ಬಳ್ಳಾರಿ

ಬರ ಪೀಡಿತ ತಾಲೂಕು ಘೋಷಿಸಿ

Published On :

ಹಗರಿಬೊಮ್ಮನಹಳ್ಳಿ: ವಾಡಿಕೆಗಿಂತಲೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ತಾಲೂಕಿನಾದ್ಯಂತ ಶೇ. 75ರಷ್ಟು ಬೆಳೆ ಸಂಪೂರ್ಣ ಒಣಗಿದ್ದು, ಎಲ್ಲೆಡೆ ಬರಗಾಲದ ಛಾಯೆ ಅವರಿಸಿದೆ. ಹೀಗಾಗಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸುವ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಬುಧವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಶಾಸಕ ಎಸ್. ಭೀಮಾನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೋರಲಿನಿಂದ ಈ ನಿರ್ಧಾರಕ್ಕೆ ಬರಲಾಯಿತು.
ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹ: ವಾಡಿಕೆಯಂತೆ ಜುಲೈ ಅಂತ್ಯಕ್ಕೆ 557 ಮಿ.ಮೀ. ಪ್ರಮಾಣದಷ್ಟು ಮಳೆ ಸುರಿಯಬೇಕಿತ್ತು. ಆದರೆ ಈಗ ಕೇವಲ 212 ಮಿ.ಮೀ. ಮಾತ್ರ ಮಳೆ ಆಗಿದೆ. ಕಳೆದ ವರ್ಷ ಇದೇ ವೇಳೆಗೆ ಕೇವಲ 227 ಮಿ.ಮೀ. ಪ್ರಮಾಣದ ಮಳೆಯಾಗಿತ್ತು. ಆಗಲೂ ತಾಲೂಕಿನಲ್ಲಿ ಬರ ಕಾಣಿಸಿಕೊಂಡಿತ್ತು. ಈ ಸಲ ಕಳೆದ ವರ್ಷಕ್ಕಿಂತಲೂ ಕಡಿಮೆ ಪ್ರಮಾಣದ ಮಳೆಯಾಗಿರುವುದನ್ನು ನೋಡಿದರೆ ಇದು ಭೀಕರ ಬರಗಾಲದ ಮುನ್ಸೂಚನೆ. ಹೀಗಾಗಿ ತಕ್ಷಣ ತಾಲೂಕನ್ನು ರಾಜ್ಯ ಸರ್ಕಾರ ಬರಗಾಲ ಪ್ರದೇಶ ಎಂದು ಘೋಷಿಸಿ, ತ್ವರಿತಗತಿಯಲ್ಲಿ ಅಭಾವ ಪರಿಸ್ಥಿತಿ ನಿಭಾಯಿಸುವ ಕಾಮಗಾರಿಗಳನ್ನು ತಾಲೂಕಿನಲ್ಲಿಆರಂಭಿಸಬೇಕು. ಬೆಳೆನಷ್ಟ ಹೊಂದಿದ ರೈತರಿಗೆ ಬೀಜ, ಗೊಬ್ಬರ ಹಾಗೂ ಬಿತ್ತನೆಗಾಗಿ ಮಾಡಿದ ಖರ್ಚು ವೆಚ್ಚಗಳ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು.
ಅಸಮಾಧಾನ: ಸರ್ಕಾರದಿಂದ ಬರುವ ಕೃಷಿ ಉಪಕರಣಗಳ ಬಗ್ಗೆ ಇದುವರೆಗೂ ಒಂದಿಂಚು ಮಾಹಿತಿಯನ್ನು ನಮಗೆ ನೀಡಿಲ್ಲ. ಇಲಾಖೆಯಲ್ಲಿ ಲಭ್ಯ ಇರುವ ಸೌಲಭ್ಯಗಳು, ಯೋಜನೆಗಳ ಜಾರಿ ಸಹ ನಮ್ಮ ಗಮನಕ್ಕೆ ಬರುತ್ತಿಲ್ಲ. ನಾವು ಜನಪ್ರತಿನಿಧಿಗಳಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಜಿಪಂ ಸದಸ್ಯೆ ಕರಿಬಸವನಗೌಡ್ರ ರತ್ನಮ್ಮ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣ ವೃತ್ತದ ವಿಚಾರವಾಗಿ ಸಭೆಯಲ್ಲಿ ಬಿಸಿ ಚರ್ಚೆ ನಡೆಯಿತು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಉಪಾಧ್ಯಕ್ಷೆ ಕೆ. ನಾಗರತ್ನ, ಜಿಪಂ ಸದಸ್ಯರಾದ ರತ್ನಮ್ಮ ಸಿದ್ದಲಿಂಗನಗೌಡ, ರೋಗಾಣಿ ಹುಲುಗಪ್ಪ, ಅಕ್ಕಿ ತೋಟೇಶ, ಬಿ. ದೇವೇಂದ್ರ, ಹನುಮಂತಪ್ಪ, ಕಲ್ಗುಡಿ ಕಮಲಮ್ಮ, ಕೊಲುಮಿ ರೇಹಮಾನ್, ಮಂಜುನಾಥ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ತಾಪಂ ಇಒ ಜಿ. ಗೋಪ್ಯಾನಾಯ್ಕ ನಿರ್ವಹಿಸಿದರು.

ಸ್ಲಂಗಳ ಅಭಿವೃದ್ಧಿಗೆ ಕಾಳಜಿ ಬೇಕು: ಸುನಂದಾ
ಹೊಸಪೇಟೆ: ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಕಾಳಜಿ ವಹಿಸಿ ಸ್ಲಂಗಳಿಗೆ ವಿಶೇಷ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು ಎಂದು ನ್ಯಾಯವಾದಿ ಪಿ. ಸುನಂದಾ ಹೇಳಿದರು. ನಗರದ ಸ್ಲಂ ಜನಾಂದೋಲನ ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯಿಂದ ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಕೆಂಚಮ್ಮನಗುಡಿ ಸ್ಲಂ ಪ್ರದೇಶದಲ್ಲಿ ಸ್ಲಂ ಕಾಯ್ದೆ ಕುರಿತು ಬುಧವಾರ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಮಿತೈಯ ಮುಖ್ಯಸ್ಥೆ ಬಿ. ಹೊನ್ನೂರ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಎನ್. ಹುಲಿಗೆಮ್ಮ, ಮನೋಜ್‌ಕುಮಾರ್, ತಿಮ್ಮಕ್ಕ, ಹನುಮಂತರಾಯ, ವೆಂಕಟೇಶಲು, ಮಾರೆಮ್ಮ, ನಾಗಲಕ್ಷ್ಮಿ, ವೆಂಕಮ್ಮ, ತಿಪ್ಪಮ್ಮ, ಗೀತಾಂಜಲಿ, ಹುಸೇನ್‌ಬೀ, ಗಿರೀಶ್ ಸೇರಿದಂತೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.