ಬಳ್ಳಾರಿ

ಸಂಕ್ಷಿಪ್ತ ಸುದ್ದಿ

Published On :

ಪ್ರತಿಭಾ ಕಾರಂಜಿ: ರಾಜ್ಯಮಟ್ಟಕ್ಕೆ ಆಯ್ಕೆ
ಹೂವಿನಹಡಗಲಿ: ತಾಲೂಕಿನ ಹೊಳಲು ಸಾಧನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬಳ್ಳಾರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢಶಾಲಾ ವಿಭಾಗದ ಚರ್ಚಾ ಸ್ಪರ್ಧೆಯಲ್ಲಿ ಸಾಧನಾ ಶಾಲೆಯ ಎ. ಪದ್ಮಶ್ರೀ (ಪ್ರಥಮ) ಆಶುಭಾಷಣ ಸ್ಪರ್ಧೆಯಲ್ಲಿ (ದ್ವಿತೀಯ) ಸ್ಥಾನ ಪಡೆದಿದ್ದಾಳೆ. ಪ್ರಾಥಮಿಕ ಶಾಲಾ ವಿಭಾಗದ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿ ಎ. ಪ್ರವೀಣ (ದ್ವಿತೀಯ) ಬಹುಮಾನ ಪಡೆದಿದ್ದಾನೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಪೂಜಾರ್, ಕಾರ್ಯದರ್ಶಿ ಅಜಯಕುಮಾರ್, ಸಮನ್ವಯಾಧಿಕಾರಿ ಬಿ. ಕೋಟೆಪ್ಪ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಜಯಕರ್ನಾಟಕ ಸಂಘಟನೆಗೆ ನೇಮಕ
ಬಳ್ಳಾರಿ: ಜಯಕರ್ನಾಟಕ ಸಂಘಟನೆಯ ಜಿಲ್ಲೆಯ ಸಿರುಗುಪ್ಪ ತಾಲೂಕು ಘಟಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ರಾಮಕೃಷ್ಣ ಅವರನ್ನು ಜಯಕರ್ನಾಟಕ ಸಂಘಟನೆ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಸಂಘಟನೆ ಜಿಲ್ಲಾಧ್ಯಕ್ಷ ಪಿ. ರವೀಂದ್ರ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಸಮ್ಮೇಳನದಲ್ಲಿ ನಾರಿನಾಳ ಸನ್ಮಾನಕ್ಕೆ ಆಯ್ಕೆ
ಗಂಗಾವತಿ: ಮಡಿಕೇರಿಯಲ್ಲಿ ಜ.7ರಿಂದ 9ರ ವರೆಗೆ ಜರುಗುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಸಿ.ಎಚ್. ನಾರಿನಾಳ ಅವರನ್ನು ಸನ್ಮಾನಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ಆಮಂತ್ರಣ ಪತ್ರ ನೀಡಿ ಆಹ್ವಾನಿಸಿದರು. ನಗರದ ಸಿ.ಎಚ್. ನಾರಿನಾಳ ಅವರ ನಿವಾಸಕ್ಕೆ ತೆರಳಿದ ಜಿಲ್ಲಾ ಕಸಾಪ ಪದಾಧಿಕಾರಿಗಳು ನಾರಿನಾಳ ಅವರನ್ನು ಸಮ್ಮೇಳನಕ್ಕೆ ಸ್ವಾಗತಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಸಾಹಿತ್ಯ ಪರಿಷತ್‌ನ ಅಕ್ಬರ್ ಕಾಲಿಮಿರ್ಚಿ, ಶಿವಾನಂದ ಮೇಟಿ, ಶಿ.ಕಾ. ಬಡಿಗೇರ, ಶ್ರೀದೇವಿ ಕೃಷ್ಣಪ್ಪ, ಆರ್.ಎಸ್. ಸರಗುಣಚಾರ್ ಇದ್ದರು.
