ಬಳ್ಳಾರಿ

ಸಿಎಂ ಸಿದ್ದು ಏಕಪಾತ್ರಾಭಿನಯ

Published On :

ಬಳ್ಳಾರಿ: ನನ್ನನ್ನು ಯಾರೂ ಬೆಂಬಲಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಚಿವರ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ  ಅಸಹಕಾರ ಚಳವಳಿ ಇದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸುರೇಶ್‌ಕುಮಾರ್ ತಿಳಿಸಿದರು.
ಭಾನುವಾರ ಬಳ್ಳಾರಿಗೆ ಆಗಮಿಸಿದ ಅವರು ಹೋಟೆಲ್‌ವೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಸಂತೋಷ್ ಲಾಡ್ ಅವರನ್ನು ಸಮರ್ಥಿಸಿಕೊಳ್ಳುವುದರಿಂದ ಹಿಡಿದು ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ವರೆಗೆ ಇದೇ ಅಭಿನಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯೋಜನೆಗಳ ಬಗ್ಗೆ ಯಾವೊಬ್ಬ ಸಚಿವರು ಸಮರ್ಥಿಸಿಕೊಳ್ಳುತ್ತಿಲ್ಲ. ಒಟ್ಟಾರೆಯಾಗಿ ಸಚಿವ ಸಂಪುಟದಲ್ಲಿ ಅಸಹಕಾರ ಚಳವಳಿ ಇದೆ ಎಂಬುದು ತಿಳಿಯುತ್ತದೆ ಎಂದರು.
ಮೂಢನಂಬಿಕೆ ಬಗ್ಗೆ ತಯಾರಿಸಿಕೊಟ್ಟ ವಿಧೇಯಕವನ್ನು ಓದಿಲ್ಲ, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಈ ವಿಧೇಯಕದ ಕುರಿತಂತೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ರೀತಿ ಹೇಳುತ್ತಿದ್ದಾರೆ ಎಂದರು.
ಎರಡೇ ಧ್ರುವಗಳು: ದೇಶದಲ್ಲಿ ಎರಡೇ ಧ್ರುವಗಳು. ಒಂದು ಬಿಜೆಪಿ ನೇತೃತ್ವದ ಎನ್‌ಡಿಎ, ಇನ್ನೊಂದು ಕಾಂಗ್ರೆಸ್ ನೇತೃತ್ವದ ಯುಪಿಎ. ತೃತೀಯ ರಂಗ ಯಶಸ್ವಿಯಾಗುವುದಿಲ್ಲ. ಈಗಾಗಲೇ ಯುಪಿಎ 1 ಮತ್ತು ಯುಪಿಎ 2ರ ಆಡಳಿತ ನೋಡಿದ್ದೇವೆ, ಯುಪಿಐ 3ನೇ ಆಡಳಿತ ನೋಡುವ ದುರ್ದೈವ ಇಲ್ಲ ಎಂದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶಾದ್ಯಂತ ಸಂಚರಿಸುತ್ತಿದ್ದು, ನ. 17ರಂದು ಬೆಂಗಳೂರಿನಲ್ಲಿ 'ಭಾರತ ಗೆಲ್ಲಿಸಿ' ರ್ಯಾಲಿ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿ ಮತಗಟ್ಟೆಯಿಂದ 10 ಜನರಂತೆ 5 ಲಕ್ಷ ಜನ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ರು. 10 ಕೂಪನ್ ತೆಗೆದುಕೊಳ್ಳಬೇಕು. ಎಲ್ಲ ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಜನರನ್ನು ಕರೆಸುತ್ತಾರೆ. ಬೇರೆ ಪಕ್ಷದ ಕಾರ್ಯಕ್ರಮಕ್ಕೂ ಅದೇ ಜನರು ಬರುತ್ತಿದ್ದಾರೆ ಎಂಬ ಮಾತಿದೆ. ಇಂತಹ ಮನೋಭಾವ ಬದಲಾಗಬೇಕು ಎಂದು 10 ಕೂಪನ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನ. 17ರಂದು ರಾಜ್ಯದಲ್ಲಿ 15 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಇತರ ಭಾಗದಿಂದ ಸುಮಾರು 3ರಿಂದ 4 ಸಾವಿರ ವಾಹನಗಳು ಆಗಮಿಸಲಿವೆ ಎಂದರು.
ಮಾಜಿ ಶಾಸಕ ನೇಮಿರಾಜ ನಾಯ್ಕ, ರಾಮಲಿಂಗಪ್ಪ, ಮುರಾಹರಿಗೌಡ, ಎಚ್. ಹನುಮಂತಪ್ಪ, ಡಿ. ವಿನೋದ್, ವಿ ಶಿವಾರೆಡ್ಡಿ, ಸಂಜಯ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.