ಬಳ್ಳಾರಿ

ಭಾಗೀರಥಿಗೆ ಮರುಳಾದ ಮತದಾರ

Published On :

ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 30
ಹಳೆಯ ಕೊಟ್ಟೂರು ವಿಧಾನಸಭಾ ಕ್ಷೇತ್ರವೇ ಇಂದಿನ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ. 1957ರಿಂದ ಕೊಟ್ಟೂರು ವಿಧಾನಸಭಾ ಕ್ಷೇತ್ರವು ಅತಂತ್ರ ಪರಿಸ್ಥಿತಿಯಲ್ಲಿ ಸಾಗಿದೆ. 1957ರಿಂದ 1972ರವರೆಗೆ ನಾಲ್ಕು ಚುನಾವಣೆಯಲ್ಲಿ ಕೂಡ್ಲಿಗಿ-ಹರಪನಹಳ್ಳಿ ಕ್ಷೇತ್ರದಲ್ಲಿ ಕೊಟ್ಟೂರು ಹಂಚಿ ಹೋಗಿತ್ತು. 1978ರ ಚುನಾವಣೆಯಲ್ಲಿ ಕೊಟ್ಟೂರು ಕ್ಷೇತ್ರವಾಗಿ ಗುರುತಿಸಿಕೊಂಡಿತ್ತು. ಅಲ್ಲಿಂದ 2004ರವರೆಗೆ ಸ್ವತಂತ್ರವಾಗಿ ಕೊಟ್ಟೂರು ವಿಧಾನಸಭಾ ಕ್ಷೇತ್ರವಾಗಿಯೇ ಇತ್ತು. ಆದರೆ 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿತು.
1978ರಿಂದ ಕೊಟ್ಟೂರು ವಿಧಾನಸಭಾ ಕ್ಷೇತ್ರವು ಒಂದು ಉಪಚುನಾವಣೆ ಸೇರಿದಂತೆ ಒಟ್ಟು 8 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಅದರಲ್ಲಿ 7 ಬಾರಿ ಕಾಂಗ್ರೆಸ್ ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯೆಂದು ತೋರಿಸಿಕೊಂಡಿತ್ತು. 1983ರಲ್ಲಿ ಬಿ.ಎಸ್. ವೀರಭದ್ರಪ್ಪ ಅವರು ಜೆಎನ್ಪಿ ಪಕ್ಷದಿಂದ ಗೆಲವು ಸಾಧಿಸಿದ್ದು ಬಿಟ್ಟರೆ ಕ್ಷೇತ್ರದಲ್ಲಿನ ಮತದಾರ ಬೇರಾವುದೆ ಪಕ್ಷಕ್ಕೆ ಮಣೆಹಾಕಿಲ್ಲ.
ಆದರೆ 2008ರಲ್ಲಿ ಕ್ಷೇತ್ರ ಪುರ್ನವಿಂಗಣೆಯ ನಂತರ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವಾದ ನಂತರ ಮೊಟ್ಟಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲಕ್ಕೆ ಅವಕಾಶ ನೀಡಿದ್ದಾನೆ. ಸದ್ಯ ಕ್ಷೇತ್ರದಲ್ಲಿ ಬಿಎಸ್ಸಾರ್ ಖಾತೆ ತೆರೆಯಲು ಹವಣಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಇನ್ನು ಬಿಜೆಪಿ ಶಾಸಕ ನೇಮಿರಾಜ ನಾಯ್ಕ್ ಎರಡನೇ ಬಾರಿ ಗೆಲವು ಸಾಧಿಸಲು, ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.
ಒಂದು ಬಾರಿ ಮಾತ್ರ ಕಾಂಗ್ರೆಸ್ಗೆ ಸೋಲು: ಕೊಟ್ಟೂರು ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ನಡೆದ ಪ್ರಥಮ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂ.ಎಂ.ಜೆ. ಸದ್ಯೋಜಾತಪ್ಪ ಅವರು ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಅಂಕಿತ ಹಾಕಿದರು.
