ಇಂದು ಜಿಪಂ ಸಾಮಾನ್ಯ ಸಭೆ
ಬಳ್ಳಾರಿ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಡಿಸೆಂಬರ್ 28ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯಕ್ ತಿಳಿಸಿದ್ದಾರೆ. ಸಭೆಯು ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಅವರು ಸೂಚಿಸಿದ್ದಾರೆ.
ಇಂದು ಕೃಷಿ ಸಚಿವರ ಪ್ರವಾಸ
ಬಳ್ಳಾರಿ: ಕೃಷಿ ಸಚಿವ ಕೃಷ್ಣ ಬೈರೇಗೌಡ ಡಿ. 28ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಸಚಿವರು ಅಂದು ಸಂಜೆ 4.30ಕ್ಕೆ ಬಳ್ಳಾರಿ ನಗರಕ್ಕೆ ಆಗಮಿಸಿ ಕೃಷಿ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಬೀಜ ನಿಗಮದ ಕ್ಷೇತ್ರ ತಪಾಸಣೆ ನಡೆಸಲಿದ್ದಾರೆ. ಡಿ. 29ರಂದು ಬೆಳಗ್ಗೆ 11 ಗಂಟೆಗೆ ಸಿಂಧೂರಿ ಆಗ್ರೋಟೆಕ್ ಸಂಸ್ಥೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಜಿಪಂ ಸಭಾಂಗಣದಲ್ಲಿ ಕೃಷಿಗೆ ಪೂರಕವಾದ ಇಲಾಖೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಅಹವಾಲು ಸ್ವೀಕಾರ
ಬಳ್ಳಾರಿ: ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶಿದ್ಲಿಂಗಣ್ಣವರ್ ಎಸ್.ಆರ್. ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಡಿ. 28ರಿಂದ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಇತ್ಯರ್ಥಪಡಿಸಲಿದ್ದಾರೆ. ಡಿ. 28ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಿರುಗುಪ್ಪ ಮತ್ತು ಹೂವಿನಹಡಗಲಿ ತಾಲೂಕು, ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಹಗರಿಬೊಮ್ಮನಹಳ್ಳಿ ತಾಲೂಕು, 30ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಡೂರು ಮತ್ತು ಕೂಡ್ಲಿಗಿ ತಾಲೂಕು, 31ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಸಿರುಗುಪ್ಪ, ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಲ್ಲಿ ಪೊಲೀಸ್ ಉಪಾಧೀಕ್ಷಕ ಎಚ್. ಎಸ್. ಗಂಗಾಧರಪ್ಪ ಮತ್ತು ಪೊಲೀಸ್ ನಿರೀಕ್ಷಕರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಪೊಲೀಸ್ ಉಪಾಧೀಕ್ಷಕ ಮತ್ತು ಪೊಲೀಸ್ ನಿರೀಕ್ಷಕರು ಸಂಬಂಧಿಸಿದ ತಾಲೂಕುಗಳ ಪ್ರವಾಸಿ ಮಂದಿರದಲ್ಲಿ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಆಗಮಿಸಿ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಕ್ರಿಸ್ಮಸ್: ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
ಬಳ್ಳಾರಿ: ಕ್ರಿಸ್ಮಸ್ ಹಬ್ಬದ ನಿಮಿತ್ತ ಭಗತ್ ಸಿಂಗ್ ಯೂತ್ ಅಸೋಸಿಯೇಷನ್ನಿಂದ ಸ್ಥಳೀಯ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಬ್ರೆಡ್ಗಳನ್ನು ವಿತರಿಸಲಾಯಿತು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಷಾಷಾವಲಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗಗಳಿಂದ ಮುಕ್ತರಾಗಬೇಕೆಂದು ಸಲಹೆ ನೀಡಿದರು. ಮುರಳಿ, ಮಹಮ್ಮದ್ ಗೌಸ್, ಹರಿ, ರಘು ಇದ್ದರು.
ಸಲಹಾ ಸಮಿತಿಗೆ ನೇಮಕ
ಬಳ್ಳಾರಿ: ಬಳ್ಳಾರಿ ನಗರದ ರೇಲ್ವೆ ನಿಲ್ದಾಣದ ಸಲಹಾ ಸಮಿತಿಗೆ ನಾಲ್ವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ, ಸೌತ್ ವೆಸ್ಟರ್ನ್ ರೇಲ್ವೆ ಹುಬ್ಬಳ್ಳಿಯ ಹಿರಿಯ ವಾಣಿಜ್ಯ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ರೇಲ್ವೆ ನಿಲ್ದಾಣದ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ. ಚಂದ್ರಶೇಖರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯ ಡಾ. ರಾಜಶೇಖರ್ ಎಸ್. ಗಾಣಿಗಾರ್, ಜಿಲ್ಲಾ ವಾಲ್ಮೀಕಿ ಸಂಘದ ಕಾರ್ಯದರ್ಶಿ ಬಿ. ಗೌರಯ್ಯ ಹಾಗೂ ಬಳ್ಳಾರಿ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ವಿ. ಎರುಕುಲಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಸ್ಮಾ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಧರಣಿ
ಕೂಡ್ಲಿಗಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗೆ ಕಲಂ 371(ಜೆ) ತಿದ್ದುಪಡಿಯಾಗಿದ್ದರೂ ಸರ್ಕಾರದಿಂದ ವಿವಿಧ ಹೊಸ ನೇಮಕಾತಿ, ಬಡ್ತಿ ಸೇರಿ ಅನೇಕ ಕಾರ್ಯಗಳ ಚಾಲನೆಗೆ ವಿಳಂಬ ಮತ್ತು ಎಸ್ಮಾ ಕಾಯಿದೆ ವಿರೋಧಿಸಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಶುಕ್ರವಾರ ಧರಣಿ ನಡೆಸಲಾಯಿತು. ತಾಲೂಕಿನ ಎಲ್ಲ ಇಲಾಖೆ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ನೌಕರರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಕೆ. ನಾಗನಗೌಡ, ಯಜಮಾನಪ್ಪ, ವೈ. ಅಶ್ವತ್ಥ್, ಪಿಡಿಒ ಎಚ್. ಬೋರಣ್ಣ, ಜೆಇ ಎಚ್. ನಾಗಪ್ಪ ಮಾತನಾಡಿದರು. ನಂತರ ತಹಸೀಲ್ದಾರ್ ಜವರೇಗೌಡರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಖಜಾಂಚಿ ಎಂ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಪಿ. ನಾಗರಾಜಗೌಡ, ಆರೋಗ್ಯ, ಕಂದಾಯ, ತಾಪಂ, ಜಿಪಂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಲೋಕಾ ದಾಳಿ: ದಾಖಲೆ ಪರಿಶೀಲನೆ
ಹೊಸಪೇಟೆ: ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗದಗನ ಜೆಸ್ಕಾಂನ ನಿರೀಕ್ಷಕ ಕರಿಬಸವನಗೌಡ ಅವರ ಮಾವನ ಮನೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರುವ ಮನೆಯ ಮೇಲೆ ಶುಕ್ರವಾರ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.ಗದಗನ ಜೆಸ್ಕಾಂನ ನಿರೀಕ್ಷಕ ಕರಿಬಸವನಗೌಡ ಅವರ ಹೆಂಡತಿಯ ತಾತ ಚಿಂತಾಮಣೆಪ್ಪ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಣ್ಣನವರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹಾಂತರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿ.ಐ. ರುದ್ರೇಶ್ ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

