ಹೂವಿನಹಡಗಲಿ: ಉತ್ತಮ ಮಳೆ
ಹೂವಿನಹಡಗಲಿ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. 63.2 ಮಿ.ಮೀ ಸರಾಸರಿ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ರಾಜಶೇಖರ ತಿಳಿಸಿದ್ದಾರೆ.
ತಾಲೂಕಿನ ಹಿರೇಹಡಗಲಿ, ಹಗರನೂರು, ಮಾಗಳ, ಹೊಳಲು, ಹೊಳಗುಂದಿ, ಮೈಲಾರ, ಕುರುವತ್ತಿ, ಬ್ಯಾಲಹುಣಿ, ಹೊಸಹಳ್ಳಿ, ಹೂವಿನಹಡಗಲಿ, ಇಟ್ಟಿಗಿ, ಮಾನ್ಯರ ಮಸಲವಾಡ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ಕೆಲವು ಕೆರೆಗಳಿಗೆ ಮಳೆ ನೀರು ಸಂಗ್ರಹವಾಗುತ್ತಿವೆ.
ರೋಹಿಣಿ ಮಳೆಯಾಗಿದ್ದರಿಂದ ಹೈಬ್ರೀಡ್ ಜೋಳ, ಸೂರ್ಯಕಾಂತಿ, ಸಜ್ಜೆ, ಹೆಸರು ಬೀಜಗಳ ಬಿತ್ತನೆ ಕಾರ್ಯ ಭರದಿಂದ ಸಾಗಿವೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಎಲ್ಲ ರೀತಿ ಮುಂಜಾಗ್ರತೆ ಕ್ರಮವನ್ನು ಕೃಷಿ ಇಲಾಖೆ ವಹಿಸಿದೆ ಎಂದರು. ಹೂವಿನಹಡಗಲಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಉತ್ತಮ ಇಳುವರಿ ದೊರೆಯುವ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಲಾಗಿದೆ.
ಇದರಲ್ಲಿ 5 ಕ್ವಿಂಟಲ್ ಹೈಬ್ರೀಡ್ ಜೋಳ, 3 ಕ್ವಿಂಟಲ್ ತೊಗರಿ, 4 ಕ್ವಿಂಟಲ್ ಹೆಸರು, 2 ಕ್ವಿಂಟಲ್ ಸಜ್ಜೆ ಸೇರಿದಂತೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗಿದೆ. ಉಳಿದಂತೆ ಹಿರೇಹಡಗಲಿ ಮತ್ತು ಇಟ್ಟಿಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ರೀತಿಯ ತಲಾ 1 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗಿದೆ ಎಂದರು.
ಬೆಟ್ಟಿಂಗ್: ಓರ್ವನ ಬಂಧನ
ಹೊಸಪೇಟೆ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ನಗರದ ವ್ಯಕ್ತಿಯೋರ್ವನನ್ನು ಸೋಮವಾರ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ರು. 54,080 ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಗಣೇಶ್ ಎನ್ನುವ ವ್ಯಕ್ತಿ ನಗರದ ಖಾಸಗಿ ಫೈನಾನ್ಸ್ ಕಚೇರಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನ ಹಣ ಬಟವಾಡೆ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಡಿವೈಎಸ್ಪಿ ವಿ.ಬಿ. ಮಡಿವಾಳ್ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಆರ್.ಎಂ. ಹುನ್ನೂರು, ಪಿಎಸ್ಐ ನಾಗರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿಚು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

