ನಾಳೆ ಹನುಮ ಮಾಲಾ ಕಾರ್ಯಕ್ರಮ
ಹೊಸಪೇಟೆ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಆಶ್ರಯದಲ್ಲಿ ಡಿ. 14ರಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ 'ಹನುಮ ಮಾಲಾ' ಕಾರ್ಯಕ್ರಮ ನಡೆಯಲಿದೆ ಎಂದು ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 6ರಂದು ವಿವಿಧ ಜಿಲ್ಲೆಗಳಲ್ಲಿ ಬಜರಂಗ ದಳದ ಕಾರ್ಯಕರ್ತರು ಸ್ಥಾನೀಯ ಆಂಜನೇಯ ದೇವಸ್ಥಾನದಲ್ಲಿ ಮಾಲಾ ಧಾರಣೆ ಮಾಡಿ, ಒಂಬತ್ತ ದಿನಗಳ ವ್ರತಾಚರಣೆ ಮಾಡಿ ಡಿ. 14ರಂದು ಅಂಜನಾದ್ರಿ ಬೆಟ್ಟಕ್ಕೆ ಬಂದು ಆಂಜನೇಯನ ದರ್ಶನ ಪಡೆಯುವರು. ಡಿ. 13ರಂದು ಸಂಜೆ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಕೀರ್ತನಾ ಮೆರವಣಿಗೆ ನಡೆಸಿ ಹೊರಡುವ ಹನುಮ ಮಾಲಾಧಾರಿಗಳು ಡಿ. 14ರಂದು ಬೆಳಗ್ಗೆ ಆನೆಗುಂದಿಯ ದುರ್ಗಾ ಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂದರು.
ಡಿ. 14ರಂದು ದುರ್ಗಾ ಬೆಟ್ಟದಲ್ಲಿ ಬೆಳಗ್ಗೆ 9ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ಮಾತನಾಡುವರು. ಜಿಲ್ಲೆಯ ವಿವಿಧ ಮಠಾಧೀಶರು ಹಾಗೂ ವಿಹಿಂಪ ರಾಜ್ಯ ಪ್ರಮುಖರು ಭಾಗವಹಿಸುವರು. ಸಭೆ ಅನಂತರ ದುರ್ಗಾ ಬೆಟ್ಟದಿಂದ-ಆಂಜನಾದ್ರಿ ಬೆಟ್ಟದವರೆಗೆ ಮಾಲಾಧಾರಿಗಳು ಹಾಗೂ ಸಾರ್ವಜನಕರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ಅನಂತರ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯನ ದರ್ಶನ ಮಾಡಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಶಾದಿಭಾಗ್ಯಕ್ಕೆ ವಿರೋಧ: ತಾರತಮ್ಯವಿಲ್ಲದೆ ಆಡಳಿತ ನಡೆಸಬೇಕಾದ ರಾಜ್ಯ ಸರ್ಕಾರ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರ ವೋಟಿಗಾಗಿ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿರುವುದು ಖಂಡನೀಯ. ಬಡವರು ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುವುದಾದರೆ ಎಲ್ಲ ಜಾತಿವರ್ಗದವರೆಗೂ ವಿಸ್ತರಿಸಲಿ, ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ನೀಡುವುದು ಸಮಾಜದಲ್ಲಿ ದ್ವೇಷ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು. ರಾಜ್ಯ ಸರ್ಕಾರ ವಂದೇ ಮಾತರಂ ಹಾಡಿನೊಂದಿಗೆ ಅಧಿವೇಶನದ ಸದನ ಆರಂಭಿಸುವ ನಿರ್ಧಾರವನ್ನು ಬಜರಂಗದಳ ಸ್ವಾಗತಿಸುತ್ತದೆ. ಇದು ಭಾರತದ ಎಲ್ಲ ರಾಜ್ಯಗಳಿಗೂ ಮಾದರಿಯಾಗಬೇಕು ಎಂದು ಹೇಳಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ನಗರ ಸಂಚಾಲಕ ದಿವಾಕರ, ಅಪ್ಪರಾವ್ ಸಾನಬಾಳ್, ಎನ್.ಟಿ. ರಾಘು ಸೇರಿದಂತೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

