ಬಳ್ಳಾರಿ

ಕನ್ನಡ ವಿಭಾಗ ಆರಂಭಿಸಲು ಒತ್ತಾಯ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 16
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಕನ್ನಡ ವಿಭಾಗ ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಒಕ್ಕೂಟ ಕುಲಪತಿ ಡಾ. ಮಂಜಪ್ಪ ಹೊಸಮನೆ ಆವರಿಗೆ ಮನವಿ ಪತ್ರ ಸಲ್ಲಿಸಿತು.
ಶನಿವಾರ ಸಂಜೆ ಕುಲಪತಿಗಳನ್ನು ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳು, ಕನ್ನಡ ಸ್ನಾತಕೋತ್ತರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ವಿಭಾಗ ಇಲ್ಲದೇ ತೀವ್ರ ತೊಂದರೆಯಾಗಿದೆ. ಆಸಕ್ತ ವಿದ್ಯಾರ್ಥಿಗಳು ಕನ್ನಡ ಎಂಎ ವಿದ್ಯಾಭ್ಯಾಸಕ್ಕೆ ದೂರದ ಸ್ಥಳಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವಿಭಾಗವನ್ನು ಕೇಂದ್ರ ಸ್ಥಾನದಲ್ಲೇ ಆರಂಭಿಸುವಂತೆ ಆಗ್ರಹಿಸಿತು.
ವಿವಿ ಆವರಣದಲ್ಲೇ ಇಲ್ಲ: ವಿವಿ ಕೇಂದ್ರ ಆವರಣದಲ್ಲಿ ಇದುವರೆಗೂ ಕನ್ನಡ ವಿಭಾಗವನ್ನು ಆರಂಭಿಸದಿರುವುದು ಅಚ್ಚರಿಯ ವಿಷಯ. ಹೊಸದಾಗಿ ಸ್ಥಾಪಿಸಲಾದ ವಿವಿಯಲ್ಲಿ ಒಂದೇ ಬಾರಿಗೆ ಕೋರ್ಸ್‌ಗಳನ್ನು ಸ್ಥಾಪಿಸಲು ಅಡ್ಡಿ ಆತಂಕಗಳಿರುತ್ತವೆ. ಆದರೆ 4 ವರ್ಷಗಳಲ್ಲಿ ಹಲವು ಕೋರ್ಸ್‌ಗಳು ಆರಂಭವಾಗಿವೆ. ನಂದಿಹಳ್ಳಿ ಪಿಜಿ ಸೆಂಟರ್ ಬಿಟ್ಟರೆ, ಮತ್ತೊಂದು ಕಡೆ ಗಂಗಾವತಿಯಲ್ಲಿ ಎಂಎ ಕನ್ನಡ ವಿಭಾಗ ಆರಂಭಿಸಲಾಗಿದೆ. ಆದರೆ ವಿವಿಯ ಕೇಂದ್ರ ಆವರಣದಲ್ಲೇ ಕನ್ನಡ ವಿಭಾಗ ಇಲ್ಲದಿರುವುದು ಆತಂಕಕ್ಕೀಡು ಮಾಡಿದೆ. ಮಾತೃಭಾಷೆಯ ಕುರಿತು ಅವಜ್ಞೆಗೆ ಕಾರಣವಾದರೂ ಏನು ತಿಳಿಯುತ್ತಿಲ್ಲ. ಪ್ರಸಕ್ತ ಸಾಲಿನಲ್ಲಾದರೂ ಕನ್ನಡ ವಿಭಾಗವನ್ನು ಆರಂಭಿಸಬೇಕು. ಹಾಗೆಯೇ ಭಾಷಾಶಾಸ್ತ್ರ ವಿಭಾಗವನ್ನೂ ತೆರೆಯುವುದು ತುಂಬಾ ಅಗತ್ಯವಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪಠ್ಯಕ್ರಮ ಗೊಂದಲ ನಿವಾರಣೆ: ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷಾ ಸಾಮಾನ್ಯ ವಿಷಯವನ್ನು ಬೋಧಿಸಲು ಏಕರೂಪ, ಬಹುರೂಪ ಪಠ್ಯ ಅಳವಡಿಕೆ ಬಗ್ಗೆ ಕನ್ನಡ ಪ್ರಾಧ್ಯಾಪಕರು ಕುಲಪತಿಗಳೊಂದಿಗೆ ಇದೇ ಸಂದರ್ಭದಲ್ಲಿ ಚರ್ಚಿಸಿದರು. ಏಕರೂಪ ಪಠ್ಯದಿಂದ ಆಗುವ ಅನುಕೂಲ ಮತ್ತು ಅನಾನುಕೂಲ, ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಹಲವಾರು ದೃಷ್ಟಿಕೋನದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಸೋಮವಾರದಿಂದಲೇ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕನ್ನಡ ವಿಷಯವನ್ನು ಮಾತ್ರ ಈ ವರ್ಷದ ಮಟ್ಟಿಗೆ ಹಳೆಯ ಪಠ್ಯಕ್ರಮ ಮುಂದುವರೆಸಲು ಕುಲಪತಿಗಳು ಸೂಚಿಸಿದರು. ಮುಂದಿನ ವರ್ಷದಿಂದ ಏಕರೂಪದ ಪಠ್ಯ ಅಳವಡಿಕೆ ಖಚಿತ ಎಂಬ ಅಂಶವನ್ನು ಒತ್ತಿ ಹೇಳಿದರು.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್. ಮಂಜುನಾಥ, ಗೌರವಾಧ್ಯಕ್ಷ ಪ್ರೊ. ವರಕುಮಾರಗೌಡ, ಕಾರ್ಯದರ್ಶಿ ಸಿ. ದೇವಣ್ಣ, ಡಾ. ಮಾನಕರಿ ಶ್ರೀನಿವಾಸಾಚಾರ್ಯ, ಡಾ. ಕನಕೇಶಮೂರ್ತಿ, ಡಾ. ಚಂದ್ರಬಾಬು, ಡಾ. ಶ್ಯಾಮೂರ್ತಿ, ಕೊಟ್ರಪ್ಪ, ಜಂಗಮನಿ, ಗಾಯತ್ರಿ ಬಾವಿಕಟ್ಟಿ, ಡಾ.ಕೆ. ಬಸಪ್ಪ, ಡಾ. ವಿಜಯಲಕ್ಷ್ಮಿ ಇತರರು ಇದ್ದರು.

ಮಹಿಳೆ ಕಾಣೆ: ದೂರು ದಾಖಲು
ಬಳ್ಳಾರಿ: ಬಳ್ಳಾರಿ ಸ್ತ್ರೀ ಸೇವಾನಿಕೇತನದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಘಟನೆ ನಗರದ ಕೌಲ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ರತ್ನ (27) ಎಂಬ ಮಹಿಳೆಯೇ ಕಾಣೆಯಾಗಿದ್ದು, ಸೇವಾನಿಕೇತನದ ಅಧೀಕ್ಷಕಿ ಬಿ. ಗಂಗಮ್ಮ ಕೌಲ್‌ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಆಕಾಶ ನೀಲಿ ಬಣ್ಣದ ಸೀರೆ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆಗಳನ್ನು ಬಲ್ಲವಳಾಗಿದ್ದಾಳೆ.   ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.