ತೊಗರಿ ಬೆಳೆ ಕ್ಷೇತ್ರೋತ್ಸವ
ಗಂಗಾವತಿ: ಗಂಗಾವತಿ ಕೃಷಿ ವಿಜ್ಞಾನ ಕೇಂದ್ರವು ಕೆ.ಹೂಸೂರು ಗ್ರಾಮದ ಬಸವರಾಜ ಸ್ವಾಮಿ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸಮಗ್ರ ಪೀಡೆ ಕ್ಷೇತ್ರೋತ್ಸವ ಏರ್ಪಡಿಸಿತ್ತು. ಕೀಟ ಶಾಸ್ತ್ರಜ್ಞ ಪಿ.ಆರ್. ಬದರಿ ಪ್ರಸಾದ ಅವರು ಸಮಗ್ರ ಪೀಡೆ ನರ್ವಿಹಣೆ ಬಗ್ಗೆ, ಬೇಸಾಯ ತಜ್ಞ ಆರ್.ಬಿ. ನೆಗಳೂರು ಅವರು ತೊಗರಿಯ ವಿವಿಧ ತಳಿಗಳು, ಗುಣಧರ್ಮ ಸೂಕ್ತ ಬೇಸಾಯ ಪದ್ಧತಿಗಳ ಬಗ್ಗೆ ತಿಳಿಸಿದರು. ಪಶು ತಜ್ಞ ಡಾ. ಮಹಾಂತೇಶ ಎಂ.ಟಿ. ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ವಿಷ್ಣುವರ್ಧನ ಪುಣ್ಯಸ್ಮರಣೆ
ಕೊಪ್ಪಳ:  ಡಾ. ವಿಷ್ಣುವರ್ಧನ ಅವರ 4ನೇ ಪುಣ್ಯಸ್ಮರಣೋತ್ಸವ ಹಾಗೂ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಅಂಗವಾಗಿ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಡಿ. 30ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ ಗೆಳೆಯರ ಬಳಗದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆಂದು ಮಾರುತಿ ಅಬ್ಬಿಗೇರಿ ತಿಳಿಸಿದ್ದಾರೆ.
ಜ. 1ರಂದು ನಗೆಹಬ್ಬ ಕಾರ್ಯಕ್ರಮ
ಬಳ್ಳಾರಿ: ರಾಘವ ಮೆಮೋರಿಯಲ್ ಅಸೋಸಿಯೇಷನ್ ಹಾಗೂ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ಹೊಸ ವರ್ಷ 2014ರ ನಿಮಿತ್ತ ಜ. 1ರಂದು ಸಂಜೆ 6ಕ್ಕೆ ನಗರದ ರಾಘವ ಕಲಾಮಂದಿರದಲ್ಲಿ ನಗೆಹಬ್ಬ ಕಾರ್ಯಕ್ರಮ ಏರ್ಪಡಿಸಿದೆ. ಮಹದೇವ ಸತ್ತಿಗೇರಿ, ಇಂಧುಮತಿ ಸಾಲಿಮಠ ಮತ್ತು ಮಿಮಿಕ್ರಿ ಮಹಾಂತೇಶ ಇವರ ತಂಡದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ದಿನಾಚರಣೆ
ಬಳ್ಳಾರಿ:  ಜಿಲ್ಲಾ ಗೃಹ ರಕ್ಷಕದಳದ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಡಿ. 31ರಂದು ಶೆಟ್ರು ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲಾ ಗೃಹ ರಕ್ಷಕದಳ ಇಲಾಖೆ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಅಣುಕು ಪ್ರದರ್ಶನ ನಡೆಯಲಿದೆ ಎಂದು ಸಮಾದೇಷ್ಟ ಎಂ.ಎ. ಷಕೀಬ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿ ಅಂಚೆ ವಿಭಾಗವು ಅಂಚೆ ಪೇದೆಗಳ ಮತ್ತು ಗ್ರೂಪ್ ಡಿ ಹುದ್ದೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಂಚೆ ಇಲಾಖೆ ಅಧೀಕ್ಷಕರು ತಿಳಿಸಿದ್ದಾರೆ. ಅಂಚೆ ಪೇದೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 3, 2014ರಂದು ಕೊನೆಯ ದಿನವಾಗಿದೆ. ಗ್ರೂಪ್ ಡಿ ಹುದ್ದೆಗಳಿಗೆ ಜನವರಿ 13, 2014ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಢಿಢಿಢಿ.್ಞಛ್ಠಟಿಛಡಿಛ್ಞಛಠ್ಟಡಡಿ.್ಜ್ಟಢ.್ಝಟಿ, ಢಿಢಿಢಿ.್ಝಟಿಜ್ಝಛಠ್ಟಡಡಿ.್ಜ್ಟಢ.್ಝಟಿ ಅಥವಾ ಸಮೀಪದ ಅಂಚೆ ಕಚೇರಿಗಳನ್ನು ಸಂಪರ್ಕಿಸಬಹುದು.
