ಬಳ್ಳಾರಿ

ಹಂಪಿ ಉತ್ಸವ: 19ರಂದು ಸಭೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 12
ಹಂಪಿ ಉತ್ಸವವನ್ನು ಆಕರ್ಷಕ, ಜನೋತ್ಸವವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಡಿ. 19ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.
ನಗರದ ಅಲ್ಲೀಪುರ ಜಲಾಶಯಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಡಿ. 19ರಂದು ನಡೆಯಲಿರುವ ಸಭೆಯಲ್ಲಿ ಉತ್ಸವಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಸಭೆಯಲ್ಲಿ ದಿ. ಎಂ.ಪಿ. ಪ್ರಕಾಶ್‌ರ ಕುಟುಂಬ ಸದಸ್ಯರೊಂದಿಗೆ ಜಿಲ್ಲೆಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷ, ಹೊಸಪೇಟೆ ನಗರಸಭೆ ಆಯುಕ್ತರು, ಹಂಪಿ ಗ್ರಾಪಂ ಅಧ್ಯಕ್ಷ ಭಾಗವಹಿಸಿಲಿದ್ದಾರೆ ಎಂದರು.
ಹೊಸ ಯೋಜನೆಗಳು: ಕಾರ್ಮಿಕರ ಸುರಕ್ಷತೆಗಾಗಿ ಹಲವು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ವಸತಿ ಸಮುಚ್ಚಯಕ್ಕೆ ನಿರ್ಣಯ, ಪಾಲಿಕೆಯಲ್ಲಿ ಜಮೀನು ಗುರುತಿಸಲಾಗಿದೆ. ಸುರಕ್ಷತೆ ಕುರಿತು ಗುತ್ತಿಗೆದಾರರಿಗೆ ಮತ್ತು ಕಂಪನಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕಾರ್ಮಿಕರನ್ನು ಯಾವುದೆ ಕಾರಣಕ್ಕೂ ಅಸಡ್ಡೆಯಿಂದ ಕಾಣುವಂತಿಲ್ಲ. ಅಂತಹದ್ದೇನಾದರೂ ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು. ಡಿ. 7ರಂದು ಮುಖ್ಯಮಂತ್ರಿ ಅವರು ಬಳ್ಳಾರಿಗೆ ಭೇಟಿ ನೀಡುವವರಿದ್ದರು, ಆದರೆ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಕೃಷಿ ಸಚಿವ ಶರದ್ ಪವಾರ್‌ರೊಂದಿಗೆ ಮಾತನಾಡಲು ತೆರಳಿದ್ದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬರಲು ಆಗಿಲ್ಲ ಎಂದರು.
ತೋರಣಗಲ್ಲು ಸಮೀಪ ಕುಸಿದಿರುವ ಬ್ರಿಡ್ಜ್‌ನ್ನು ಹಂಪಿ ಉತ್ಸವದೊಳಗಾಗಿ ನಿರ್ಮಿಸಲಾಗುವುದು. ಡಿ. 15ರಂದು 2 ದಿನಗಳ ಕಾಲ ಕಾಲುವೆಯಲ್ಲಿ ನೀರನ್ನು ಸ್ಥಗಿತಗೊಳಿಸಿ, ಮಣ್ಣಿನ ಪರೀಕ್ಷೆ ನಡೆಯಲಿದೆ. ನಂತರ ಡಿಸೆಂಬರ್ ಅಂತ್ಯದೊಳಗೆ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈಗಾಗಲೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.