ರಸ್ತೆ ಮೇಲೆಲ್ಲ ಚರಂಡಿ ನೀರು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮೇ 27
ಪಟ್ಟಣದ ಮಹಾತ್ಮಗಾಂಧಿ ವೃತ್ತದ ರಸ್ತೆ ಅಕ್ಷರಶಃ ಈಗ ಚರಂಡಿಯಾಗಿ ಪರಿವರ್ತನೆಗೊಂಡಿದೆ. ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಇದಾಗಿರುವುದರಿಂದ ರಸ್ತೆ ಮೇಲೆ ಹರಿಯುವ ಚರಂಡಿ ನೀರಿನ ಮೇಲೆಯೇ ಭಕ್ತರು ಹಾದು ಹೋಗುವ ಅನಿವಾರ್ಯತೆ ಇದೆ.
ರಸ್ತೆ ಮೇಲೆಲ್ಲ ಚರಂಡಿ ನೀರು ಹೆಚ್ಚಾಗಿ ಸುಮಾರು ದಿನಗಳಿಂದಲೇ ಹರಿದಾಡುತ್ತಿದ್ದರೂ, ಜನಪ್ರತಿನಿಧಿಗಳಾಗಲಿ, ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲೀ ಇತ್ತ ಗಮನಹರಿಸದೇ ಇರುವುದು ಅಚ್ಚರಿ ಮೂಡಿಸಿದೆ. ಚರಂಡಿ ಕಾಮಗಾರಿ ಸಂಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟಿರುವ ಪರಿಣಾಮ 3 ತಿಂಗಳಿನಿಂದಲೂ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ದುರ್ನಾತ ಬೀರುತ್ತಲೆ ಇದೆ. ಕೂಡ್ಲಿಗಿ-ಹರಪ್ಪನಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿ ಅಂಗವಾಗಿ ಕೈಗೆತ್ತಿಕೊಂಡ ಚರಂಡಿ ನಿರ್ಮಾಣವನ್ನು ಗುತ್ತಿಗೆದಾರರು ಮಾಡುತ್ತಲೆ ಇಲ್ಲ. ಮೂರು ತಿಂಗಳಿನಿಂದ ತಮಗೆ ಸಂದಾಯವಾಗಬೇಕಿದ್ದ ಹಣ ಬಿಡುಗಡೆಗೊಳ್ಳದ ಕಾರಣಕ್ಕಾಗಿ ಚರಂಡಿ ನಿರ್ಮಾಣ ಸ್ಥಗಿತಗೊಳಿಸಿದ್ದಾರೆ. ಇದರ ಪರಿಣಾಮ ಇದೀಗ ಪಟ್ಟಣದ ಜನತೆ ಅನುಭವಿಸುವಂತಾಗಿದೆ.
ರಸ್ತೆಯೆಲ್ಲ ಚರಂಡಿ: ಚರಂಡಿ ನೀರು ಪೂರ್ಣ ಪ್ರಮಾಣದಲ್ಲಿ ಬೇರೆಡೆಗೆ ಹರಿಯಲು ಅವಕಾಶ ಇಲ್ಲದ ಕಾರಣಕ್ಕಾಗಿ ಸಂಪೂರ್ಣ ನೀರು ಇದೀಗ ಗಾಂಧಿವೃತ್ತದ ರಸ್ತೆ ಮೇಲೆ ಹರಿಯುತ್ತಿದೆ. ನೀರಿನೊಂದಿಗೆ ಬರುವ ತ್ಯಾಜ್ಯ, ಕಲುಷಿತದಿಂದಾಗಿ ಇಡೀ ರಸ್ತೆ ಗಬ್ಬೆದ್ದು ನಾರತೊಡಗಿದೆ. ದಿನ ದಿನಕ್ಕೂ ಚರಂಡಿ ನೀರಿನ ಪ್ರಮಾಣ ಹೆಚ್ಚಾಗತೊಡಗಿದ್ದು, ಇದೀಗ ರಸ್ತೆಯಲ್ಲ ಚರಂಡಿಯಂತಾಗಿದೆ. ಗಬ್ಬೆದ್ದು ನಾರುವ ನೀರಿನ ಹರಿವಿನ ಮಧ್ಯದಲ್ಲೇ ಸೋಮವಾರ ಬಿಕ್ಕಿ ಮರಡಿ ದುರುಗಮ್ಮನ ಪಲ್ಲಕ್ಕಿ ಉತ್ಸವ ವಿಧಿ ಇಲ್ಲದೆ ನಡೆಯಿತು. ಈ ಸಂದರ್ಭದಲ್ಲಿ ಜನತೆ ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಈ ರಸ್ತೆಗುಂಟ ಸಂಚರಿಸುವ ವಾಹನಗಳು ಜನತೆಗೆ ಚರಂಡಿಯ ನೀರನ್ನು ಸಿಂಪಡಿಸುತ್ತಾ ಸಾಗುತ್ತಿವೆ. ಈ ಕುರಿತು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ದೂರು ಸಲ್ಲಿಸಿರುವ ಜನತೆಗೆ ಅಧಿಕಾರಿಗಳು ಇದು ನಮ್ಮ ಕೆಲಸ ಅಲ್ಲ. ಲೋಕೋಪಯೋಗಿ ಇಲಾಖೆಯವರಿಗೆ ದೂರು ಸಲ್ಲಿಸಿ ಎಂದು ಅವರತ್ತ ಕೈ ಮಾಡುತ್ತಿದ್ದಾರೆ. ನಮ್ಮಯ ಗೋಳನ್ನು ಯಾರೂ ಕೇಳದಂತಾಗಿದೆ ಎಂದು ಈ ರಸ್ತೆಯಲ್ಲಿನ ವ್ಯಾಪಾರಿ ಪ್ರಭಾಕರ ನೋವಿನಿಂದ ಹೇಳುತ್ತಾರೆ.
ಸರಿಪಡಿಸಲು ಒತ್ತಾಯ: ಕೊಟ್ಟೂರಿನ ಪ್ರಮುಖ ರಸ್ತೆಯಾದ ಮಹಾತ್ಮಗಾಂಧಿ ರಸ್ತೆಯ ಮೇಲೆ ಚರಂಡಿ ನೀರು ಮೂರು ತಿಂಗಳಿಂದ ಹರಿಯುತ್ತಿದ್ದರೂ ಲೋಕೋಪಯೋಗಿ ಇಲಾಖೆಯವರು ಗಮನಹರಿಸದೇ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ. ಚರಂಡಿ ನೀರಿನ ಹರಿವಿನ ಪರಿಣಾಮ ಪಟ್ಟಣದಲ್ಲಿ ರೋಗ ರುಜಿನಗಳು ಉಂಟಾಗುವ ಸಾಧ್ಯತೆಗಳಿವೆ. ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಚರಂಡಿ ನೀರನ್ನು ರಸ್ತೆ ಮೇಲೆ ಹರಿಯದಂತೆ ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಚಿರಿಬಿ ಕೊಟ್ರೇಶ್ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

