ಖಾತ್ರಿಯಿಂದ ಬಾಳೆ ಹೊರಕ್ಕೆ
ಹಗರಿಬೊಮ್ಮನಹಳ್ಳಿ: ಬಾಳೆ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಒಂದು. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಪ್ರಸಕ್ತ ಸಾಲಿನಿಂದಲೇ ಬಾಳೆಯನ್ನು ಹೊರಗಿಡಲಾಗಿದೆ.
ಬಾಳೆ ಬೆಳೆ ಬಹು ವಾರ್ಷಿಕ ಬೆಳೆಯಾಗಿರುವ ಕಾರಣ ಅದನ್ನು ಖಾತ್ರಿ ಯೋಜನೆಯಲ್ಲಿ ಅನುಷ್ಟಾನಗೊಳಿಸದಿರುವಂತೆ ಎಲ್ಲ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ತೋಟಗಾರಿಕೆ ನಿರ್ದೇಶನಾಲಯ ಈಗಾಗಲೇ ಆದೇಶ ಹೊರಡಿಸಿದೆ. ಮುಖ್ಯವಾಗಿ ಹೊಸದಾಗಿ ಬಾಳೆ ತೋಟ ಅಭಿವೃದ್ಧಿ ಪಡಿಸಬೇಕೆಂದುಕೊಂಡಿದ್ದ ಬೆಳೆಗಾರರಿಗೆ ಇಲಾಖೆಯ ಈ ಆದೇಶ ಆತಂಕ ಮೂಡಿಸಿದೆ. ಒಂದೆರಡು ಎಕರೆ ಪ್ರದೇಶದ ಸಣ್ಣ ಹಿಡುವಳಿದಾರರಿಗೆ ಆದೇಶದಿಂದ ಅವರ ವಾರ್ಷಿಕ ಬಾಳೆ ನಿರ್ವಹಣಾ ವೆಚ್ಚದ ಭಾರ ಹೆಚ್ಚಾಗುವುದಂತೂ ಖಚಿತ.
ಧಾರ್ಮಿಕ ವಿಧಿ ವಿಧಾನಗಳು, ಶುಭ ಕಾರ್ಯಕ್ರಮಗಳಲ್ಲಿ ಬಾಳೆ ಹಣ್ಣು ಹೆಚ್ಚಿನ ಪ್ರಾಶಸ್ತ್ಯಗಳಿಸಿಕೊಂಡಿದೆ. ಪಚ್ಚೆ ಸೇರಿದಂತೆ ನಾನಾ ತಳಿ, ಜಾತಿಯ ಬಾಳೆಯನ್ನು ನಾಡಿನ ವಿವಿಧ ಭಾಗಗಳಲ್ಲಿನ ಸುಮಾರು 90,338 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅತಿವೃಷ್ಟಿ ಸೇರಿದಂತೆ ನಾನಾ ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿದರೆ, ವಾಣಿಜ್ಯ ದೃಷ್ಟಿಯಿಂದ ಬೆಳೆಗಾರರಿಗೆ ಬಾಳೆ ಬಂಪರ್ ಬೆಳೆಯಾಗಿ ಪರಿಣಮಿಸಿದೆ. ಅಧಿಕ ನೀರು ಅಗತ್ಯವಾಗಿರುವುದರಿಂದ ನೀರಾವರಿ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಇತ್ತೀಚಿಗೆ ಬಿಸಿಲೂರು ಹಗರಿಬೊಮ್ಮನಹಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಬಯಲು ಪ್ರದೇಶಗಳಲ್ಲಿ ಕೊಳವೆಬಾವಿ ಆಧಾರಿತ ನೀರಾವರಿ ಪ್ರದೇಶಗಳಲ್ಲೂ ಬಾಳೆ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿದೆ.
