ಬಳ್ಳಾರಿ

ಪುಸ್ತಕ ಉದ್ಯಮ ಮಾಧ್ಯಮವಾಗಲಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 19
ಪುಸ್ತಕ ಮಾರಾಟ ಉದ್ಯಮವಾಗಿದ್ದು, ಅದು ಮಾಧ್ಯಮವಾಗಬೇಕು. ಅಂದಾಗ ಮಾತ್ರ ಸಮಾಜಕ್ಕೆ ಪುಸ್ತಕಗಳ ನಿಜವಾದ ಅರ್ಥ ತಿಳಿಯುತ್ತದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ರಂಗರಾಜ್ ವನದುರ್ಗ ಅಭಿಪ್ರಾಯಪಟ್ಟರು.
ಅವರು ನಗರದ ಜನತಾ ಬಜಾರ್ ಮಳಿಗೆಯಲ್ಲಿ ಕರಾವಳಿ ಪ್ರಕಾಶನ ಏರ್ಪಡಿಸಿರುವ ಬೃಹತ್ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿದಂತೆ ಸಮಾಜದ ಜನರ ಹಿತಕ್ಕಾಗಿ ಪುಸ್ತಕಭಾಗ್ಯ ಯೋಜನೆಯೊಂದನ್ನು ಜಾರಿಗೆ ತರಬೇಕು. ಈ ಮೊದಲು ಶಿಕ್ಷಣ, ಪುಸ್ತಕಗಳು ಮಾಧ್ಯಮಗಳಾಗಿದ್ದವು. ಆದರೆ, ಪ್ರಸ್ತುತ ದಿನಗಳಲ್ಲಿ ಅದೇ ಉದ್ಯಮವಾಗಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದರು.
ಸಾಮಾಜಿಕ ಜವಾಬ್ದಾರಿ ಇದೆ: ಪ್ರಕಾಶಕ, ಬರಹಗಾರ, ಪುಸ್ತಕಗಳು ಒಂದಾಗಬೇಕು. ಇಂದು ಓರ್ವ ಪ್ರಕಾಶಕನ ಮೇಲೆ ಸಾಮಾಜಿಕ ಜವಾಬ್ದಾರಿಯಿದ್ದು, ಅದನ್ನು ಆತ ಸಮರ್ಥವಾಗಿ ನಿಭಾಯಿಸಬೇಕೆಂದರೆ, ಪುಸ್ತಕಗಳನ್ನು ಮಾಧ್ಯಮಗಳನ್ನಾಗಿ ಭಾವಿಸಬೇಕು. ಪ್ರಸ್ತುತ ಬೃಹತ್ ಉದ್ಯಮವಾಗಿ ಬೆಳೆಯುತ್ತಿರುವ ಪ್ರಕಾಶನ ಸಂಸ್ಥೆಗಳ ಎದುರು ಕರಾವಳಿ ಪ್ರಕಾಶನ ಓದುಗ ಮತ್ತು ಬರಹಗಾರರ ನಡುವೆ ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ವತಃ ಓದುಗ ಮತ್ತು ಬರಹಗಾರನಾದ ನನಗೆ ಅತೀವ ಸಂತಸದ ವಿಷಯ ಎಂದರು.
ಪುಸ್ತಕಗಳೇ ಸ್ನೇಹಿತರು: ಕಾರ್ಯಕ್ರಮದಲ್ಲಿ ಟಿ.ಜಿ. ವಿಠ್ಠಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೇಖಕ ರಾಬರ್ಟ್ ಸೌತೆ ಪ್ರಕಾರ, ಪುಸ್ತಕಗಳೆ ಅತಿ ಹತ್ತಿರವಿರುವ ಸ್ನೇಹಿತರು. ಮನುಷ್ಯನ ಬುದ್ಧಿ ವಿಕಾಸಕ್ಕೆ ಹಾದಿ ತೋರಿಸುವ ಮಾಧ್ಯಮ ಪುಸ್ತಕ. ಇಂದಿನ ದೃಶ್ಯ ಮಾಧ್ಯಮದ ಪ್ರಭಾವದಿಂದ ಓದುಗರ ಸಂಖ್ಯೆ ಕಡಿಮೆಯಾಗಿದ್ದು, ನೋಡುವವರಿಗೆ ತಮಗೆಲ್ಲದರ ಬಗ್ಗೆ ಅರಿವಿದೆ ಎಂಬ ಹುಂಬತನಕ್ಕೆ ಜನರು ಒಳಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೃಶ್ಯ ಕ್ಷಣಿಕ ಪುಸ್ತಕದ ಜ್ಞಾನ ನಿರಂತರ. ಈ ಸತ್ಯವನ್ನು ಅರಿಯುವುದು ಇಂದಿನ ಜನರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು. ಯುವ ಬರಹಗಾರ ಕೆ. ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ವರ್ತಮಾನದ ಜಗತ್ತಿನಲ್ಲಿ ಪುಸ್ತಕಗಳು ಕಣ್ಣುಗಳಾಗಿ ವರ್ತಿಸುತ್ತಿವೆ. ಜಾಗತೀಕರಣದ ಪ್ರಭಾವದಿಂದಾಗಿ ಉಂಟಾದ ಅನೇಕ ತಲ್ಲಣಗಳ ಮಧ್ಯೆಯೂ ಕನ್ನಡ ಸಾಹಿತ್ಯ ಹುಲುಸಾಗಿ ಬರುತ್ತಿರುವುದು ಸಮಾಧಾನಕರ ಸಂಗತಿ ಎಂದರು.
ಪ್ರದರ್ಶನ ವ್ಯವಸ್ಥಾಪಕ ಬಿ. ಜಗದೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಶಾಂತ, ಅಶೋಕ್, ಪ್ರವೀಣ್, ಸಂಗಮೇಶ್ ಸೇರಿದಂತೆ ಮತ್ತಿತರರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.