ಕಮಲಕ್ಕೆ ಕೈ ತಿರುಗೇಟು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 28
ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಾಗ ಅಂದು ಬಿಜೆಪಿಯು ಹಳೆಕೋಟೆ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ನಾಗರತ್ನಮ್ಮ ಅವರನ್ನು ಆಪರೇಷನ್ ಕಮಲದ ಮೂಲಕ ತನ್ನತ್ತ ಸೆಳೆದು ಜಿಲ್ಲಾ ಪಂಚಾಯ್ತಿಯ ಮೇಲೆ ಬಿಜೆಪಿ ಬಾವುಟ ಹಾರಿಸಿದ್ದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು, ಇಂದು ಕಾಂಗ್ರೆಸ್ ಪಕ್ಷ ಬಿಜೆಪಿ ರತ್ನಮ್ಮ ಅವರನ್ನು ತನ್ನತ್ತ ಸೆಳೆದು ಜಿಪಂ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಿದೆ.
ರೆಡ್ಡಿ ಸಹೋದರರ ಆಪರೇಷನ್ ಕಮಲವು ಇದೀಗ ಅವರಿಗೆ ಮುಳುವಾಗಿದೆ. ಅಂದು ಬೆಂಬಲ ನೀಡಿದ ನಾಗರತ್ನಮ್ಮ ಇದೀಗ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾಳೆ. ಅಂದಿನಂತೆ ಇಂದು ರೆಡ್ಡಿ ಸಹೋದರರು ಹಾಗೂ ಬಿ. ಶ್ರೀರಾಮುಲು ಪ್ರಾಬಲ್ಯ ಹೊಂದಿದ್ದರೆ, ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ಕಷ್ಟವಾಗುತ್ತಿತ್ತು. ಇದೀಗ ಅವರ ರಾಜಕೀಯ ಪ್ರಾಬಲ್ಯ ಕಡಿಮೆಯಾಗಿರುವುದರಿಂದ ಸುಲಲಿತವಾಗಿಯೇ ಜಿಲ್ಲಾ ಪಂಚಾಯ್ತಿಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದೆ.
ಇದರಿಂದಾಗಿ ಪ್ರತಿ ಹಂತದಲ್ಲಿ ರಾಜಕೀಯವಾಗಿ ಅಧಿಕಾರದಿಂದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ದೂರ ಸರಿಯುತ್ತಾ ಹೋಗುತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭೆಯವರೆಗೆ ಜಿಲ್ಲೆಯಲ್ಲಿ ಅಧಿಕಾರ ಹೊಂದಿದ ಅವರಿಗೆ, ಇದೀಗ ಪ್ರತಿ ಹಂತದಲ್ಲೂ ಹಿನ್ನಡೆ ಅನುಭವಿಸಬೇಕಾಗಿದೆ. ಇನ್ನು ಲೋಕಸಭೆ ಚುನಾವಣೆ ಮಾತ್ರ ಬಾಕಿ ಉಳಿದಿದೆ. ಅದರಲ್ಲಿ ಇವರನ್ನು ಜಿಲ್ಲೆಯ ಜನತೆ ಕೈ ಹಿಡಿಯುತ್ತಾರೋ ಅಥವಾ ರಾಜಕೀಯವಾಗಿ ಎಳ್ಳುನೀರು ಬಿಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ಬಿಜೆಪಿ, ಬಿಎಸ್ಸಾರ್ ಒಂದಾಗಿಸಿದ ಕೈ: ಬಿಜೆಪಿ ತಮ್ಮನ್ನು ಸರಿಯಾಗಿಸಿ ನಡೆಸಿಕೊಂಡಿಲ್ಲ ಎಂದು ಬಿಜೆಪಿಯ ವಿರುದ್ಧ ಕೆಂಡಮಂಡಲವಾಗಿಯೇ ಬಿಎಸ್ಸಾರ್ ಕಾಂಗ್ರೆಸ್ ಎಂಬ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ಬಿಜೆಪಿ ವಿರುದ್ಧವೇ ಸೆಡ್ಡು ಹೊಡೆದಿದ್ದ ಶ್ರೀರಾಮುಲು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಪಕ್ಷೇರವಾಗಿ ಗೆದ್ದು ಬಂದಿದ್ದರು. ಶ್ರೀರಾಮುಲು ಬಿಜೆಪಿ ಪಕ್ಷ ಬಿಟ್ಟಾಗ ಬಿಜೆಪಿ ಜಿಲ್ಲಾ ಪಂಚಾಯ್ತಿ ಕೆಲ ಸದಸ್ಯರು ಬಿಎಸ್ಸಾರ್ ಪಕ್ಷದ ಸದಸ್ಯರಾದರು. ಇದೀಗ ಬಿಎಸ್ಸಾರ್ ಸದಸ್ಯರೆಲ್ಲರೂ ಬಿಜೆಪಿ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ, ಬಿಎಸ್ಸಾರ್ ಎಂಬ ಭಿನ್ನತೆ ತೋರದೆ ಎಲ್ಲರಿಗೂ ಬಿಜೆಪಿ ವಿಪ್ ಜಾರಿ ಮಾಡಿತ್ತು. ಆದರೆ ಬಿಜೆಪಿ ಕೇವಲ ಕಣ್ಣುಮುಚ್ಚಿ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿಲ್ಲ, ಈ ಕುರಿತು ಬಿಎಸ್ಸಾರ್ ಪಕ್ಷದ ಮುಖಂಡರು ಒಪ್ಪಿಕೊಂಡ ನಂತರವೇ ವಿಪ್ ಜಾರಿ ಮಾಡಿದೆ ಎಂಬುದು ಗುಟ್ಟೇನಲ್ಲ. ಇದೀಗ ಕಾಂಗ್ರೆಸ್ ಪಕ್ಷವೇ ಬಿಜೆಪಿ ಹಾಗೂ ಬಿಎಸ್ಸಾರ್ ಪಕ್ಷವನ್ನು ಒಂದು ಮಾಡಲು ಕಾರಣವಾದಂತಾಗಿದೆ. ಭವಿಷ್ಯದಲ್ಲಿ ಬಿಜೆಪಿ, ಬಿಎಸ್ಸಾರ್ ಹೊಂದಾಣಿಕೆಗೆ ಇದು ಮೆಟ್ಟಿಲು ಆದರೂ ಆಶ್ಚರ್ಯವಿಲ್ಲ.
ಅಧ್ಯಕ್ಷರಾಯ್ಕೆಯಿಂದ ಬಿಜೆಪಿ ದೂರು: ಬಳ್ಳಾರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಓಬಿಸಿ ಎ ಮಹಿಳೆಗೆ ಮೀಸಲಾಗಿರುವುದರಿಂದ ಬಿಜೆಪಿಯಲ್ಲಿ ಸುಮಂಗಳಮ್ಮ ಗುಬಾಜಿ ಬಿಟ್ಟರೆ, ಯಾರು ಓಬಿಸಿ ಎ ಮಹಿಳೆ ವರ್ಗದ ಸದಸ್ಯರಿಲ್ಲ. ಇದರಿಂದಾಗಿ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಇದೀಗ ಅವಿಶ್ವಾಸ ಮಂಡನೆಯಿಂದಾಗಿ ಕೆಳಗಿಳಿಸಿದ ಸದಸ್ಯೆ ಸುಮಂಗಳಮ್ಮ ಗುಬಾಜಿ ಅವರು ನಾಮಪತ್ರ ಸಲ್ಲಿಸಲು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆ ಮೂಲಕ ಸಂಪೂರ್ಣವಾಗಿ ಬಿಜೆಪಿ ಅಧ್ಯಕ್ಷ ಆಯ್ಕೆ ಚುನಾವಣೆ ಸಂದರ್ಭದಲ್ಲಿ ತಂತ್ರ ಹೂಡಲು ನಿಸ್ಸಾಹಾಯಕವಾದಂತಾಗಿದೆ. ಇದು ಸಹಜವಾಗಿ ಕಾಂಗ್ರೆಸ್ಗೆ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಕಾರಣ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಏನಾದರೂ ಬದಲಾವಣೆಯಾಗಬಹುದು ಎಂಬ ಆತಂಕ ಕಾಂಗ್ರೆಸ್ಗೆ ಇಲ್ಲದಿರುವುದು.
ಇನ್ನು ಅಂದು ಬಿಎಸ್ಸಾರ್ಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ಸದಸ್ಯರು, ಬುಧವಾರ ನಡೆದ ಅವಿಶ್ವಾಸ ಮಂಡನೆಯ ಸಭೆಯಲ್ಲಿ ಕಾಂಗ್ರೆಸ್ಗೆ ಬೆಂಬಲವಾಗಿ ನಿಂತು, ತಾವು ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಉಳಿಯುವ ಸಂದೇಶ ನೀಡಿದಂತಿದೆ.
ಈ ಮೊದಲು ಎಲ್ಲಾ ಹಂತದ ರಾಜಕೀಯದಲ್ಲಿ ಪ್ರಭಾವ ಬೀರಿದ್ದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಇದೀಗ ಅಧಿಕಾರ ಇಲ್ಲದೇ ವಿಲವಿಲ ಒದ್ದಾಡುವಂತಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು, ತಂತ್ರ ರೂಪಿಸಲು ಜನಾರ್ದನ ರೆಡ್ಡಿ ಇಲ್ಲ. ಹೀಗಾಗಿ ಯಾವ ನಿರ್ಧಾರ ಕೈಗೊಂಡು ಮುಂದಡಿ ಇಡುತ್ತಾರೆ ಎಂದು ಜಿಲ್ಲೆಯ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