ಚರಂಡಿಯಲ್ಲಿ ಹೂಳು: ಜನತೆಗೆ ರೋಗ ಭೀತಿ
ಮಲ್ಲಿಗೆ ಹೂವಿನಿಂದ ಘಮಘಮ ಸುವಾಸನೆಯುಕ್ತ ಹೂವಿನಹಡಗಲಿ ಈಗ ಹೊಲಸು ನಾರುತ್ತಿದೆ. ಸ್ವಚ್ಛತೆಗೆ ಸಾಕಷ್ಟು ಅನುದಾನವನ್ನು ವೆಚ್ಚ ಮಾಡುವ ಪುರಸಭೆ ತಿಂಗಳುಗಟ್ಟಲೆ ಚರಂಡಿಗಳ ಸ್ವಚ್ಛತೆ ಮಾಡುತ್ತಿಲ್ಲ. ಇದರಿಂದ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ದುರ್ವಾಸನೆಯುಕ್ತವಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಪಟ್ಟಣದ ಮುಖ್ಯ ಚರಂಡಿಗಳನ್ನು ಮಾತ್ರ ಸ್ವಚ್ಛತೆ ಮಾಡುವ ಪುರಸಭೆ ಕೆಲವು ವಾರ್ಡ್‌ಗಳಲ್ಲಿ ಸಾರ್ವಜನಿಕರೆ ತಮ್ಮ ತಮ್ಮ ಮನೆಗಳ ಮುಂದೆ ಸ್ವಚ್ಛತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವರೆಗೂ ಈ ಭಾಗಗಳಲ್ಲಿ ಚರಂಡಿಯನ್ನೇ ನಿರ್ಮಾಣ ಮಾಡಿಲ್ಲ. ಮಣ್ಣು, ಹೊಲಸು ಚರಂಡಿಯಲ್ಲಿ ತುಂಬಿಕೊಂಡಿದೆ. ದುರ್ವಾಸನೆಯುಕ್ತ ಸ್ಥಳಗಳಲ್ಲಿ ಜನರು ಹೇಗೆ ವಾಸ ಮಾಡಬೇಕು.
ಚರಂಡಿ ಕಲುಷಿತ ವಾತಾರಣದಿಂದ ಜನರು ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ. ಆದ್ದರಿಂದ ಪುರಸಭೆ ಸ್ವಚ್ಛತೆಗೆ ಹೆಚ್ಚು ಮಾನ್ಯತೆ ನೀಡಿ ನೈರ್ಮಲ್ಯ ಕಾಪಾಡಬೇಕು. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತಮ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
- ಯಮನಪ್ಪ ಎಸ್., ಹನುಮಂತಪ್ಪ ಬಿ., ಪಟ್ಟಣ ನಿವಾಸಿಗಳು
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಬಳ್ಳಾರಿ: ಸಂವಿಧಾನದ 371(ಜೆ) ಕಲಂ ಶೀಘ್ರ ಅನುಷ್ಠಾನಗೊಳಿಸಬೇಕು. ಎಸ್ಮಾ ಕಾಯಿದೆ ಕೈಬಿಡಬೇಕು. ಬಳ್ಳಾರಿ ನಗರ ಪಾಲಿಕೆಯನ್ನು ಬಿ ನಗರವೆಂದು ಪರಿಗಣಿಸಿ ಹೆಚ್ಚಿನ ಸೌಲಭ್ಯ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಸರ್ಕಾರಿ ನೌಕರರು ಇತ್ತೀಚೆಗೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಗಡಿಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸರ್ಕಾರಿ ನೌಕರರು ರಸ್ತೆಯುದ್ದಕ್ಕೂ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, 371(ಜೆ) ಕಲಂ ಪ್ರಕಾರ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿನ ಮೀಸಲಾತಿ ನೀಡುವ ಸರ್ಕಾರಿ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕೆಂದರು. ನಂತರ ಸಂಘದ ಮುಖಂಡರು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಕೆ. ರಾಮಕೃಷ್ಣ, ಪಿ. ನಾಗರಾಜ್, ಕೆ. ಹನುಮಂತಪ್ಪ, ಟಿ. ರಾಜಾರಡ್ಡಿ, ಎಂ. ಶಿವಾಜಿರಾವ್, ಮಾಜಿ ಅಧ್ಯಕ್ಷ ಕೆ. ಚಂದ್ರಶೇಖರ್, ಸರ್ಕಾರಿ ನೌಕರರು, ಸಂಘದ ಪದಾಧಿಕಾರಿಗಳು, ಇತರರು ಇದ್ದರು.
