ಸಿಬಿಐ ಕಾಂಗ್ರೆಸ್ ಕೈಗೊಂಬೆ: ಜನಾರ್ದನ ರೆಡ್ಡಿ
ಬೆಂಗಳೂರು: ಕೇಂದ್ರಿಯ ತನಿಖಾ ದಳವನ್ನು (ಸಿಬಿಐ) 'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್' ಎಂದು ಗಣಿ ಅಕ್ರಮ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಟೀಕಿಸಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ವಿಚಾರಣೆಗಾಗಿ ಬೆಂಗಳೂರಿನ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್ನ ಚಂಚಲಗೂಡ ಜೈಲಿನಿಂದ ಶುಕ್ರವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೆಡ್ಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಕೇವಲ ನನ್ನ ವಿಷಯದಲ್ಲಿ ಮಾತ್ರವಲ್ಲದೇ ಇಡೀ ರಾಷ್ಟ್ರದಲ್ಲಿ ಸಿಬಿಐನ್ನು ಕಾಂಗ್ರೆಸ್ ತನ್ನ ಕೈಗೊಂಬೆಯಾಗಿಸಿ ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದೆ. ಈ ಮೂಲಕ ತನ್ನ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ' ಎಂದು ಆರೋಪಿಸಿದರು. 'ನನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಜನತೆ ಹಾಗೂ ಭಗವಂತ ಗಮನಿಸುತ್ತಿದ್ದಾನೆ. 'ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದ್ದು ಆರೋಪಗಳಿಂದ ಹೊರಬರುತ್ತೇನೆ' ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬೆಂಗಳೂರಿನ ಸಿಬಿಐ ಅಧಿಕಾರಿಗಳು ಹೈದರಾಬಾದ್ನ ಚಂಚಲಗೂಡ ಜೈಲಿಗೆ ತೆರಳಿ ರೆಡ್ಡಿ ಅವರನ್ನು ಶುಕ್ರವಾರ ಬೆಳಿಗ್ಗೆ 3.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆ ತಂದರು.
ಆದರೆ ಚಂಚಲಗೂಡ ಜೈಲಿನಿಂದ ಬಾಡಿ ವಾರೆಂಟ್ ತಾರದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸಿಬ್ಬಂದಿ ಜೈಲಿನ ಒಳಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯೊಳಗೆ ಕರೆದೊಯ್ಯಲಾಯಿತು. ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಜನಾರ್ದನ ರೆಡ್ಡಿ ಅವರನ್ನು ಕಾರಾಗೃಹದೊಳಕ್ಕೆ ಕರೆದೊಯ್ಯಲಾಯಿತು. ರೆಡ್ಡಿ ಅವರೊಂದಿಗೆ ಅವರ ಆಪ್ತ ಅಲಿ ಖಾನ್ನನ್ನು ಸಿಬಿಐ ಅಧಿಕಾರಿಗಳು ಕರೆ ತಂದಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್, ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಸರ್ಕಾರಿ ಅಧಿಕಾರಿಗಳಾಗಿದ್ದ ಎಸ್.ಪಿ.ರಾಜು ಹಾಗೂ ಎಸ್.ಮುತ್ತಯ್ಯ ಅವರನ್ನು ಹಾಜರುಪಡಿಸಲಾಯಿತು.
ವಿಚಾರಣೆಗಾಗಿ ರೆಡ್ಡಿ ಅವರನ್ನು 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ 6 ಜನರನ್ನು ಮಾ. 14ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದೆ.ಮತ್ತೊಮ್ಮೆ ಅವಧಿ ವಿಸ್ತರಿಸಬಹುದು ಎಂದು ತಿಳಿಸಿದೆ.
ಆರೋಪಿಗಳ ಪರ ವಕಾಲತ್ತು ವಹಿಸುತ್ತಿರುವ ನ್ಯಾಯವಾದಿ ಕೆ.ಎಸ್.ಹನುಮಂತರಾಯ ಅವರು ಮೊದಲ ಬಾರಿ ಸಿಬಿಐ ನ್ಯಾಯಾಲಯಕ್ಕೆ ಆಗಮಿಸಿದ್ದರು.
