ಕೊಲೆ ಯತ್ನ: ಪ್ರಕರಣ ಖುಲಾಸೆ
ಬಳ್ಳಾರಿ: ಮಾಜಿ ಸಚಿವ ದಿವಾಕರಬಾಬು ಸೇರಿದಂತೆ 29 ಜನರ ವಿರುದ್ಧ ಅಂದಿನ ಡಿಎಫ್ಓ ಮುತ್ತಯ್ಯ ಹೂಡಿದ್ದ ಕೊಲೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿ, ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಡಿ. ವಿಶ್ವೇಶ್ವರಭಟ್ ಅವರು ತೀರ್ಪು ನೀಡಿ, ಆದೇಶ ಹೊರಡಿಸಿದ್ದಾರೆ. 2010ರಲ್ಲಿ ಮಾಜಿ ಸಚಿವ ದಿವಾಕರಬಾಬು, ಗಣಿ ಉದ್ಯಮಿ ಟಪಾಲ್ ಗಣೇಶ್, ಕಾಂಗ್ರೆಸ್ ಮುಖಂಡ ವಿ.ಕೆ. ಬಸಪ್ಪ ಸೇರಿದಂತೆ ಇತರರು ಅರಣ್ಯ ಇಲಾಖೆ ಕಚೇರಿಗೆ ಹೋಗಿ, ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿ, ತಮ್ಮನ್ನ ಕೊಲೆ ಮಾಡುವುದಕ್ಕೆ ಯತ್ನಿಸಿದ್ದರು ಎಂದು ಅಂದಿನ ಡಿಎಫ್ಓ ಮುತ್ತಯ್ಯ ಅವರು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 3 ವರ್ಷಗಳಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸೋಮವಾರ ತೀರ್ಪುನ್ನು ಕಾಯ್ದಿರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ವಿಚಾರಣೆಗಳನ್ನು ನಡೆದು, ಪ್ರಕರಣಕ್ಕೆ ಪೂರಕವಾಗಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ದಿವಾಕರಬಾಬು, ಮುಖಂಡರಾದ ಟಪಾಲ್ ಗಣೇಶ್, ವಿ.ಕೆ. ಬಸಪ್ಪ ಸೇರಿದಂತೆ 23 ಜನರನ್ನು ಆರೋಪ ಮುಕ್ತಗೊಳಿಸಲಾಗಿದೆ. ಒಟ್ಟು 29 ಆರೋಪಿತರಲ್ಲಿ 23 ಆರೋಪಿತರು ನ್ಯಾಯಾಲಯ ಮುಂದೆ ಹಾಜರಾಗಿದ್ದು, ಓರ್ವವ್ಯಕ್ತಿ ಮೃತಪಟ್ಟಿದ್ದು, ಇನ್ನುಳಿದ ಐವರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಐದು ಜನರ ಮೇಲೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ವಿಜ್ಞಾನ ಭವನಕ್ಕೆ ಸಚಿವರ ಭೇಟಿ
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ನಗರದ ವಿಜ್ಞಾನ ಭವನಕ್ಕೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಈ ಭವನದಲ್ಲಿ ಶಿಲಾಯುಗದಿಂದ ಇಂದಿನವರೆಗೆ ಮಾನವನು ಜೀವಿಸಿದ ಹಂತಗಳು, ಪ್ಲಾನಿಟೋರಿಯಂ ನಿರ್ಮಾಣವನ್ನು ವೀಕ್ಷಿಸಿ ಶ್ಲಾಘಿಸಿದರು. ವಿದ್ಯಾರ್ಥಿಗಳು ಈ ಭವನಕ್ಕೆ ಭೇಟಿ ನೀಡಿ ಹೆಚ್ಚಿನ ಜ್ಞಾನ ಪಡೆಯಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಪಂ ಸಿಇಓ ಎಂ. ಮಂಜುನಾಥ ನಾಯಕ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ತಹಸೀಲ್ದಾರ್ ಶರಣಪ್ಪ ಇದ್ದರು.
