ಹನಿ ನೀರಾವರಿಗೆ ರು. 5768 ಕೋಟಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 15
ಸಿಂಗಟಾಲೂರು ಏತನೀರಾವರಿ ಯೋಜನೆ ವ್ಯಾಪ್ತಿಯ ಎಡದಂಡೆ ಭಾಗದ ಗದಗ, ಮುಂಡರಗಿ, ಕೊಪ್ಪಳ, ಯಲಬುರ್ಗಾ ತಾಲೂಕುಗಳ 94,993 ಎಕರೆ ಪ್ರದೇಶಕ್ಕೆ ಹನಿ ನೀರಾವರಿ (ಮೈಕ್ರೋ ಇರಿಗೇಷನ್) ಸೌಲಭ್ಯ ಒದಗಿಸಲು ರು. 5,768 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಸಿಂಗಟಾಲೂರು ಏತನೀರಾವರಿ ಯೋಜನೆ ಬ್ಯಾರೇಜ್ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಯೋಜನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡದಂಡೆ ಭಾಗದ ಕೆಲವು ಕಡೆಗಳಲ್ಲಿ ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿದ್ದವು. ಕಡಿಮೆ ನೀರಿನಲ್ಲೇ ಹೆಚ್ಚುವರಿ ನೀರಾವರಿ ಮಾಡಿಕೊಳ್ಳಲು ಹನಿ ನೀರಾವರಿ ಯೋಜನೆಯನ್ನು ಅಳವಡಿಸಲಾಗುವುದು ಎಂದರು.
2013-14ನೇ ಸಾಲಿನ ಬಜೆಟ್ನಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈಗ 1,70,236 ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಯಾಗಿತ್ತು. ಎಡದಂಡೆ ಭಾಗಕ್ಕೆ 94,993 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯದಿಂದ ಒಟ್ಟು ಎಡದಂಡೆ, ಬಲದಂಡೆ ಸೇರಿ ರು. 2,65,229 ಎಕರೆ ಖುಷ್ಕಿ ಜಮೀನಿಗೆ ಯೋಜನೆಯಿಂದ ನೀರುಣಿಸಲಾಗುವುದು ಎಂದು ಮಾಹಿತಿ ನೀಡಿದರು.
2.20 ಲಕ್ಷ ಎಕರೆಗೆ ನೀರಾವರಿ: ಯೋಜನೆಯ ಬಲದಂಡೆಯಲ್ಲಿ ಒಟ್ಟು 35,791 ಎಕರೆ ಪ್ರದೇಶದಲ್ಲಿ ಮೊದಲ ಹಂತದ ನೀರೆತ್ತುವ ಘಟಕದಿಂದ 12 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಉಳಿದ 23 ಸಾವಿರ ಎಕರೆ ಪ್ರದೇಶಕ್ಕೆ ಮಾರ್ಚ್ ಅಂತ್ಯದೊಳಗೆ ನೀರುಣಿಸಲಾಗುವುದು. ಎಡದಂಡೆ ಭಾಗದಲ್ಲಿ 1.20 ಲಕ್ಷ ಎಕರೆ ನೀರಾವರಿ ಸೌಲಭ್ಯ ಹೊಂದಿದ್ದು, ಮತ್ತೆ 94,993 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮಾಡಿದ್ದರಿಂದ ಒಟ್ಟು 2.20 ಲಕ್ಷ ಎಕರೆ ಪ್ರದೇಶ ನೀರಾವರಿಯಾಗುತ್ತಿದೆ. ಬಲದಂಡೆ ಭಾಗಕ್ಕೆ ಮಲತಾಯಿ ಧೋರಣೆಯಿಂದ ಕೇವಲ 35 ಸಾವಿರ ನೀರಾವರಿಯಾಗಿದೆ. ಈ ಭಾಗಕ್ಕೂ ಹನಿ ನೀರಾವರಿ ಸೌಲಭ್ಯ ಇದೆಯೇ ಎಂಬ ಪ್ರಶ್ನೆಗೆ, ಮುಂಬರುವ ದಿನಗಳಲ್ಲಿ ಆದ್ಯತೆ ನೀಡುತ್ತೇವೆಂದು ಹಾರಿಕೆ ಉತ್ತರ ನೀಡಿದರು.
ಹೆಚ್ಚುವರಿ ಟಿಸಿ: ಮೊದಲ ಮತ್ತು 2ನೇ ಹಂತದ ನೀರೆತ್ತುವ ಘಟಕಗಳ ವಿದ್ಯುತ್ ಪರಿವರ್ತಕ ಸುಟ್ಟು ರೈತರು ತೊಂದರೆ ಅನುಭವಿಸದಂತೆ ಅದಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕಕ್ಕೆ ಆದೇಶ ನೀಡಲಾಗಿದೆ. ಯೋಜನೆಯಲ್ಲಿ 4 ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ. ಸಂತ್ರಸ್ತರ ಸ್ಥಳಾಂತರಕ್ಕಾಗಿ ಪುನರ್ ವಸತಿ, ಪುನರ್ ನಿರ್ಮಾಣ ಪ್ರದೇಶಗಳಲ್ಲಿ ಈಗಾಗಲೆ ಕುಡಿಯುವ ನೀರು, ರಸ್ತೆ, ಚರಂಡಿ ಕಾಮಗಾರಿ ಪ್ರಗತಿಯಲ್ಲಿವೆ. ಶೀಘ್ರದಲ್ಲೆ ಕಾಮಗಾರಿ ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು.
ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ವಿಚಾರದಲ್ಲಿ ವಿಳಂಬ ಒಪ್ಪಿಕೊಂಡ ಸಚಿವರು, ಭೂಸ್ವಾಧೀನ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿಂದ ತೊಂದರೆ ಉಂಟಾಗಿದೆ. ಈಗಾಗಲೆ ಸರ್ಕಾರ 200 ಎಂಜಿನಿಯರ್ಗಳನ್ನು ನೇಮಕ ಮಾಡಿದೆ. ಉಳಿದ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಂಡು ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಲಾಗುವುದು. ನೀರಾವರಿ ಯೋಜನೆಗಳ ಇತಿಹಾಸ, ನೀರಾವರಿ ಕ್ಷೇತ್ರ, ಅಡ್ಡಿ ಆತಂಕಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ. ನೀರಾವರಿ ಗುರಿ, ಹಣಕಾಸಿನ ಸ್ಥಿತಿಗತಿ ಕುರಿತು ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುತ್ತಿದೆ ಎಂದರು.
ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್, ಜಿಪಂ ಸದಸ್ಯ ವಸಂತ್, ಪಿಕಾರ್ಡ್ ಮಾಜಿ ಅಧ್ಯಕ್ಷ ಬಸವನಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

