ಬೇಡಿಕೆ ಈಡೇರಿಕೆಗೆ ಆಗ್ರಹ
ಬಳ್ಳಾರಿ: ಮೂಲ ಆದಿವಾಸಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆ, ಅವರ ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಪರಿಸರ, ಮಾನವ ಹಕ್ಕುಗಳ ಸಂರಕ್ಷಣೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕುರಿತು 1994ರಲ್ಲಿ ವಿಶ್ವಸಂಸ್ಥೆ ಸಭೆಯಲ್ಲಿ ಚರ್ಚೆಗಳು ನಡೆದು ಈಗಾಗಲೇ ದಶಕಗಳೇ ಕಳೆದಿವೆ. ಆದಾಗ್ಯೂ ಆದಿವಾಸಿಗಳ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸೂಚಿಸಿಲ್ಲ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಆಶಯದಂತೆ ಆದಿವಾಸಿಗಳ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಪ್ರತಿವರ್ಷ ವಿಶ್ವ ಆದಿವಾಸಿ ದಿನದಂದು ಆದಿವಾಸಿ ಸಾಧಕರನ್ನು ಗುರುತಿಸಿ, ಆದಿವಾಸಿ ಸಿರಿ ಎಂಬ ಪ್ರಶಸ್ತಿ ನೀಡಿ ಗೌವಿಸಬೇಕು. ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಆದಿವಾಸಿ ಭವನ ನಿರ್ಮಿಸಬೇಕು. ರಾಜ್ಯದಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡಗಳ ಆಯೋಗ, ಸಚಿವಾಲಯ ರಚಿಸಬೇಕು ಹಾಗೂ ಆದಿವಾಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಹಾಗೂ ಎಲ್ಲಾ ಆದಿವಾಸಿಗಳಿಗೆ ಚುನಾವಣೆ ಗುರುತಿನ ಚೀಟಿ, ನಿವೇಶನ, ಮನೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಒದಗಿಸಬೇಕು ಎಂದು ಪರಿಷತ್ನ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು ಆಗ್ರಹಿಸಿದ್ದಾರೆ. ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಬರುವ ಒಟ್ಟು 50 ಬುಡಕಟ್ಟು ಜನಾಂಗಳ ಪೈಕಿ ಜೇನು ಕುರುಬ, ಕೊರಗ ಆದಿಗಳನ್ನು ಆದಿಮ ಬುಡಕಟ್ಟುಗಳು ಎಂದು ಗುರುತಿಸಲಾಗಿದೆ. ಇನ್ನುಳಿದ ಡುಂಗ್ರಿ ಗುರಸಿಯ, ಹಕ್ಕಿಪಿಕ್ಕಿ, ನೈಕ್ಡ್(ಕಾತಕರಿ), ಪಾರ್ಧಿ, ಅಡ್ವಿಚಿಂಚೇರ್, ಹರಣಶಿಕಾರಿ, ರಾಜಗೊಂಡ ಬುಡಕಟ್ಟಿನವರು ನಿತ್ಯ ಒಂದು ಹೊತ್ತಿನ ಅನ್ನಕ್ಕಾಗಿ ಇಂದಿಗೂ ಅಲೆಮಾರಿ ಜೀವನ ಸಾಗಿಸುತ್ತಿದ್ದಾರೆ. ಆ ಪ್ರದೇಶವನ್ನು ನಕ್ಸಲರಿಂದ ಮುಕ್ತಗೊಳಿಸಲು ವಿಶೇಷ ಯೋಜನೆ ರೂಪಿಸಬೇಕು. ಆದಿವಾಸಿಗಳ ಮೇಲೆ ಅರಣ್ಯಾಧಿಕಾರಿಗಳು ಹೂಡಿರುವ ದೂರುಗಳನ್ನು ಹಿಂಪಡೆಯಬೇಕು. ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗಾಗಿ ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಗಿರಿಜನ ಹಿನ್ನೆಲೆಯುಳ್ಳ ಶಿಕ್ಷಕರನ್ನೇ ಆ ಶಾಲೆಗಳಿಗೆ ಕಾಯಂ ಶಿಕ್ಷಕರನ್ನಾಗಿ ನೇಮಿಸಬೇಕು. ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಪರಿಷತ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಸಂದರ್ಭ ಪರಿಷತ್ ಸದಸ್ಯರಾದ ಜಿ. ಮಾಧವರಾವ್, ಡುಂಗ್ರಿ ಗರಾಸಿಯ, ಎಚ್.ಪಿ. ಶ್ರೀಕಾಂತ್, ಎಚ್.ಪಿ. ಅಂಜಿನಿ, ಜಿ. ಮೋಹನ್, ಡಿ. ಗಿರೀಶ್, ರಾಮಣ್ಣ, ಅಗ್ನಿ, ನಾಗರೆಡ್ಡಿ, ಚಿನ್ನಪ್ಪ, ಸಿಂಧೋಳ್ ವೀರೇಶ್, ಅಶೋಕ್ಕುಮಾರ್, ಚಾಂದು, ಈರಣ್ಣ, ರಾಮಚಂದ್ರ, ಸುಂಕಪ್ಪ, ಪಿ. ಜಂಬಣ್ಣ, ಭರತ್, ಕೆ. ಸುಂಕಣ್ಣ, ಮಾರೆಪ್ಪ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

