ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ
ಬಳ್ಳಾರಿ: ತಾಲೂಕಿನ ಕುರುಗೋಡು ಬಾದನಹಟ್ಟಿ ರಸ್ತೆಯಲ್ಲಿರುವ ಸುಜಾತಾ ಹೋಟೆಲ್ ಸಮೀಪದಲ್ಲಿ ಪರವಾನಗಿ ಇಲ್ಲದೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ, ರು. 10,250 ಮೌಲ್ಯದ ಮದ್ಯದ ಬಾಟಲಿಗಳನ್ನು ಹಾಗೂ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕುರುಗೋಡಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪ್ರೊಬೆಷನರಿ ಡಿಎಸ್ಪಿ ದಾಳಿ ಮಾಡಿ, ಗೋವಿಂದ ಎನ್ನುವಾತನನ್ನು ಬಂಧಿಸಿ, ಆತನಿಂದ ರು. 10,250 ಬೆಲೆಬಾಳುವ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ: 6 ಜನರ ಬಂಧನ
ಬಳ್ಳಾರಿ: ತಾಲೂಕಿನ ಕುರುಗೋಡಿನ ಕಂಪ್ಲಿ ರಸ್ತೆಯಲ್ಲಿರುವ ಸಪ್ತಗಿರಿ ಡಾಬಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ 6 ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ರು. 20,246 ವಶಪಡಿಸಿಕೊಂಡಿದ್ದಾರೆ. ಸಪ್ತಗಿರಿ ಡಾಬಾ ಹತ್ತಿರ ಜೂಜಾಟ ಆಡುತ್ತಿದ್ದವರ ಮೇಲೆ ಪ್ರೊಬೆಷನರಿ ಡಿವೈಎಸ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿ, ನಾಗರಾಜ್ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗ ಮುರಿದು ಮನೆ ಕಳ್ಳತನ
ಬಳ್ಳಾರಿ: ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ರು. 62,450 ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿರುವ ಘಟನೆ ಗುರುವಾರ ನಡೆದಿದೆ. ಆ. 15ರಂದು ರಾತ್ರಿ 8.10ರಿಂದ 10 ಗಂಟೆ ಸುಮಾರಿನಲ್ಲಿ ಕಳ್ಳರು ಕೇಂದ್ರ ಕಾರಾಗೃಹದ ವಸತಿ ಗೃಹದ ಮನೆ ನಂ. 4ರ ಮನೆಯ ಬೀಗ ಮುರಿದು ಬೆಡ್ರೂಂನಲ್ಲಿದ್ದ ಕಪಾಟಿನಲ್ಲಿಟ್ಟಿದ 49 ಗ್ರಾಂ ಚಿನ್ನದ ಆಭರಣಗಳು, 30 ಗ್ರಾಂ ಬೆಳ್ಳಿಯ ಆಭರಣ, ರು. 5 ಸಾವಿರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮುನಿರಾಬಾದ್: ಸ್ವಾತಂತ್ರೋತ್ಸವದ ನಿಮಿತ್ತ ಇಲ್ಲಿನ ಪಿ. ಲಿಂಗಯ್ಯಾ ಪ್ರಥಮಿಕ ಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಸಂಬಶಿವರಾವ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಪದ್ಮಶ್ರೀ ಶ್ರೀಧರ ಹಾಗೂ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು. ನಂತರ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪತ್ರಿಕೆ ನೊಂದವರ ಧ್ವನಿಯಾಗಲಿ: ರವೀಂದ್ರ
ಹೂವಿನಹಡಗಲಿ: ಪತ್ರಿಕೆಗಳು ನೊಂದ ಬಡ ಜೀವಗಳ ಧ್ವನಿಯಾಗಿ ಅಂತಹ ಮಾನವೀಯ ವರದಿಗಳು ಮೂಡಿಬರಲಿ ಎಂದು ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಆಶಯ ವ್ಯಕ್ತಪಡಿಸಿದರು. ಬಯಲು ದರ್ಶನ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ಪತ್ರಿಕೆ ಸಂಪಾದಕ ಎಂ.ಪಿ.ಎಂ. ಶಿವಪ್ರಕಾಶ ಸ್ವಾಮಿ, ಉಪನ್ಯಾಸಕ ಶಾಂತಮೂರ್ತಿ ಕುಲಕರ್ಣಿ ಮಾತನಾಡಿದರು. ಉಪನ್ಯಾಸಕ ಎಂ.ಪಿ.ಎಂ. ದಯಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಹಳ್ಳಿಗುಡಿ ಸ್ವಾಗತಿಸಿದರು, ಜಗದೀಶ ವಂದಿಸಿದರು.
