ಬಳ್ಳಾರಿ

ಸಿಮೆಂಟ್ ಕಂಪನಿಗಳಿಂದ ವಂಚನೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 4
ಗುಲ್ಬರ್ಗ ಜಿಲ್ಲೆಯ ಬಿರ್ಲಾ ಒಡೆತನದ ವಾಸವದತ್ತ, ರಾಜಶ್ರೀ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ಒಂದುವರೆ, ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸದೆ, ಕೇವಲ ಹೊರಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿವೆ. ಕಾರ್ಮಿಕರಿಗೆ ವೇತನ ನೀಡದೆ ಮೂರು ವರ್ಷಗಳಿಂದ ವಂಚಿಸುತ್ತಿವೆ ಎಂದು ಶ್ರಮಜೀವಿ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಚಂದ್ರಶೇಖರ್ ಹಿರೇಮಠ್ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕಾರ್ಮಿಕ ಪ್ರಾದೇಶಿಕ ಆಯುಕ್ತರು, ಕಾರ್ಖಾನೆಗಳಿಂದ ಇನ್ನೆರಡು ದಿನಗಳಲ್ಲಿ ಕಾರ್ಮಿಕರಿಗೆ ದೊರೆಯಬೇಕಿರುವ ಸೆಂಟ್ರಲ್ ಸಿಮೆಂಟ್ ವೇಜ್ ಬೋರ್ಡ್‌ನ ವೇತನ ಕೊಡಿಸದಿದ್ದಲ್ಲಿ ಬಳ್ಳಾರಿಯಿಂದ ಹಿಂತಿರುಗದೆ, ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಕಾಯ್ದೆ ಉಲ್ಲಂಘನೆ: ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಒಳಪಡುವ ಸಿಮೆಂಟ್ ಕಾರ್ಖಾನೆಗಳು, ದೆಹಲಿಯ ಕಾರ್ಮಿಕ ಇಲಾಖೆ ಮುಖ್ಯ ಆಯುಕ್ತರ ನೇತೃತ್ವದಲ್ಲಿ 2011ರಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಸೆಂಟ್ರಲ್ ಸಿಮೆಂಟ್ ವೇಜ್ ಬೋರ್ಡ್ ನಿಗದಿಪಡಿಸಿದ ವೇತನ ನೀಡುತ್ತೇವೆಂದು ಅಲ್ಟ್ರಾಟೆಕ್ ಮತ್ತು ವಾಸವದತ್ತಾ ಸಿಮೆಂಟ್ ಆಡಳಿತ ಮಂಡಳಿಗಳು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ, ಅಲ್ಟ್ರಾಟೆಕ್ ಮತ್ತು ವಾಸವದತ್ತಾ ಆಡಳಿತ ಮಂಡಳಿಗಳು ಈ ನೀತಿ ಜಾರಿಗೊಳಿಸದೆ, ಕಾರ್ಮಿಕ ಕುಟುಂಬಗಳಿಗೆ ಅನ್ಯಾಯವೆಸಗುತ್ತಿವೆ. ಕಾಯ್ದೆಯನ್ನು ಉಲ್ಲಂಘಿಸುತ್ತಿವೆ ಎಂದು ದೂರಿದ ಅವರು, ಈ ಕುರಿತು ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಿ, ಕೇಂದ್ರ ಕಾರ್ಮಿಕ ಇಲಾಖೆ ಗಮನ ಸೆಳೆದಿದ್ದರೂ ಕಂಪೆನಿಗಳ ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೆ, ಅವರೊಂದಿಗೆ ಶಾಮೀಲಾಗಿ ಕಾರ್ಮಿಕರ ಜೀವನದೊಂದಿಗೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ 320 ಕಾರ್ಯ ನೌಕರರು: ಗುಲ್ಬರ್ಗ ಜಿಲ್ಲೆಯಲ್ಲಿರುವ ಬಿರ್ಲಾ ಒಡೆತನದ ಸಿಮೆಂಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 4 ಸಾವಿರ ಕಾರ್ಮಿಕರ ಪೈಕಿ, ಕೇವಲ 320 ಕಾಯಂ ನೌಕರರು ಇದ್ದಾರೆ. ಇನ್ನುಳಿದವರೆಲ್ಲ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರೆ ಆಗಿದ್ದಾರೆ. ಆದರೆ ಕಾರ್ಖಾನೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ನಂತರ, ಐಟಿಐ, ಡಿಪ್ಲೋಮಾ ಅಭ್ಯರ್ಥಿಗಳು ಮಾಡುವ ಕೆಲಸವನ್ನು ಕಡಿಮೆ ವೇತನಕ್ಕೆ ಇವರಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯವಾಗಿದ್ದು, ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
 ಕಾರ್ಖಾನೆ ಹಾಗೂ ಮಾಲೀಕರ ವಿರುದ್ಧ ಸಾಕಷ್ಟು ಬಾರಿ ಹೋರಾಟ ನಡೆಸಲಾಗಿದೆ. ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡುವ ಮಾಲೀಕರು, ಕಾರ್ಮಿಕರ ಬೆಂಬಲಕ್ಕೆ ಯಾರನ್ನೂ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಐಎಎಸ್ ಅಧಿಕಾರಿಯೊಬ್ಬರು ಕಾರ್ಮಿಕರ ಕುರಿತು ತಯಾರಿಸಿದ್ದ ವರದಿಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳದೆ, ಸರ್ಕಾರಕ್ಕೆ ಸುಳ್ಳು ವರದಿ ನೀಡಿ, ಕಾರ್ಮಿಕರನ್ನು ಶೋಷಿಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮರಿಯಪ್ಪ ಪೂಜಾರಿ, ನರಸಪ್ಪ ಯಾದಗಿರಿ, ರಮಾಕಾಂತ ಕುಲಕರ್ಣಿ, ನಾಗರಾಜ್, ಜಗದೀಶ್ ಸ್ವಾಮಿ, ನಾಗೇಂದ್ರ, ದೇವೇಂದ್ರಪ್ಪ ಬಾಪೂರ, ಅರ್ಜುನ್, ಬಾಲರಾಜ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.