ರಕ್ತದಾನ ಕುರಿತು ಅರಿವು
ಬಳ್ಳಾರಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ ರಕ್ತದಾನದ ಮಹತ್ವ ಹಾಗೂ ಜಾಗೃತಿ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆ ಅಧ್ಯಕ್ಷ ಎಸ್.ಜೆ.ವಿ. ಮಹಿಪಾಲ್ ಭಾಗವಹಿಸಿ ಮಾತನಾಡಿ, ರಕ್ತ ಪೂರೈಕೆಗೆ ಪರ್ಯಾಯ ಸೌಲಭ್ಯ ಇಲ್ಲದೇ ಇರುವುದರಿಂದ ರಕ್ತದಾನವೊಂದೆ ಜೀವ ಉಳಿಕೆಗೆ ಪರಿಹಾರಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿದರು. ಗೀತಾ ರೆಡ್ಡಿ ನಿರೂಪಿಸಿದರು. ಶುಭಾ ವಂದಿಸಿದರು.
ಅಕ್ರಮ ಪ್ರವೇಶ: ಎಸ್ಪಿಗೆ ಶ್ರೀರಾಮುಲು ದೂರು
ಬಳ್ಳಾರಿ: ಮೂಲ ಮಾಲೀಕರಿಂದ ಜಮೀನು ಖರೀದಿಸಿ, ತಮ್ಮ ಹೆಸರಿಗೆ ನೋಂದಣಿ ಮಾಡಿಸಿದ್ದರೂ, ನಗರದ ಟಿಬಿ ಸ್ಯಾನಿಟೋರಿಯಂನ ಸಮೀಪದಲ್ಲಿರುವ ತಮ್ಮ ಪ್ರದೇಶಕ್ಕೆ ಕೆಲವರು ಅಕ್ರಮವಾಗಿ ಪ್ರವೇಶಿಸಿ, ತಮ್ಮ ವಿರುದ್ಧ ಮಾಧ್ಯಮಗಳಿಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆರೋಪಿಸಿದ್ದಾರೆ. ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಶ್ರೀರಾಮುಲು ಅವರು, ತಮ್ಮ ಮೇಲೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸ್ಪಿಗೆ ಮನವಿ ಮಾಡಿದ್ದೇನೆ. ನಗರದ ಟಿಬಿ ಸ್ಯಾನಿಟೋರಿಯಂ ಸಮೀಪದ ಸ.ನಂ. 597 ಬಿ2,ಎ1, ಎ3ಡಿ, 27.25 ಎಕರೆ ಜಮೀನನ್ನು ಮೂಲ ಮಾಲೀಕರಿಂದ ಖರೀದಿಸಿದ್ದು, ಕಾನೂನಿನಡಿಯಲ್ಲಿ ಪಟ್ಟಾ ಬದಲಾವಣೆ ಮಾಡಿಕೊಂಡಿದ್ದೇನೆ. ಆದರೂ ಭಾನುವಾರ ಬೆಳಗ್ಗೆ ಟಪಾಲ್ ಗಣೇಶ್, ಜಿ. ಕೃಷ್ಣಮೂರ್ತಿ, ರಮೇಶ್, ಭಾಸ್ಕರ್, ರತ್ನಮ್ಮ, ರಾಜೇಶ್ವರಿ ಸೇರಿದಂತೆ 25 ಜನರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ಮಾಧ್ಯಮಗಳಿಗೆ ತಮ್ಮ ವಿರುದ್ಧ ಹೇಳಿಕೆ ನೀಡಿ, ತಮ್ಮ ಚಾರಿತ್ರ್ಯ ವಧೆ ಮಾಡಿದ್ದಾರೆ. ಇನ್ನು ತಮ್ಮ ಕಾವಲುಗಾರರಾದ ರಾಮರಾಜ, ಶರಬಯ್ಯ ಆವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. ಇನ್ನೆರೆಡು ದಿನಗಳಲ್ಲಿ ಜನರೊಂದಿಗೆ ಆಗಮಿಸಿ ಕಟ್ಟಡ ಹಾಗೂ ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮುಲು ಮನವಿ ಮಾಡಿದ್ದಾರೆ.
