ಯಂತ್ರ ಒಂದು ಕೆಲಸ ಮೂರು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 20
ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಹರಸಾಹಸ ಮಾಡುತ್ತಿದೆ. ಇತರೆ ರಾಜ್ಯಗಳಿಂದ ದುಪ್ಪಟ್ಟು ಬೆಲೆಗೆ ವಿದ್ಯುತ್ ಖರೀದಿ ಮಾಡಿ ಸಾರ್ವಜನಿಕರಿಗೆ, ರೈತರಿಗೆ ನೀಡುತ್ತಿದೆ. ಸಾಕಷ್ಟು ಹಣ ವ್ಯಯವಾಗುತ್ತಿದ್ದರೂ ಈ ಸಮಸ್ಯೆಗೆ ಪರಿಹಾರ ಮಾತ್ರ ಗಗನ ಕುಸುಮ. ಆದರೆ ಹೂವಿನಹಡಗಲಿ ಗ್ರಾಮೀಣ ಭಾಗದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿದ್ಯುತ್ ತಯಾರಿಕೆ ಜತೆಗೆ ಬಹೂಪಯೋಗಿ ಯಂತ್ರ ಆವಿಷ್ಕಾರ ಮಾಡಿ ಸಾಧನೆ ಮೆರೆದಿದ್ದಾರೆ.
ಗ್ರಾಮೀಣ ಪ್ರದೇಶದ ರೈತರು ವಿದ್ಯುತ್ ಸೇರಿದಂತೆ ಕೃಷಿ ವಲಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದಲೆ ಬಹೂಪಯೋಗಿ ಯಂತ್ರವನ್ನು ಹೂವಿನಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿದ್ದಾರೆ.
ಅತಿ ಕಡಿಮೆ ವೆಚ್ಚ: ಸಾಮಾನ್ಯ ಎರಡು ಸೈಕಲ್ ಗಾಲಿ, ವಿವಿಧ ಯಂತ್ರಗಳ ಕೆಲವು ಬಿಡಿ ಭಾಗಗಳನ್ನು ಬಳಸಿ ತಯಾರಿಸಿದ ಯಂತ್ರದಿಂದ ಏಕಕಾಲದಲ್ಲಿ ರೈತರು ಮೂರು ಕೆಲಸಗಳನ್ನು ಮಾಡಬಹುದು. ತಮ್ಮ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆ, ವಿದ್ಯುತ್ ಉತ್ಪಾದನೆ ಮತ್ತು ಮಣ್ಣಿನಲ್ಲಿರುವ ತೇವಾಂಶ ಕಂಡುಹಿಡಿಯುವ ಕೆಲಸವನ್ನು ಏಕಕಾಲದಲ್ಲೇ ಈ ಯಂತ್ರ ಮಾಡುತ್ತದೆ. ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರೊ. ಎಚ್.ಬಿ. ವಿನಯ್ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಂಜೀವ್, ಅಶೋಕ ರೆಡ್ಡಿ, ಓಮಣ್ಣ, ಜೆ. ಅಶೋಕ ತಂಡ ನಡೆಸಿದ ಹೊಸ ಆವಿಷ್ಕಾರ ಎಲ್ಲರ ಮೆಚ್ಚುಗೆ ಗಳಿಸಿದೆ.
ರೈತರು ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆಗಾಗಿ ಈ ಯಂತ್ರ ಬಳಸಬಹುದು, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ವಿದ್ಯುತ್ನ್ನು ಈ ಯಂತ್ರ ಉತ್ಪಾದಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಅರಿಯಲು ಇದು ಹೆಚ್ಚು ಸಹಕಾರಿಯಾಗಿದೆ.
ರೈತೋಪಯೋಗಿ: ಬೆಳೆಗಳಿಗೆ ಸಕಾಲದಲ್ಲಿ ನೀರುಣಿಸಿ ಲಘು ಪೋಷಕಾಂಶಗಳನ್ನು ನೀಡಿ ಉತ್ತಮ ಫಸಲು ತೆಗೆಯಲು ಯಂತ್ರ ಸಹಕಾರಿಯಾಗಿದ್ದು, ಒಂದೇ ಯಂತ್ರದಿಂದ ಹಲವು ಉಪಯೋಗ ಪಡೆಯಬಹುದು. ಈ ಯಂತ್ರ ಬಳಸುವುದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಮಾರ್ಗದರ್ಶಕ ಪ್ರೊ. ಎಚ್.ಬಿ. ವಿನಯ್.
ಹೂವಿನಹಡಗಲಿ ಹಾಗೂ ಸುತ್ತಮುತ್ತಲಿನ ಬಹುಭಾಗದಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ರೈತಾಪಿ ವರ್ಗದವರ ಸಮಸ್ಯೆ ನೀಗಿಸುವ ದೃಷ್ಟಿಯಿಂದ ನಮ್ಮ ವಿದ್ಯಾರ್ಥಿಗಳು ಹೊಸ ಆವಿಷ್ಕಾರ ನಡೆಸಿದ್ದಾರೆಂದು ಹೇಳುತ್ತಾರೆ.
ಮುಂಬರುವ ದಿನಗಳಲ್ಲಿ ಜಮೀನು, ಬತ್ತದ ಗದ್ದೆಗಳಲ್ಲಿ ಈ ಯಂತ್ರವನ್ನು ಉಪಯೋಗಿಸಿ ಟರ್ಬೈನ್ ಬಳಸಿ ಜನರೇಟರ್ ಮೂಲಕ ವಿದ್ಯುತ್ ಸಂಗ್ರಹಿಸುವ ಪ್ರಾತ್ಯಕ್ಷಿಕೆ ನಡೆಸುವ ಯೋಚನೆ ಇದೆ. ಇದೇ ಮಾದರಿಯನ್ನು ಮುಂದಿಟ್ಟುಕೊಂಡು ಸರ್ಕಾರ ಅಭಿವೃದ್ಧಿಪಡಿಸಿ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದ್ದರೆ ವಿದ್ಯುತ್ ಸಮಸ್ಯೆ ಬಗೆಹರಿಯುವ ಜತೆಗೆ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬಿ ಆಗಬಹುದು ಎಂದು ಅಭಿಪ್ರಾಯಪಡುತ್ತಾರೆ.
- ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

