ಗಮನ ಸೆಳೆದ ಗಾಂಧಿ ವೇಷಧಾರಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 16
ರಾಷ್ಟ್ರೀಯ ಹಬ್ಬಗಳಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರ್ ಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್, ಸ್ವಾಮಿ ವಿವೇಕಾನಂದರು ಸೇರಿದಂತೆ ರಾಷ್ಟ್ರೀಯ ನಾಯಕರ ವೇಷಧಾರಿಗಳನ್ನು ವೇದಿಕೆಯಲ್ಲಿಯೋ ಅಥವಾ ಸಭೆ ಸಮಾರಂಭದಲ್ಲಿಯೋ ಕಂಡಿರುತ್ತೇವೆ. ಆದರೆ, ಪ್ರತಿವರ್ಷ ಆ. 15ರಂದು ಮಹಾತ್ಮಾ ಗಾಂಧಿ ವೇಷ ಧರಿಸಿಕೊಂಡು ಜನರ ಮಧ್ಯೆ ಸಂಚರಿಸುವ ದೇಶಭಕ್ತರೊಬ್ಬರು ಸ್ವಾತಂತ್ರ್ಯೋತ್ಸವ ದಿನದಂದು ಹೊಸಪೇಟೆಯಲ್ಲಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದರು.
ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದ ನಿವಾಸಿ ರಾಚಯ್ಯ ಹಿರೇಮಠ (52) 7 ವರ್ಷಗಳಿಂದ ಸತತ ಆ. 15ರಂದು ಸ್ವಾತಂತ್ರ್ಯೋತ್ಸವದಂದು ಮಹಾತ್ಮಾ ಗಾಂಧೀಜಿ ವೇಷ ಧರಿಸಿಕೊಂಡು ಇಡೀ ದಿನವೆಲ್ಲಾ ಜನರ ಮಧ್ಯ ಸಂಚರಿಸುತ್ತಾ ಗಾಂಧೀಜಿ ನೆನಪಿಸುವಂಥ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ದಿನಗಳಲ್ಲಿ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ.
ಬೂದುಗುಂಪ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ರಾಚಯ್ಯ ಹಿರೇಮಠ ಅವರು 7ನೇ ತರಗತಿ ಮಾತ್ರ ಓದಿಕೊಂಡಿದ್ದು, ಗಾಂಧೀಜಿ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು, ಗಾಂಧೀಜಿಯವರ ಅಭಿಮಾನದೊಂದಿಗೆ ಪ್ರತಿವರ್ಷ ಸ್ವಾತಂತ್ರ್ಯೋತ್ಸವದಂದು ಮಾತ್ರ ಬಿಳಿ ಪಂಜೆ, ಬಿಳಿ ವಸ್ತ್ರವನ್ನು ಮೈಮೇಲೆ ಹೊತ್ತುಕೊಂಡು, ಗಾಂಧಿ ಗಡಿಯಾರನ್ನು ಸೊಂಟಕ್ಕೆ ಕಟ್ಟಿಕೊಂಡು, ಕೈಯಲ್ಲೊಂದು ಕೋಲು ಹಿಡಿದು, ಗಾಂಧಿ ಕನ್ನಡಕ ಹಾಕಿಕೊಂಡು, ಕೈಯಲ್ಲಿ ಭಗವದ್ಗೀತಾ ಪುಸ್ತಕ ಹಿಡಿದಿದ್ದು, ಗಾಂಧೀಜಿಯವರ ರೀತಿ ಅರ್ಧ ತಲೆಯ ಕೂದಲು ತೆಗೆಸಿಕೊಂಡು ಗಾಂಧೀಜಿಯವರ ಪ್ರತಿರೂಪದಲ್ಲೇ ನಡೆಯುತ್ತಾ, ದಾರಿಯಲ್ಲಿ ಯಾರೊಂದಿಗೂ ಮಾತುಕತೆ ನಡೆಸದೆ ಸಂಚಾರ ಮಾಡುತ್ತಾರೆ.
ಪ್ರತಿವರ್ಷ ಆ. 15ರಂದು ಕೊಪ್ಪಳ ಜಿಲ್ಲೆಯಲ್ಲಿ ತಿರುಗಾಡುತ್ತಾರೆ. ಕೊಪ್ಪಳ, ಗಣಿಗೇರಿ, ಹುಲಿಗಿ ಇತರ ಗ್ರಾಮಗಳಲ್ಲಿ ಹಾದು ಟಿಬಿ ಡ್ಯಾಂಗೆ ಬಂದು ತುಂಗಭದ್ರಾ ಜಲಾಶಯ ವೀಕ್ಷಿಸಿಕೊಂಡು, ಲಕ್ಷಾಂತರ ಜನರ ಮಧ್ಯದಲ್ಲಿ ಸಾಗುತ್ತಾರೆ. ವೇಷಧಾರಿಯನ್ನು ಕಂಡ ಜನತೆ ತಮ್ಮ ತಮ್ಮಲ್ಲಿ ಸಂತಸಪಡುತ್ತಾರೆ.
ಈ ವರ್ಷ ಹೊಸಪೇಟೆ ನಗರದಲ್ಲಿ ಗುರುವಾರ ಮಧ್ಯಾಹ್ನದವರೆಗೆ ಸಂಚಾರ ಮಾಡುತ್ತ, ಮಧ್ಯಾಹ್ನದಿಂದ ಟಿ.ಬಿ. ಡ್ಯಾಂಗೆ ತೆರಳಿದರು. ಟಿಬಿ ಡ್ಯಾಂನಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮಧ್ಯೆ ಗಾಂಧಿಯೊಬ್ಬರು ಸಂಚರಿಸುತ್ತಿರುವ ದೃಶ್ಯ ನೋಡಿ ಸಂತೋಷ ಪಟ್ಟವರು ಅದೆಷ್ಟೋ ಜನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