378 ವಿದ್ಯಾರ್ಥಿಗಳು ಗೈರು
ಬಳ್ಳಾರಿ: ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಎಸ್ಎಲ್ಸಿ ಗಣಿತ ವಿಷಯದ ಪೂರಕ ಪರೀಕ್ಷೆಗೆ 3169 ವಿದ್ಯಾರ್ಥಿಗಳು ಹಾಜರಾಗಿದ್ದು, 378 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಈ ಪರೀಕ್ಷೆಗೆ ಒಟ್ಟು 3547 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ತಾಲೂಕುವಾರು ನೋಂದಣಿಯಾದ ವಿದ್ಯಾರ್ಥಿಗಳ ವಿವರ ಇಂತಿದ್ದು, ಕಂಸಿನಲ್ಲಿ ಪರೀಕ್ಷೆಗೆ ಹಾಜರಾದ ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳ ವಿವರವನ್ನು ನೀಡಲಾಗಿದೆ. ಬಳ್ಳಾರಿ ಪೂರ್ವ-938 (830 ಹಾಗೂ 209), ಕುರುಗೋಡು-1049 (909, 140), ಹಗರಿಬೊಮ್ಮನಹಳ್ಳಿ-121 (113, 08), ಹಡಗಲಿ-143 (138, 05), ಹೊಸಪೇಟೆ-661 (609, 52), ಕೂಡ್ಲಿಗಿ-205 (167, 38), ಸಂಡೂರು-171 (162, 09), ಸಿರುಗುಪ್ಪ-259 ವಿದ್ಯಾರ್ಥಿಗಳಲ್ಲಿ 241 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 18 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಕ್ಕಳೊಂದಿಗೆ ಗೃಹಿಣಿ ನಾಪತ್ತೆ
ಬಳ್ಳಾರಿ: ನಗರದ ಬ್ರೂಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಂಜಾರ್ ಓಣಿಯಿಂದ ಗೃಹಿಣಿಯೋರ್ವಳು ತನ್ನ ಮಕ್ಕಳೊಂದಿಗೆ ಕಾಣೆಯಾಗಿರುವ ಘಟನೆ ಜರುಗಿದೆ. ಶಬೀನಾ(23) ಮೇ 6ರ ಸಂಜೆ 7.30ಕ್ಕೆ ತನ್ನ ಮಕ್ಕಳಾದ ಹಫೀಜಾ ಅಯಾನ್ (5) ಹಾಗೂ ಶಮೀರಾ(3)ರೊಂದಿಗೆ ಬಜಾರ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆಗೂ ಮರಳಿ ಬಂದಿಲ್ಲ ಎಂದು ಪತಿ ಪಿ. ಭಾಷಾ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ 5 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಕೆಂಪು ಮೈಬಣ್ಣ, ಅಗಲ ಮುಖ, ಬಿಳಿ ಬಣ್ಣದ ಸೀರೆ, ಬಿಳಿ ಬಣ್ಣದ ಕುಪ್ಪಸ, ಕಪ್ಪು ಬಣ್ಣದ ಬುರ್ಕಾ ಧರಿಸಿದ್ದಾಳೆ. ಕನ್ನಡ, ತೆಲುಗು, ಹಿಂದಿ ಭಾಷೆ ಬಲ್ಲವಳಾಗಿದ್ದಾಳೆ. ಈಕೆಯ ಪುತ್ರ ಹಫೀಜಾ ಅಯಾನ್ 3 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೆಂಪು ಮೈ ಬಣ್ಣ, ಅಗಲ ಮುಖ ಹೊಂದಿದ್ದು, ಅರಿಷಿಣ ಬಣ್ಣದ ಟೀಷರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಪುತ್ರಿ ಶಮೀರಾ 2 ಅಡಿ ಎತ್ತರವಿದ್ದು, ಎಣ್ಣೆಗೆಂಪು ಬಣ್ಣ, ತೆಳ್ಳನೆ ಮೈಕಟ್ಟು ಹೊಂದಿದ್ದು, ಕೆಂಪು ಬಣ್ಣದ ಫ್ರಾಕ್ ಧರಿಸಿದ್ದಾಳೆ. ಈ ಮೂವರ ಬಗ್ಗೆ ಸುಳಿವು ದೊರೆತವರು ಕೂಡಲೇ ಮೊ.-9886566050ಗೆ ಸಂಪರ್ಕಿಸುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

