ಸ್ವಾವಲಂಬಿ ಜೀವನ ಸಾಗಿಸಿ
ಹೊಸಪೇಟೆ: ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸರಿಯಾಗಿ ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಸೆಟ್ಟಿ ಉಮಾಪತಿ ಹೇಳಿದರು. ನಗರದ ಸರ್ದಾರ್ ಪಟೇಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲೋಟಗಳನ್ನು ಹಾಗೂ ಶಾಲಾ ಶಿಕ್ಷಕರಿಗೆ ಉಚಿತ ತುಳಸಿ ಸಸಿಗಳನ್ನು ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪರಿಸರ ಕಾಳಜಿ ವಹಿಸಿ ಸಸಿ ನೆಟ್ಟು ಅವುಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು. ಜಯ ಕರ್ನಾಟಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಕಟಗಿ ರಾಮಕೃಷ್ಣ, ತಾಲೂಕಾಧ್ಯಕ್ಷ ಪರಶುರಾಮ, ಪಿ. ವೆಂಕಟೇಶ್, ಎನ್. ವೆಂಕಟೇಶ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಕುಮಾರಸ್ವಾಮಿ ಶೆಟ್ಟಿ, ಬಿ. ಬಸವರಾಜ, ಕಟಗಿ ಪ್ರಕಾಶ್ ಬಾಬು, ಕ್ಷಮಾ ಸೇರಿದಂತೆ ಇತರರು ಭಾಗವಹಿಸಿದ್ದರು. ವಿಠೋಬ ಸ್ವಾಗತಿಸಿದರು. ಪಾಂಡುರಂಗ ನಿರೂಪಿಸಿದರು.
ಗಂಗಾಮತ ಎಸ್ಟಿಗೆ ಸೇರಿಸಿ
ಹಗರಿಬೊಮ್ಮನಹಳ್ಳಿ: ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಹಾಗೂ ಅಂಬಿಗರ ಚೌಡಯ್ಯನವರ ಜನ್ಮದಿನಾಚರಣೆಯನ್ನು ಸರ್ಕಾರಿ ರಜೆ ದಿನವನ್ನಾಗಿ ಘೋಷಿಸುವಂತೆ ಗಂಗಾಮತ ಸಮಾಜ ಬಾಂಧವರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. ಸಮಾಜದ ಬಾರಿಕರ ಬಾಪೂಜಿ ಮಾತನಾಡಿ, ಕಳೆದ ಸರ್ಕಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಘೋಷಿಸಿ, ಸರ್ಕಾರಿ ಆಚರಣೆಯಾಗಿ ಜಾರಿಗೊಳಿಸಿತ್ತು. ಆದರೆ ಜಯಂತಿ ದಿನ ಸರ್ಕಾರಿ ರಜೆ ಘೋಷಣೆ ಮಾಡಿರಲಿಲ್ಲ. ಪ್ರತಿವರ್ಷ ಜನವರಿ 21 ಅಂಬಿಗರ ಚೌಡಯ್ಯನವರ ಜಯಂತಿ ದಿನವಾಗಿದ್ದು, ಈಗಿನ ಸರ್ಕಾರ ಈ ದಿನವನ್ನು ಸರ್ಕಾರಿ ರಜೆ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ತಾಲೂಕು ಮಟ್ಟದಲ್ಲಿ ಜಯಂತಿಗೆ ಅನುದಾನ ಕಲ್ಪಿಸುವುದು, ಗಂಗಾಮತ ಸಮಾಜಕ್ಕೆ ಸಂಬಂಧಿಸಿದ ಎಲ್ಲ ಉಪ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ ಶೇ. 6ಕ್ಕೆ ಹೆಚ್ಚಿಸುವುದು, ಗಂಗಾಮತ ಅಭಿವೃದ್ಧಿ ನಿಗಮ ರಚನೆ ಸೇರಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು. ಸಮಾಜದ ಅಧ್ಯಕ್ಷ ಅಂಬಾಡಿ ನಾಗರಾಜ, ಬಾರಿಕರ ನಿಂಗಪ್ಪ, ಸಿಹಿನೀರು ಫಕ್ಕೀರಪ್ಪ, ಜುಲ್ಪಿ ರಾಮಣ್ಣ, ಸರ್ದಾರ ಗೋವಿಂದಪ್ಪ, ಜಿ. ಮಂಜುನಾಥ, ಬಾರಿಕರ ಹುಲುಗಪ್ಪ, ಮುದ್ದಪ್ಪ, ಬಾರಿಕರ ಗಂಗಾಧರ, ಉಡುಚಪ್ಪ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.
