ಬಳ್ಳಾರಿ

ಕಣ್ಣಲ್ಲಿ ನೀರು, ಬಾಯಲ್ಲಿ ಖಾರ

Published On :

ಹಗರಿಬೊಮ್ಮನಹಳ್ಳಿ: ಈರುಳ್ಳಿ ಹೆಸರೆತ್ತಿದಾಕ್ಷಣ ಜನತೆಯ ಕಣ್ಣಲ್ಲಿ ನೀರು ಹರಿಯುವಂತಾಗಿದೆ. ಮಾರುಕಟ್ಟೆಯಲ್ಲಿ ಆಕಾಶಕ್ಕೆ ಮುಖಮಾಡಿ ಓಡುತ್ತಿರುವ ತರಕಾರಿ ಬೆಲೆ, ಅದರಲ್ಲೂ ಈರುಳ್ಳಿ ಗ್ರಾಹಕರ ಜೇಬಿಗೆ ಬಲು ಭಾರವಾಗಿ ಪರಿಣಮಿಸಿರುವುದೆ ಇವತ್ತು ಉಳ್ಳಾಗಡ್ಡೆ ಪ್ರಿಯರ ಕಣ್ಣಿನಲ್ಲಿ ನೀರಿಳಿಯುವಂತಾಗಿದೆ.
ಮಂಗಳವಾರ ಇಲ್ಲಿನ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರದಲ್ಲಿಯೇ ಕೆ.ಜಿ.ಗೆ ರು.  70 ಇದ್ದರೆ, ಚಿಲ್ಲರೆಯಾಗಿ ರು.  80ರಿಂದ 85ಗಳಾಗಿತ್ತು. ಈ ವರ್ಷದಲ್ಲಿ ಬಹುಶಃ ಇದು ಈರುಳ್ಳಿಯ ದಾಖಲೆ ಬೆಲೆ ಎನ್ನಬಹುದು. ಗ್ರಾಹಕರ ಬೇಡಿಕೆಯನ್ನು ನೀಗಿಸುವಷ್ಟು ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದೂ ಸಹಜವಾಗಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಗಗನಕ್ಕೇರುವಂತೆ ಮಾಡಿದೆ ಎನ್ನಬಹುದು. ಒಂದು ಕಡೆ ಮಳೆಯ ಅಭಾವ ಹಾಗೂ ಇತ್ತೀಚಿಗೆ ಸುರಿದ ಮಳೆ ಈರುಳ್ಳಿ ಫಸಲಿಗೆ ಕಂಟಕವಾಗಿ ಕಾಡಿದರೆ, ಇತ್ತ ಈರುಳ್ಳಿ ಕಣಜ ಎನಿಸಿಕೊಂಡಿರುವ ಮಹಾರಾಷ್ಟ್ರದಿಂದ ಬರುವಲ್ಲೂ ಈ ಸಲ ಕುಂಠಿತವಾಗಿದೆ. ಜತೆಗೆ ಸ್ಥಳೀಯವಾಗಿ ಈರುಳ್ಳಿ ಅವಕದಲ್ಲಿನ ಪೂರೈಕೆ ಸಹ ತಳಮಟ್ಟ ತಲುಪಿದೆ.
ಗ್ರಾಹಕರ ಬೇಡಿಕೆಯನ್ನು ಪೂರೈಸುವಷ್ಟು ಈರುಳ್ಳಿ ಅವಕ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಇದು ಈರುಳ್ಳಿ ಬೆಲೆ ಏರಿಕೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಳೆದೆರಡು ವಾರಗಳಿಂದಲೂ ಈರುಳ್ಳಿ ಬೆಲೆ ಗಗನಮುಖಿಯಾಗಿದ್ದು, ಇಳಿಕೆ ಕಂಡಿಲ್ಲ. ನಾವು ದುಬಾರಿ ರೊಕ್ಕ ಕೊಟ್ಟು ಖರೀದಿಸಬೇಕು, ಆದರೆ ಗ್ರಾಹಕರು ಬೆಲೆಯಲ್ಲಿ ಚೌಕಾಸಿಗೆ ಇಳಿಯುತ್ತಾರೆ. ಬೆಲೆ ಸ್ವಲ್ಪ ಕಡಿತಗೊಳಿಸಿದರೆ ನಾವು ಹಾಕಿದ ಬಂಡವಾಳಕ್ಕೆ ಖೋತಾ ಬೀಳಲಿದೆ ಎನ್ನುತ್ತಾರೆ ತರಕಾರಿ ಮಾರುಕಟ್ಟೆಯಲ್ಲಿನ ಈರುಳ್ಳಿ ಮಾರಾಟಗಾರರು.
ಇನ್ನು ಹಸಿಮೆಣಸಿನಕಾಯಿ ಹೆಸರಿನಲ್ಲಿಯೇ ಖಾರ ತುಂಬಿಕೊಂಡಿದೆ. ಇತ್ತ ತರಕಾರಿ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ ಬೆಲೆಯೂ ಏರಿಕೆಯಾಗಿದೆ. ಪಟ್ಟಣದಲ್ಲಿ ಚಿಲ್ಲರೆಯಾಗಿ ಕೆ.ಜಿ. ಹಸಿಮೆಣಸಿನಕಾಯಿ ಬೆಲೆ ಬರೋಬ್ಬರಿ ರು.  100ರಿಂದ 110ವರೆಗೂ ತಲುಪಿತ್ತು. ಸಗಟು ವ್ಯಾಪಾರದಲ್ಲಿ ಅದು ಕೆ.ಜಿ.ಗೆ ರು.  90 ಆಸುಪಾಸಿನಲ್ಲಿತ್ತು. ಒಂದು ಕಡೆ ಈರುಳ್ಳಿ ಬೆಲೆ ಕಣ್ಣೀರು ತರಿಸುವಂತಿದ್ದರೆ, ಇತ್ತ ಬರೋಬ್ಬರಿ ನೂರು ರುಪಾಯಿಗೆ ಮುಟ್ಟಿರುವ ಹಸಿಮೆಣಸಿನಕಾಯಿ ಬೆಲೆ ಶ್ರಾವಣ ಮಾಸದಲ್ಲಿ ಬಿಸಿಲೂರಿನ ಗ್ರಾಹಕರು ಹಬ್ಬದೂಟದ ಸವಿ ಸವಿಯುವ ಬದಲು ಕಣ್ಣಲ್ಲಿ ನೀರು, ಬಾಯಲ್ಲಿ ಖಾರ ಅನುಭವಿಸುವಂತೆ ಮಾಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.