1983ರಲ್ಲಿ ಕ್ಷೇತ್ರದ ಮತದಾರ ಕಾಂಗ್ರೆಸ್ ಕೈ ಬಿಟ್ಟಿದ್ದನ್ನು ಬಿಟ್ಟರೆ, 2004ರವರೆಗೆ ಎಂದಿಗೂ ಕೈ ಬಿಡಲಿಲ್ಲ. 1983ರಲ್ಲಿ ಜೆಎನ್ಪಿ ಪಕ್ಷದ ಬಿ.ಎಸ್. ವೀರಭದ್ರಪ್ಪ ಅವರು ಕಾಂಗ್ರೆಸ್ನ ಎಂ.ಎಂ.ಜೆ. ಸದ್ಯೋಜಾತಪ್ಪ ಅವರನ್ನು 13,932 ಮತಗಳ ಅಂತರದಿಂದ ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಕೋಟೆಗೆ ಲಗ್ಗೆ ಇಟ್ಟಿದ್ದರು. ಈ ಲಗ್ಗೆ 1983ರ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು. ನಂತರದಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಮೆರೆಯಿತು.
ಹ್ಯಾಟ್ರಿಕ್ ಸಾಧನೆ ಮಾಡಿದ ಭಾಗೀರಥಿ: ಕ್ಷೇತ್ರದಲ್ಲಿ 1985ರಿಂದ 2004ರವರೆಗೆ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಬಿಟ್ಟುಕೊಡಲಿಲ್ಲ.  1985 ಮತ್ತು 1989ರಲ್ಲಿ ಕಾಂಗ್ರೆಸ್ನ ಕೆ.ವಿ. ರವೀಂದ್ರನಾಥ್ಬಾಬು ಎರಡು ಬಾರಿ ವಿಜಯ ಸಾಧಿಸಿದರೆ. 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ. ಮರುಳಸಿದ್ದನಗೌಡ ಅವರು ಗೆಲವಿನ ನಗೆ ಬೀರಿದರು. ಆದರೆ ಮರುಳಸಿದ್ದನಗೌಡ ನಿಧನರಾದ ಹಿನ್ನೆಲೆಯಲ್ಲಿ 1998ರಲ್ಲಿ ನಡೆದ ಉಪಚುನಾವಣೆಯಲ್ಲಿ ಮರುಳಸಿದ್ಧನಗೌಡ ಅವರ ಪತ್ನಿ ಭಾಗೀರಥಿ ಮರುಳಸಿದ್ದನಗೌಡ ಗೆಲವು ಸಾಧಿಸಿದರು.
1999 ಹಾಗೂ 2004ರ ಚುನಾವಣೆಯಲ್ಲೂ ಅವರು ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಮಹಿಳಾ ಅಭ್ಯರ್ಥಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು ಜಿಲ್ಲೆಯ ಮಟ್ಟಿಗೆ ಇತಿಹಾಸವೇ ಸರಿ.
ಬದಲಾದ ಕ್ಷೇತ್ರ, ಬದಲಾದ ಫಲಿತಾಂಶ: ಸುಮಾರು 8 ಚುನಾವಣೆಯನ್ನು ಎದುರಿಸಿದ ಕೊಟ್ಟೂರು ವಿಧಾನಸಭಾ ಕ್ಷೇತ್ರವು ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಹಗರಿಬೊಮ್ಮನಹಳ್ಳಿ ಕ್ಷೇತ್ರವಾಗಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಭಾಗೀರಥಿ ಮರುಳಸಿದ್ದನಗೌಡ ಅವರು ಚುನಾವಣೆಯ ಕಣದಿಂದ ದೂರ ಸರಿದರು.
2008ರಲ್ಲಿ ನಡೆದ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಹಾಗೂ ಬಿ. ಶ್ರೀರಾಮುಲು ಪ್ರಾಬಲ್ಯದಿಂದ ಬಿಜೆಪಿ ಕ್ಷೇತ್ರಕ್ಕೆ ಲಗ್ಗೆ ಇಟ್ಟು, ಬಿಜೆಪಿಯ ನೇಮಿರಾಜ ನಾಯ್ಕ್ ಆರಿಸಿ ಬಂದರು. ಆದರೆ ಈ ಬಾರಿ ಕ್ಷೇತ್ರದ ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.