ಅಂತಾರಾಜ್ಯ ಕಳ್ಳನ ಬಂಧನ: ರು. 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬಳ್ಳಾರಿ: ವೈದ್ಯನೆಂದು ಜನರನ್ನು ವಂಚಿಸುತ್ತಿದ್ದ ಹಾಗೂ ಚಿನ್ನದ ಆಭರಣಗಳನ್ನು ಸಾರ್ವಜನಿಕರಿಂದ ದೋಚಿ ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಳ್ಳಾರಿ ಪೊಲೀಸರು ಬಂಧಿಸಿ, ಬಂಧಿತನಿಂದ ರು. 11 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿವೈಎಸ್ಪಿ ಮರುಗಣ್ಣನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಅಂತಾರಾಜ್ಯ ಕಳ್ಳ ಅಬ್ದುಲ್ ಖಾದರ್ ಅಲಿಯಾಸ್ ಡಾ. ಸಲೀಂ ಖುರೇಶಿ. ಈತನನ್ನು ಬಳ್ಳಾರಿಯ ಗಾಂಧಿನಗರ ಪೊಲೀಸರು ಮಹಾರಾಷ್ಟ್ರದ ಪೂನಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಕಳ್ಳ ಕರ್ನಾಟಕ - ಆಂಧ್ರಪ್ರದೇಶ ಸೇರಿದಂತೆ ಅಂತಾರಾಜ್ಯಗಳ ಸುಮಾರು 17 ಆಸ್ಪತ್ರೆಗಳಲ್ಲಿ ವೈದ್ಯನೆಂದು ಹೇಳಿಕೊಂಡು, ರೋಗಿಗಳನ್ನು ವಂಚಿಸುತ್ತಿದ್ದ ಈತನು, ರೋಗಿಗಳನ್ನು ಎಕ್ಸ್ ರೇ ತೆಗೆಸುವ ನೆಪದಲ್ಲಿ ಮೈಮೇಲಿನ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದನು. ಇಂತಹ ಅಪರಾಧದ ಅಡಿಯಲ್ಲಿ ಕಳ್ಳನು ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನು. ಜೈಲಿನಿಂದ ಬಿಡುಗಡೆಯಾದ ಮೇಲೆ ಅದೇ ಚಾಳಿ ಮುಂದುವರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾನ್ಸನ್, ಕ್ಯಾಟ್ ಬರೀಸ್ ಕಂಪನಿಗಳಿಗೆ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಂಚಿಸುತ್ತಾ, ಕಂಪನಿಯ ಜಾಹೀರಾತುಗಳಿಗೆ ಆಯ್ಕೆ ಮಾಡಿಕೊಳ್ಳುವುದಾಗಿ, ಶಾಲೆಗೆ ಕಂಪ್ಯೂಟರ್ ಉಪಕರಣಗಳನ್ನು ಕೊಡಿಸುವುದಾಗಿ ಹೇಳಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದನು.
ಕೆಲ ತಿಂಗಳ ಹಿಂದೆ ಬಳ್ಳಾರಿಯ ಸೇಂಟ್ ಜಾನ್ಸ್ ಶಾಲೆಯ ಶಿಕ್ಷಕರಿಗೂ ಜಾಹೀರಾತು ನೆಪದಲ್ಲಿ ನಾಲ್ಕು ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದನು. ಇಂಥ ಆಭರಣಗಳನ್ನು ರಾಜ್ಯದ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಇತರ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ನೇತೃತ್ವದಲ್ಲಿ ರಚನೆಯಾದ ಎರಡು ತಂಡಗಳ ಸಹಾಯದಿಂದಾಗಿ ಮಹಾರಾಷ್ಟ್ರದ ಪುಣೆದಲ್ಲಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.