ಬಳ್ಳಾರಿ

4 ತಿಂಗಳಲ್ಲಿ 371 ಕಲಂ ಅನುಷ್ಠಾನ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 26
ಮುಂದಿನ ನಾಲ್ಕು ತಿಂಗಳೊಳಗೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸಂವಿಧಾನದ 371 ಜೆ ತಿದ್ದುಪಡಿ ಅನುಷ್ಠಾನಕ್ಕೆ ಬರಲಿದೆ. ಇದರಿಂದಾಗಿ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವಾರ್ತಾ ಇಲಾಖೆ ವತಿಯಿಂದ ಪ್ರಕಟಿಸಿದ ರಾಜ್ಯ ಸರ್ಕಾರದ ನೂರು ದಿನ ನೂರಾರು ನಿರ್ಣಯ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 371 ಜೆ ತಿದ್ದುಪಡಿ ಕುರಿತು ಸಚಿವ ಸಂಪುಟದ ಉಪಸಮಿತಿ ಸಿಎಂಗೆ ವರದಿ ಸಲ್ಲಿಸಿತ್ತು, ಸರ್ಕಾರ ವರದಿಯಲ್ಲಿ ಸ್ಪಲ್ಪ ಮಾರ್ಪಾಡುಗೊಳಿಸಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದೆ. 3-4 ತಿಂಗಳಲ್ಲಿ ತಿದ್ದುಪಡಿ ಜಾರಿಯಾಗಲಿದೆ. ಅಲ್ಲದೆ ಈ ತಿದ್ದುಪಡಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಸೇರಿದಂತೆ ಇತರ ನೇಮಕಾತಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದು, ತುರ್ತಾಗಿ ತಿದ್ದುಪಡಿ ಅನುಷ್ಠಾನಕ್ಕೆ ಬಂದು, ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಹೈಕ ಮಂಡಳಿಗೆ ರು. 65 ಕೋಟಿ: ಸರ್ಕಾರ ಹೈಕ ಅಭಿವೃದ್ಧಿ ಮಂಡಳಿಗೆ ರು. 65 ಕೋಟಿ ನೀಡಿದೆ. ಇದರಲ್ಲಿ ರು. 7.42 ಕೋಟಿ ಬಳ್ಳಾರಿಗೆ ನೀಡಲಾಗಿದೆ. ಹೈಕ ಅಭಿವೃದ್ಧಿ ಮಂಡಳಿಗೆ ನೀಡಿರುವ ಅನುದಾನವನ್ನು ನಂಜುಂಡಪ್ಪ ವರದಿ ಅನುಸಾರವಾಗಿ ಹೈಕದಲ್ಲಿನ ತಾಲೂಕುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇನ್ನು ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ನೆನಗುದಿಗೆ ಬಿದ್ದಿದ್ದ 102 ಗ್ರಾಮಗಳ ರು. 56 ಕೋಟಿ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಥಗಿತವಾದ ವೈ. ಕಗ್ಗಲ್ ಏತನೀರಾವರಿ ಯೋಜನೆ ಸೇರಿದಂತೆ ಇತರ ಏತನೀರಾವರಿ ಯೋಜನೆಗಳ ಕುರಿತು ಗಮನ ಸೆಳೆದಾಗ, ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಯಾವ ಯಾವ ಏತನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂಬ ಮಾಹಿತಿ ನೀಡುವಂತೆ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಿಗೆ ಸೂಚಿಸಲಾಗಿದೆ, ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಚಾಲನೆ ನೀಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಎರಡು ತಿಂಗಳಲ್ಲಿ ವರದಿ: ತುಂಗಭದ್ರಾ ಜಲಾಶಯದ ಹೂಳೆತ್ತಲು ವೈಜ್ಞಾನಿಕ ದೃಷ್ಟಿಯಿಂದ ಕಷ್ಟದ ಕೆಲಸ ಎಂದು ನೀರಾವರಿ ತಜ್ಞರು ತಿಳಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕುರಿತು ಇನ್ನೆರಡು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲಾಗಿದೆ. ವರದಿ ನೀಡಿದ ನಂತರ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಹಾಗೂ ಜನಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ, ನದಿಯ ಮೂಲಕ ಜಲಾಶಯದಿಂದ ಹರಿದು ಹೋಗುವ ಹೆಚ್ಚುವರಿ ನೀರಿನ ಬಳಕೆ ಕುರಿತು ನಿರ್ಧರಿಸಲಾಗುತ್ತದೆ. ಇನ್ನು ಕೆರೆ ಒತ್ತುವರಿ ಸಹಿಸುವುದಿಲ್ಲ, ಕೆರೆ ಒತ್ತುವರಿಯಾಗಿರುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಜಿಪಂ ಉಪ ಕಾರ್ಯದರ್ಶಿ ನಂದೀಶ್, ಅಪರ ಜಿಲ್ಲಾಧಿಕಾರಿ ವೆಂಕಟೇಶ ಹಾಗೂ ವಾರ್ತಾಧಿಕಾರಿ ಎಚ್. ಶ್ರೀನಿವಾಸ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.