ನಾಳೆ ವಿದ್ಯುತ್ ವ್ಯತ್ಯಯ
ಬಳ್ಳಾರಿ: ಜಿಲ್ಲೆಯ 110 ಕೆ.ವಿ. ಸಿರುಗುಪ್ಪ ಮತ್ತು ತೆಕ್ಕಲಕೋಟೆ ಲೈನ್ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿದ್ದರಿಂದ ತೆಕ್ಕಲಕೋಟೆ, ಸಿರಿಗೇರಿ ಕ್ರಾಸ್ ಮತ್ತು ರುದ್ರಪದ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ ಪಟ್ಟಣ ಮತ್ತು ಹಳ್ಳಿಗಳಿಗೆ ಜೂ.12ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಸಹಕರಿಸುವಂತೆ ಜೆಸ್ಕಾಂನ ಗ್ರಾಮೀಣ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ಕಣ್ಣಿ ಜಂಬಯ್ಯ ಬೀಳ್ಕೊಡುಗೆ
ಹೊಸಪೇಟೆ: ಸ್ಥಳೀಯ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತರಾದ ಕಣ್ಣಿ ಜಂಬಯ್ಯ ಅವರನ್ನು ಅಂಚೆ ಕಚೇರಿ ಸಿಬ್ಬಂದಿ ಶನಿವಾರ ಸನ್ಮಾನಿಸಿ ಬೀಳ್ಕೊಟ್ಟರು. ಪೋಸ್ಟ್ ಮಾಸ್ಟರ್ ಬಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಬ್ಯಾಂಕ್ ಅಧ್ಯಕ್ಷ ಹಾಗೂ ಪೋಸ್ಟ್ ಫೋರಮ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ನಿರ್ದೇಶಕ ಎಸ್.ವಿ. ನಾಯಕ್, ಆರ್ಯವೈಶ್ಯ ಸಂಘದ ಭೂಪಾಳ್ ರಾಘವೇಂದ್ರ ಶೆಟ್ಟಿ ಮಾತನಾಡಿದರು. 33 ವರ್ಷಗಳ ಕಾಲ ಸೇವೆ ಸಲ್ಲಿಸಿ, ಗ್ರಾಹಕರ ಪ್ರೀತಿ ವಿಶ್ವಾಸ ಪಾತ್ರರಾಗಿದ್ದ ಕಣ್ಣಿ ಜಂಬಯ್ಯರವರನ್ನು ತುಂಬ ಹೃದಯದಿಂದ ಶ್ಲಾಘಿಸಿದರು.
ಶನೇಶ್ವರ ಜಯಂತ್ಯುತ್ಸವ
ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಶ್ರೀಶನೇಶ್ವರ ದೇವಸ್ಥಾನದಲ್ಲಿ ಶನಿವಾರ ಶನೇಶ್ವರ ಜಯಂತ್ಯುತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮತ್ತು ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ರಾತ್ರಿ ಪುರಾಣ ಪ್ರವಚನ ನಂತರ ಬೆಳಗ್ಗೆ ತುಂಗಭದ್ರೆಗೆ ತೆರಳಿ ಗಂಗಾಪೂಜೆ ನೆರವೇರಿಸಿದರು. ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ವಿವಿಧ ವಾದ್ಯ ಸಂಗೀತಗಳೊಂದಿಗೆ ಮಹಿಳೆಯರು ಕಳಸ ಹಿಡಿದು ದೇವಾಲಯಕ್ಕೆ ಆಗಮಿಸಿದರು. ಅಭಿಷೇಕ, ಬೆಳ್ಳಿ ಕವಚ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಶನೇಶ್ವರ ದೇವರ ದರ್ಶನ ಪಡೆದುಕೊಂಡರು.
ಇಂದಿನಿಂದ ಹಣ್ಣುಗಳ ಪ್ರದರ್ಶನ, ಮಾರಾಟ
ಬಳ್ಳಾರಿ: ನಗರದ ತಾಲೂಕು ಕಚೇರಿ ಹಿಂಭಾಗದಲ್ಲಿರುವ ಜಿಲ್ಲಾ ತೋಟಗಾರಿಕಾ ಇಲಾಖೆ ಆವರಣದಲ್ಲಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜೂ.11ರಿಂದ 13ರ ವರೆಗೆ ಏರ್ಪಡಿಸಲಾಗಿದೆ. ಬಳ್ಳಾರಿಯ ತೋಟಗಾರಿಕೆ ಉಪನಿರ್ದೇಶಕರು(ಜಿಪಂ), ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಹಾಗೂ ಜಿಲ್ಲಾ ಹಾಪ್ಕಾಮ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಜೂ.11ರಂದು 10.30ಕ್ಕೆ ರಾಜ್ಯ ಕಾರ್ಮಿಕ ಸಚಿವರೂ ಆದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ ನಾಯಕ್ ಮೇಳ ಉದ್ಘಾಟಿಸಲಿದ್ದಾರೆ. ಬಳ್ಳಾರಿ ನಗರ ಶಾಸಕ ಅನಿಲ್ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ತಜ್ಞರು, ಪ್ರಗತಿಪರ ರೈತರಿಂದ ತಾಂತ್ರಿಕ ಸಲಹೆ ಹಾಗೂ ವಿಚಾರ ವಿನಿಮಯ ಮತ್ತು ಮಾರುಕಟ್ಟೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ.
6 ತೊಲೆ ಚಿನ್ನದ ಸರ ಕಳ್ಳತನ
ಬಳ್ಳಾರಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 6 ತೊಲೆ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ನಗರದ ಕೋಟೆ ಪ್ರದೇಶದಲ್ಲಿ ನಡೆದಿದೆ. ಕೋಟೆ ಪ್ರದೇಶದಲ್ಲಿರುವ ನೀರಾವರಿ ಇಲಾಖೆಯಲ್ಲಿ ಟೈಪಿಸ್ಟಾಗಿ ಕಾರ್ಯನಿರ್ವಹಿಸುತ್ತಿದ್ದ ಸುನಂದಾ ಅವರು ಕಚೇರಿಗೆ ನಡೆದು ಹೋಗುತ್ತಿದ್ದಾಗ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುನಂದಾ ಅವರ ಕೊರಳಲ್ಲಿದ್ದ 60 ಗ್ರಾಂ ಮಾಂಗಲ್ಯ ಹಾರಿಸಿಕೊಂಡು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಸಹಾಯಕ್ಕೆ ದುರ್ಗಾ ಪೊಲೀಸ್ ತಂಡ ಭೇಟಿ ನೀಡಿತು. ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ, ಡಿವೈಎಸ್ಪಿ ಮುರುಗಣ್ಣನವರ್, ಸಿಪಿಐ ಉಮೇಶ್ ಈಶ್ವರ ನಾಯಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

