಸಪೇಟೆ, ಸಂಡೂರು ಪ್ರದೇಶಗಳು ಬಳ್ಳಾರಿ ಜಿಲ್ಲೆಯಲ್ಲಿದ್ದು, ಸ್ವತಃ ಬಳ್ಳಾರಿ ನಗರದ ಹಿನ್ನೆಲೆ, ಅಲ್ಲಿನ ಹೆಸರಿಗೆ ಇತಿಹಾಸ ಇರುವುದನ್ನು ಬಳ್ಳಾರಿಗರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಬಳ್ಳಾರಿ ಹೆಸರುಗಳಲ್ಲೂ ವಿಶಿಷ್ಟತೆ, ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡಿರುವುದು ವಿಶೇಷವೇ ಸರಿ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