ಬೆಳೆಗಾರರಲ್ಲಿ ಅಸಮಾಧಾನ: ಆದರೆ ಖಾತ್ರಿ ಯೋಜನೆಯಡಿ ಬಾಳೆ ನಾಟಿ ಮಾಡಲು ಅಗತ್ಯವಾದ ಗುಂಡಿ ತೋಡಲು, ಭೂಮಿ ಅಭಿವೃದ್ಧಿಪಡಿಸಲು ಎಕರೆಗೆ ಸುಮಾರು ರು. 20 ಸಾವಿರ ವೆಚ್ಚದ ಕಾಮಗಾರಿ ಕೈಗೊಳ್ಳುವ ಅವಕಾಶವಿತ್ತು. ಬಾಳೆ ಬೆಳೆಗಾರರು ತಾವು ಅಭಿವೃದ್ಧಿಪಡಿಸುವ ಕಾಮಗಾರಿಗಳ ವಿವರಗಳನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಿದರೆ ಇಲಾಖೆ ಎಸ್ಟಿಮೇಟ್ ಮಾಡಿ ಗ್ರಾಮ ಪಂಚಾಯ್ತಿಗಳಿಗೆ ಕಳುಹಿಸುತ್ತಿತ್ತು. ಖಾತ್ರಿ ಕ್ರಿಯಾಯೋಜನೆಯಲ್ಲಿ ಈ ಕಾಮಗಾರಿಗಳನ್ನು ಅಳವಡಿಸಿ, ಅನುಮೋದನೆ ಗ್ರಾಪಂ ನೀಡಿದರೆ, ಖಾತ್ರಿಯಡಿ ಮಂಜೂರಾದ ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿತ್ತು. ಆದರೆ ಈಗ ಪ್ರಸಕ್ತ ಸಾಲಿನಿಂದ ಈ ಬೆಳೆಯನ್ನು ಖಾತ್ರಿ ಯೋಜನೆಯಿಂದ ಕೈಬಿಡುವಂತೆ ಇಲಾಖೆ ಸೂಚಿಸಿರುವುದರಿಂದ ಈ ಸಾಲಿನಿಂದಲೇ ಖಾತ್ರಿ ಲಾಭ ಬಾಳೆ ಬೆಳೆಗಾರರನಿಗಿಲ್ಲದಂತಾಗಿದೆ. ಸರ್ಕಾರದ ಈ ನಿರ್ಧಾರ ಬಾಳೆ ಬೆಳೆಗಾರರನಲ್ಲಿ ಅಸಮಾಧಾನ ಮೂಡಿಸಿದೆ.
ಸರ್ಕಾರ ಸೂಚನೆ: ಜುಲೈ 16ರಂದು ತೋಟಗಾರಿಕೆ ಇಲಾಖೆ ನಿರ್ದೇಶನಾಲಯ ಹೊರಡಿಸಿದ ಆದೇಶ ಪ್ರತಿಯನ್ವಯ, ಇದು ಬಹುವಾರ್ಷಿಕ ಬೆಳೆಯಾಗಿಲ್ಲ, ಹೀಗಾಗಿ ತೋಟಗಾರಿಕೆ ಬೆಳೆಗಳಿಗೆ ತಗುಲುವ ಪರಿಷ್ಕೃತ ಅಂದಾಜು ಬೇಸಾಯ ವೆಚ್ಚದಲ್ಲಿ ಬಾಳೆಯನ್ನು ಪರಿಗಣಿಸದಿರಲು ಹಾಗೂ ಅನುಷ್ಠಾನಗೊಳಿಸದಿರಲು ಈ ಮೂಲಕ ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ಆಗು-ಹೋಗುಗಳಿಗೆ ತಾವೇ ನೇರ ಜವಾಬ್ದಾರರಾಗುತ್ತೀರಿ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಸ್ಪಷ್ಟವಾಗಿ ಸೂಚಿಸಿದೆ.
ರಾಜ್ಯದಲ್ಲಿ ಸುಮಾರು 90,338 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿ ಪಚ್ಚೆಬಾಳೆ ಹಾಗೂ ಸುಮಾರು 3,250 ಹೆಕ್ಟೇರ್ ಪ್ರದೇಶದಲ್ಲಿ ಇತರೆ ತಳಿ ಬಾಳೆಯನ್ನು ಬೆಳೆಯಲಾಗುತ್ತಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ ವಾರ್ಷಿಕ ಸುಮಾರು 1,42,613 ಮೆಟ್ರಿಕ್ ಟನ್‌ನಷ್ಟು ಬಾಳೆ ಇಳುವರಿ ಬರುತ್ತಿದೆ.
ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

