ಬಳ್ಳಾರಿ

ರಂಗಭೂಮಿಯಿಂದ ಜನತೆ ವಿಮುಖ

Published On :

ಬಳ್ಳಾರಿ: ಇಂದಿನ ದಿನಗಳಲ್ಲಿ ನಾಟಕ ರಂಗಗಳ ಅದರಲ್ಲಿಯೂ ವೃತ್ತಿ ರಂಗಭೂಮಿಯತ್ತ ಯುವಜನತೆಯ ಒಲುವು ಕ್ಷೀಣಿಸುತ್ತಿದ್ದು, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯದ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರೂ ಆಗಿರುವ ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟಕ ಸಂಘದ ಮಾಲೀಕ ರಾಜಣ್ಣ ಜೇವರ್ಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ವೃತ್ತಿ ರಂಗಭೂಮಿಯಲ್ಲಿಯೂ ಸಾಕಷ್ಟು ಬದಲಾವಣೆ, ಬೆಳವಣಿಗೆಗಳಾಗುತ್ತಿವೆ. ಕಲಾವಿದರಿಗೆ ಗೌರವಧನ, ಸಂಭಾವನೆ ನೀಡಲಾಗುತ್ತಿದೆ. ನಾಟಕಗಳಲ್ಲಿ ಅಭಿನಯಿಸುವವರಿಗೆ ಗೌರವವೂ ದೊರೆಯುತ್ತಿದೆ. ಚಲನಚಿತ್ರಗಳಲ್ಲಿ ಅಭಿನಯಿಸಿರುವ ಹಿಂದಿನ ಅನೇಕ ನಟ-ನಟಿಯರು ಮೂಲತಃ ರಂಗಭೂಮಿಯಲ್ಲೇ ಸೇವೆಸಲ್ಲಿಸಿ ಉತ್ತಮ ಹೆಸರು ಪಡೆದು ಸಿನಿಮಾಗಳಲ್ಲಿ ಅಭಿನಯಿಸಿ, ಖ್ಯಾತಿ ಪಡೆದಿದ್ದಾರೆ ಎಂದರು.
ಸಹಕಾರ ಅಗತ್ಯ:  ವೃತ್ತಿ ರಂಗಭೂಮಿ ಸಂಸ್ಥೆಗಳು ಉಳಿಯುವುದೆ ದುಸ್ತರವಾಗಿರುವ ಇಂದಿನ ದಿನಗಳಲ್ಲಿ ನಾಟಕ ಕಲೆಗಳಿಗೆ ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕು. ವೃತ್ತಿ ರಂಗಭೂಮಿ ಉಳಿಸಲು ಹಾಗೂ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲಾ ಕೇಂದ್ರ, ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ನಾಟಕ ಪ್ರದರ್ಶನಕ್ಕೆ ಟೆಂಟ್‌ಗಳನ್ನು ಹಾಕಲು ಹೆಚ್ಚಿನ ಹಣದ ಹೊರೆಯಾಗುವುದರಿಂದ ಕಡಿಮೆ ಧರದಲ್ಲಿ ಸ್ಥಳ ನೀಡಬೇಕು. ಇಲ್ಲವೇ ರಂಗಮಂದಿರಗಳನ್ನು ಸರ್ಕಾರ ಅಲ್ಪಪ್ರಮಾಣದ ಬಾಡಿಗೆ ನಿಗದಿಗೊಳಿಸಬೇಕು. ರಂಗಭೂಮಿ ಹಿನ್ನಲೆಯಿಂದ ಬಂದು ಖ್ಯಾತಿ ಪಡೆದ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿರುವುದು ನಮಗೆ ಸಂತಸ, ಹೆಮ್ಮೆ ತಂದಿದೆ. ವೃತ್ತಿ ರಂಗಭೂಮಿ ಬೆಳವಣಿಗೆಗೆ ಸರ್ಕಾರ ಸೂಕ್ತ ರೀತಿ ಪ್ರೋತ್ಸಾಹ ನೀಡುತ್ತದೆ ಎಂಬ ನಿರೀಕ್ಷೆ ಇದೆ ಎಂದರು.
ಮಸಾಶನ ಹೆಚ್ಚಿಸಿ: 15ರಿಂದ 20 ವರ್ಷಗಳ ಹಿಂದೆ ನೂರಾರು ನಾಟಕ ಕಂಪನಿಗಳು ರಾಜ್ಯದಲ್ಲಿದ್ದವು. ಆದರೆ ಇತ್ತೀಚೆಗೆ ಇವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿವೆ. ನಿರಂತರ ನಾಟಕ ಪ್ರದರ್ಶನ ನಡೆಸುತ್ತಿವೆ. ಉಳಿದ ನಾಟಕ ಕಂಪನಿಗಳು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿವೆ. ರಂಗಭೂಮಿ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಸಾವಿರ ರು. ನಿಂದ ರು. 2 ಸಾವಿರಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ನಾಟಕ ಸಂಘದ ವ್ಯವಸ್ಥಾಪಕ ಮಹಾದೇವಪ್ಪ ಹುಣಿಸ್ಯಾಳ್ ಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.