ವಿಚಾರಣೆ ಬಳಿಕ ಮಾತನಾಡಿದ ಅವರು, ನ್ಯಾಯಾಲಯ ಸಿಬಿಐ ವಶಕ್ಕೆ ನೀಡುವ ಮುನ್ನಾ 3 ಷರತ್ತುಗಳನ್ನು ವಿಧಿಸಿದೆ. ಮೊದಲನೆಯದಾಗಿ ಆರೋಪಿಗಳಿಗೆ ಮೂರನೇ ದರ್ಜೆ ರೀತಿಯಲ್ಲಿ ವಿಚಾರಣೆ ಮಾಡಬಾರದು. ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಹಾಜರಿರಬಹುದು. ಹಾಗೂ ಆರೋಪಿಗಳನ್ನು ರಾತ್ರಿ ವೇಳೆ ವಿಚಾರಣೆಗೆ ಮಾಡಬಾರದು ಎಂದು ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ. ಆರೋಪಿಗಳು ಜೈಲಿನಲ್ಲೇ ಇರಲಿದ್ದು ಪ್ರತಿನಿತ್ಯ ಅವರನ್ನು ಸಿಬಿಐ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.
ತಾನು ಸರ್ಕಾರಕ್ಕೆ ರು. 1,400 ಕೋಟಿ ತೆರಿಗೆ ಕಟ್ಟಿದ್ದೇನೆ. ಗಣಿ ಹಗರಣ ಸಂಬಂಧ ನಾನು ವಂಚನೆ ಮಾಡುವುದಿದ್ದರೆ ತೆರಿಗೆ ಕಟ್ಟುತ್ತಿರಲಿಲ್ಲ. ಅನಗತ್ಯ ವಿಚಾರಣೆಯಿಂದ ನಾನು ಹಾಗೂ ನನ್ನ ಕುಟುಂಬ ಜರ್ಝರಿತವಾಗಿದೆ. ನನ್ನ ಮಕ್ಕಳಿಗೆ ನಾನು ಏನು ಉತ್ತರ ಹೇಳಲಿ ಎಂದು ನ್ಯಾಯಾಧೀಶರ ಮುಂದೆ ಜನಾರ್ದನ ರೆಡ್ಡಿ ಅಲವತ್ತುಕೊಂಡರು ಎಂದು ತಿಳಿದು ಬಂದಿದೆ.
ಜಾಮೀನು ಅರ್ಜಿ ವಿಚಾರಣೆ
ಓಬಳಾಪುರಂ ಗಣಿಗಾರಿಕೆ ಹಗರಣ ಸಂಬಂಧ ಜನಾರ್ದನ ರೆಡ್ಡಿ ಅವರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪುನ್ನು ಮಾ.14ಕ್ಕೆ ಕಾಯ್ದಿರಿಸಿದೆ. ವಿವಿಧ ಕಾರಣಗಳನ್ನು ನೀಡಿ ಜನಾರ್ದನ ರೆಡ್ಡಿ 8 ಬಾರಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಭೇಟಿಗೆ ಅವಕಾಶವಿಲ್ಲ
ಜನಾರ್ದನರೆಡ್ಡಿ ಅವರನ್ನು ಭೇಟಿ ಮಾಡಲು ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು, ಸಂಸದೆ ಜೆ. ಶಾಂತಾ, ಜನಾರ್ದನರೆಡ್ಡಿ ಅವರ ಪತ್ನಿ ಅರುಣಾ ಹಾಗೂ ಇಬ್ಬರು ಮಕ್ಕಳು, ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಭೇಟಿಗೆ ಅವಕಾಶ ನೀಡದ ಕಾರಣ ದೂರದಿಂದಲೇ ನೋಡಿ ಹಿಂತಿರುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

