ಬಳ್ಳಾರಿ

ಭಾರತೀಯರಿಗೆ ಭಾರತೀಯರೇ ಆದರ್ಶ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 10
ವಿಶ್ವದಲ್ಲಿಯೇ ಭವ್ಯವಾದ ಸಂಸ್ಕೃತಿ, ಪರಂಪರೆ ಹೊಂದಿರುವ ದೇಶ ಭಾರತ. ಭಾರತೀಯರಿಗೆ ಭಾರತೀಯರೇ ಆದರ್ಶವಾಗಬೇಕು ಎಂದು ಖ್ಯಾತ ಗೀತ ರಚನೆಕಾರ, ವಿಧಾನಪರಿಷತ್ ಸದಸ್ಯ ಡಾ. ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸ್ವತಂತ್ರ ಪದವಿಪೂರ್ವ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಸಾಹಿತಿ ದಂಪತಿ ಸಂವಾದ-8' ಕಾರ್ಯಕ್ರಮದಲ್ಲಿ ಮಾತನಾಡಿದರು. ಚೀನಾ, ಗ್ರೀಕ್ ಹೊರತುಪಡಿಸಿದರೆ ಐದು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ರಾಷ್ಟ್ರ ಭಾರತ. ಕೇವಲ 500 ವರ್ಷಗಳ ಇತಿಹಾಸ ಹೊಂದಿರುವ ಅಮೆರಿಕ ನಮಗೆ ಆದರ್ಶವಾಗಬೇಕಾಗಿಲ್ಲ. ಭಾರತೀಯರಿಗೆ ಭಾರತೀಯರೇ ಆದರ್ಶ ಎಂದ ಅವರು, ಮಹಾತ್ಮಗಾಂಧೀಜಿ, ಸ್ವಾಮಿ ವಿವೇಕಾನಂದರಿಗೆ ಅಮೆರಿಕದಲ್ಲಿ ಸಿಕ್ಕಿರುವ ಮಾನ್ಯತೆ, ಗೌರವ ಇಡೀ ಜಗತ್ತಿನಲ್ಲಿ ಯಾರಿಗೂ ದೊರೆತಿಲ್ಲ. ಗಾಂಧೀಜಿ, ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಒಲವು-ನಿಲುವುಗಳಿಂದ ವ್ಯಕ್ತಿತ್ವ ಸಂಗಮವಾಗುವುತ್ತದೆ. ಅದು ಗೆಲುವಾಗಬೇಕಾದರೆ ಇಚ್ಛಾಶಕ್ತಿ ಮತ್ತು ಮಹತ್ವಾಕಾಂಕ್ಷೆ ಬಹುಮುಖ್ಯ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವಂತಹ ಪರಿಸರ ಸೃಷ್ಟಿಸಬೇಕು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗೆ ಪ್ರಧಾನ್ಯತೆ ನೀಡಬೇಕು ಎಂದರು.
ವಿದ್ಯಾರ್ಥಿಗಳಾದ ನಿಮಗೆ ನೀವೇ ರುವಾರಿಗಳಾಗಬೇಕು. ತಂದೆ-ತಾಯಿ, ಗುರು, ಶಿಕ್ಷಣ ಸಂಸ್ಥೆಗಳು ಇವು ಸೋಪಾನವಿದ್ದ ಹಾಗೆ. ಜ್ಞಾನ, ಸಂಕಲ್ಪ, ತಾಳ್ಮೆ ಜತೆಗೆ ಮಹತ್ವಾಕಾಂಕ್ಷೆ ಹೊಂದಿದಲ್ಲಿ ಬದುಕಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಹಾಗೂ ಇತರರಿಗೂ ಆದರ್ಶರಾಗಬಹುದು ಎಂದು ಕಿವಿಮಾತು ಹೇಳಿದರು. ಪ್ರಕೃತಿ ರುದ್ರವೂ ಹೌದು, ರಮಣಿಯವೂ ಹೌದು. ಜೀವನವು ಅಷ್ಟೇ ಅದನ್ನು ಸಾರ್ಥಕಗೊಳಿಸಿಕೊಳ್ಳಬೇಕಿರುವುದು ನಮ್ಮ ಮೇಲಿದೆ. ನಿರಂತರ ಪ್ರಯತ್ನ, ಶ್ರಮ, ಆಸಕ್ತಿ ಇದ್ದಲ್ಲಿ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಆರ್.ವಿ. ವಸ್ತ್ರದ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಗಾಯಕ ದೊಡ್ಡಬಸವ ಗವಾಯಿಗಳು ಡಾ. ದೊಡ್ಡರಂಗೇಗೌಡರ ರಚಿತ ಭಾವಗೀತೆಗಳನ್ನು ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಡಾ. ರಾಜೇಶ್ವರಿ ದೊಡ್ಡರಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ನಾಗರಾಜ್, ಅಸುಂಡಿ ನಾಗರಾಜ್, ಕಸಾಪ ಪದಾಧಿಕಾರಿಗಳಾದ ಗುರುಪ್ರಸಾದ್, ಕೆ.ವಿ. ವಿಜಯಲಕ್ಷ್ಮಿ, ಬಾದಾಮಿ ಶಿವಲಿಂಗ, ಈ. ಗೋವರ್ಧನರೆಡ್ಡಿ, ಡಿ.ನಾಗರಾಜಪ್ರಸಾದ ಶೆಟ್ಟಿ, ಪ್ರಾಚಾರ್ಯ ಪ್ರಕಾಶ್, ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಎಂಪಿ ವೀರೇಶ್ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈರಮ್ಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.