ಇಂದು ಸಾಯಿರಾತ್ರಿ ಕಾರ್ಯಕ್ರಮ
ಬಳ್ಳಾರಿ: ತಾಲೂಕಿನ ಕಮ್ಮರಚೇಡು ಗ್ರಾಮದ ಶ್ರೀ ಕಲ್ಯಾಣಸ್ವಾಮಿ ಮಹಾಸಂಸ್ಥಾನ ಮಠದಲ್ಲಿ ಡಿ. 5ರಂದು ಗುರುವಾರ 178ನೇ ವರ್ಷದ ಶಿರಡಿ ಸಾಯಿಬಾಬ ಅವರ ಸಾಯಿರಾತ್ರಿ ಕಾರ್ಯಕ್ರಮ ಜರುಗಲಿದೆ. ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕುರುಗೋಡು ರಾಘವಾಂಕ ಮಠದ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಧೂಪದಾರತಿ, 6.30ಕ್ಕೆ ಶಿರಡಿ ಸಾಯಿಬಾಬ ಅವರ ಜೀವನ ಚರಿತ್ರೆಯ ಅಧ್ಯಯನ, ಅನಂತರ 9ಕ್ಕೆ ಅಮ್ಮುಲ ಸಾಂಬಶಿವರಾವು ಅವರ ಸತ್ಸಂಗ ಕಾರ್ಯಕ್ರಮ ಪ್ರದರ್ಶನ, ನಂತರ ಮಹಾ ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 6ರಂದು ಬೆಳಗ್ಗೆ 5.15ಕ್ಕೆ ಶಿರಡಿ ಸಾಯಿಬಾಬ ಅವರಿಗೆ ಕಾಕಡ ಆರತಿ, ನಂತರ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಬಳ್ಳಾರಿ ತಾಪಂ ಕೆಡಿಪಿ ಸಭೆ
ಬಳ್ಳಾರಿ: ತಾಪಂ ಕಚೇರಿಯಲ್ಲಿ ಡಿ. 5ರಂದು ಬೆಳಗ್ಗೆ 11 ಗಂಟೆಗೆ ಮಾಸಿಕ ಕೆಡಿಪಿ ಸಭೆ ನಡೆಯಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ತಾಪಂ ಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ತಿ ಫಸಲು ವಿಫಲ: ದೂರು
ಬಳ್ಳಾರಿ: ಜಿಲ್ಲೆಯಲ್ಲಿ 2013ರ ಮುಂಗಾರು ಹಂಗಾಮಿನಲ್ಲಿ ಮಹಿಕೊ ಕಂಪೆನಿಯಿಂದ ವಿತರಿಸಲಾದ ಕನಕ ಬಿಟಿ ಹತ್ತಿ ತಳಿ (7351) ಬೀಜದ ಬೆಳೆ ವಿಫಲವಾಗಿರುವುದಾಗಿ ರೈತರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಸಮೀಕ್ಷಾ ತಂಡಗಳನ್ನು ರಚಿಸಿ ಬೆಳೆ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರು ಈ ತಳಿಯನ್ನು ಬೆಳೆದು ಬೆಳೆ ಹಾನಿಗೊಳಗಾದ ಪಕ್ಷದಲ್ಲಿ ತಾವು ಬೀಜ ಖರೀದಿಸಿದ ರಸೀದಿ ಹಾಗೂ ಪಹಣಿಯನ್ನು ಲಗತ್ತಿಸಿ ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