ಕಸಾಪ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ: ತಾಲೂಕು ಕಸಾಪ ನೂತನ ಪದಾಧಿಕಾರಿಗಳನ್ನು ಪುನಃ ನೇಮಕಗೊಳಿಸಲಾಗಿದೆ. ಗೌರವ ಕಾರ್ರ್ಯದರ್ಶಿ ಡಾ. ಪ್ರಕಾಶ ಬಳ್ಳಾರಿ, ಹುಸೇನಪಾಶಾ ಗೌರವ ಕೋಶಾಧ್ಯಕ್ಷ ಮೈಲಾರಗೌಡ ಹೊಸಮನಿ, ಅಂಜನಾದೇವಿ ಕಲ್ಲೂರಕರ್, ವೀರಣ್ಣ ಬಂಡಿ, ಪ್ರಹ್ಲಾದ್ ಬಸವರಾಜ ಪಾಟೀಲ, ಗವಿಸಿದ್ದಪ್ಪ ಬಾರಕೇರ, ಪದಮಚಂದ್ ಚಂಪಾಲಾಲ್ ಮೆಹತಾ, ಕಿಶನ್ ಗೋಪಾಲ ಜಾಜು, ಅರುಣಾ ನರೇಂದ್ರ ಅನಸೂಯಾ ಜಾಗೀರದಾರ,ದಾನಪ್ಪ ಜಿ.ಕೆ, ಡಿ.ಎಂ. ಬಡಿಗೇರ, ಡಾ. ಕೆ.ಎಸ್. ರಾಮು, ಡಾ. ಶ್ರೀನಿವಾಸ ಹನಸಿ, ಸರೋಜಾ ಬಾಕಳೆರನ್ನು ನೇಮಕಗೊಳಿಸಿದೆ.
ಶಾಸಕ ರಾಘವೇಂದ್ರ ಹಿಟ್ನಾಳಗೆ ಮನವಿ
ಕೊಪ್ಪಳ: ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳಗೆ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಒತ್ತಾಯ ಮಾಡಿದೆ. ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧ್ವಜಾರೋಹಣ ಮಾಡುವ ಮುನ್ನ ಅತಿಥಿ ಉಪನ್ಯಾಸಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಶೀಘ್ರದಲ್ಲಿ ವಿಧಾನಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವುದಾಗಿ ಭರವಸೆ ನೀಡಿದರು.ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಂಚಾಲಕ ವೀರಣ್ಣ ಸಜ್ಜನರ, ಪದಾಧಿಕಾರಿಗಳಾದ ರವಿ ಹಿರೇಮಠ, ಕೆಂಚಪ್ಪ ಹಾಲವರ್ತಿ, ಮಂಜುನಾಥ ಹೊಸೂರು, ಡಾ. ಪ್ರಕಾಶ ಬಳ್ಳಾರಿ, ಬಸವರಾಜ ಹುಳಕಣ್ಣವರ್ ಮತ್ತಿತರರು ಇದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ಕೊಪ್ಪಳ: ಕರ್ನಾಟಕ ವಿಜ್ಞಾನ ಪರಿಷತ್ ಬೆಂಗಳೂರು ಹಾಗೂ ಗುಲ್ಬರ್ಗ ವಲಯದ ವಿಜ್ಞಾನ ಪರಿಷತ್ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಬೀದರನ ಗುರುನಾನಕ್ ದೇವ ಸೈನ್ಸ್ ಕಾಲೇಜಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮೇಳ ನಡೆಯಿತು. ಮೇಳದಲ್ಲಿ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿಗಳಾದ ಶಿವಕುಮಾರ ಬಹದ್ದೂರಬಂಡಿ ಹಾಗೂ ಪ್ರಕಾಶ ಬುಲ್ಟಿ ಭಾವಹಿಸಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗವಿ ಶ್ರೀಗಳು, ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ, ಪ್ರಾಚಾರ್ಯ ಎಸ್.ಎಲ್. ಮಾಲೀಪಾಟೀಲ್, ವಿಜ್ಞಾನ ಪ್ರಾಧ್ಯಾಪಕ ಪ್ರೊ. ಎಂ.ಎಸ್. ದಾದ್ಮಿ ಮತ್ತಿತರರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

