ಬಳ್ಳಾರಿ

ನಕಲಿ ಕಾರ್ಡ್ ಒಪ್ಪಿಸಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 16
ನ್ಯಾಯಬೆಲೆ ಅಂಗಡಿಯವರಿಗೆ ತಿಳಿದಿರುವ ಮಾಹಿತಿ ಆಧಾರದ ಮೇಲೆ ನಕಲಿ ಪಡಿತರ ಚೀಟಿಗಳನ್ನು ಸ್ಪಯಂ ಪ್ರೇರಣೆಯಿಂದ ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಕಲಿ ಪಡಿತರ ಚೀಟಿಗಳು ಪತ್ತೆಯಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಯವರನ್ನು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಕೊಪ್ಪಳ ಜಿಲ್ಲೆಗೆ ಹೊರಡುವ ಮುನ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೆ ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದರೂ ಪಡಿತರ ಚೀಟಿಗಳ ಬೇಡಿಕೆ ಅಧಿಕವಾಗಿದೆ. ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ 30-32 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ ಒಳಗಾಗಿ ಅರ್ಜಿಗಳನ್ನು ಪರಿಶೀಲಿಸಿ ಡಿಸೆಂಬರ್ ವೇಳೆಗೆ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದರು.
ಗ್ರಾಪಂಗೆ ನ್ಯಾಯಬೆಲೆ ಅಂಗಡಿ: ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿಯವರಿಗೆ ವಹಿಸಿಕೊಡುವುದಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗೆ ವಹಿಸಿಕೊಡುವ ಮೂಲಕ ಸುಲಭ ರೀತಿಯಲ್ಲಿ ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆ ಮಾಡಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ತಡೆಯಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಗಿ, ಜೋಳ ವಿತರಣೆ: ಪಡಿತರದಾರರಿಗೆ ಜೋಳ ಮತ್ತು ರಾಗಿಯನ್ನು ಕೆಜಿಗೆ ರು. 1ರಂತೆ ನೀಡಲಾಗುವುದು. ಇದಕ್ಕಾಗಿ ಕ್ವಿಂಟಲ್ ಜೋಳ, ರಾಗಿಗೆ ರು. 1800 ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಹಿಂದಿನ ಯಾವ ಸರ್ಕಾರಗಳು ಜೋಳ ಮತ್ತು ರಾಗಿಗೆ ಬೆಂಬಲ ಬೆಲೆ ನೀಡಿ ಖರೀದಿಸಿರಲಿಲ್ಲ. ನಮ್ಮ ಸರ್ಕಾರ ರೈತರು ಬೆಳೆಗಳಿಗೆ ನ್ಯಾಯಯುತ ಬೇಲೆ ಸಿಗಬೇಕು. ಮತ್ತು ಬೆಳೆದ ಬೆಳೆ ಏಕಕಾಲದಲ್ಲಿ ಮಾರಾಟವಾಗಬೇಕು ಎಂಬ ರೈತರ ಅಭಿಪ್ರಾಯದಂತೆ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ ಎಂದು ಹೇಳಿದರು.
ಮೌಢ್ಯ ವಿರೋಧಿ ಕರಡು ವರದಿ ಬಗ್ಗೆ ಇನ್ನು ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಕರಡು ಪ್ರತಿ ಬಗ್ಗೆ ಸಚಿವ ಸಂಪುಟದಲ್ಲಿ ಮತ್ತು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ವೈಜ್ಞಾನಿಕ ರೀತಿಯಲ್ಲಿಯೂ ನೋಡಬೇಕು ಮತ್ತು ನಮ್ಮ ಪರಂಪರೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಸ್ಥಳೀಯ ಕಾಂಗ್ರೆಸ್ ಮುಖಂಡ ದೀಪಕ್‌ಕುಮಾರ್ ಸಿಂಗ್, ಬ್ರಾಹ್ಮಣ ಸಮಾಜದ ಮುಖಂಡ ಕೆ. ನರಸಿಂಹಮೂರ್ತಿ (ಅಪ್ಪಣ್ಣ), ಶ್ಯಾಮರಾವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.