ನೀರಿನೊಂದಿಗೆ ಬೇಡ ಸರಸ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 18
ಜಿಲ್ಲೆಯಲ್ಲಿ ಹರಿಯುವ ನದಿ, ಕಾಲುವೆ, ಹೊಳೆಗಳಲ್ಲಿ ಮೋಜಿನಿಂದ ಈಜಲು ಹೋಗಿ, ಮುಖ ತೊಳೆಯಲು ಹೋಗಿ, ಸ್ನಾನ ಮಾಡಲು ಹೋಗಿ, ನೀರಿನಲ್ಲಿ ಆಟವಾಡಲು ಹೋಗಿ, ನೀರಿನ ಗುಂಡಿಯಲ್ಲಿ ಬಿದ್ದು ಹೀಗೆ ವಿವಿಧ ಕಾರಣಗಳಿಂದ ನೀರಿನಲ್ಲಿ ಮುಳುಗಿ ಮೂರು ವರ್ಷಗಳ ಅವಧಿಯಲ್ಲಿ 193 ಜನ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳು, ಯುವಕರು ಈಜಲು ಹೋಗಿ ಮೃತಪಟ್ಟಿರುವ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಹೊಳೆ, ವೇದಾವತಿ ನದಿ, ತುಂಗಭದ್ರಾ ನದಿ, ವಿವಿಧ ಕಾಲುವೆಗಳು ಹಲವು ಗ್ರಾಮಗಳನ್ನು ಹಾದು ಆಂಧ್ರಕ್ಕೆ ಸೇರುತ್ತವೆ. ನದಿ, ಹೊಳೆ, ಕಾಲುವೆಗಳು ಹರಿಯುವುದರಿಂದ ಅಕ್ಕಪಕ್ಕದ ಗ್ರಾಮಗಳ ಜನರು ಈಜಲು ಹೋಗುತ್ತಾರೆ. ಆಗ ನೀರಿನಲ್ಲಿರುವ ಸುಳಿಗಳನ್ನು ಅರಿಯದೆ, ಸಂಪೂರ್ಣ ಈಜು ಕಲಿಯದೆ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಹೀಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚಾಗಿದೆ. ಆಗತಾನೆ ಈಜು ಕಲಿತವರು ಹರಿಯುವ ನೀರಿನಲ್ಲಿ ಈಜಲು ಹೋಗಿ, ನೀರಿನ ರಭಸಕ್ಕೆ ತೇಲಿ ಹೋಗಿರುವ ಘಟನೆಗಳು ಹೆಚ್ಚಿವೆ.
ಹೆಚ್ಚುತ್ತಿರುವ ದುರಂತಗಳು: ಇತ್ತೀಚೆಗೆ ಬಳ್ಳಾರಿಯ ಅಲ್ಲೀಪುರ ಸಮೀಪದ ಎಚ್ಎಲ್ ಕಾಲುವೆಯಲ್ಲಿ ಈಜಲು ಹೋಗಿದ್ದ ಎಂಜಿನಿಯರಿಂಗ್ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸಿರುಗುಪ್ಪ ಬಳಿಯ ಹೊಳೆಯಲ್ಲಿ ಈಜಲು ಹೋದ ಓರ್ವ ಸಿರುಗುಪ್ಪದ, ಆಂಧ್ರಪ್ರದೇಶ ಕಡಪ ಜಿಲ್ಲೆಯ ಇಬ್ಬರು ಯುವಕರು ಮೃತಪಟ್ಟರು. ಹೀಗೆ ಯುವಕರು ಬೇಸಿಗೆ ನಾಡು ಬಳ್ಳಾರಿಯಲ್ಲಿ ಬಿಸಿಲಿನ ತಾಪ ತಾಳಲಾರದೆ, ಹಳ್ಳಿಯ ಸಮೀಪದಲ್ಲೇ ನದಿ, ಕಾಲುವೆ, ಹೊಳೆಗಳು ಇರುವುದರಿಂದ ಈಜಲು, ಸ್ನಾನಕ್ಕೆ ಹೋಗಿ ಅಲ್ಲಿ ಮೋಜು, ಹುಡುಗಾಟಕ್ಕೆ ಬಿದ್ದು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆಯುತ್ತಿವೆ.
ಈಜು ಕಲಿಯುವವರೆ ಎಚ್ಚರ: ಈಜು ದೇಹಕ್ಕೆ ವ್ಯಾಯಾಮವಾದರೂ, ಈಜಾಡುವಾಗ ದುಸ್ಸಾಹಸದ ಕೆಲಸ ಬೇಡ. ಇನ್ನು ಈಜು ಕಲಿಯುವ ಹಂತದಲ್ಲಿರುವವರು, ವಿದ್ಯಾರ್ಥಿಗಳು, ಯುವಕರು, ಏಕಾಏಕಿ ನೀರಿಗೆ ಹಾರಿ ಈಜು ಕಲಿಯುವ ಹುಂಬತನ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆಯೇ ಸರಿ. ಈಜು ಕಲಿಯುವ ಪೂರ್ವದಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಈಜಿಗೆ ಬೇಕಾದ ಅಗತ್ಯ ಸಾಮಗ್ರಿ ಇಟ್ಟುಕೊಂಡು ಕಲಿಯಬೇಕು. ಹರಿಯುವ ನೀರಿನಲ್ಲಿ ಈಜು ಕಲಿಯುವುದು ಕಷ್ಟದ ಕೆಲಸ. ಅಲ್ಲಿ ನೀರು ರಭಸವಾಗಿ ಹರಿಯುವುದರಿಂದ ಆ ರಭಸಕ್ಕೆ ಸಿಲುಕಿಕೊಳ್ಳುವುದು ಸಾಮಾನ್ಯ. ಈ ಸಂದರ್ಭದಲ್ಲಿ ರಕ್ಷಣೆ ಮಾಡಲು ಕಷ್ಟ. ನುರಿತ, ತರಬೇತಿಯುತ ಈಜುಪಟು ಮಾತ್ರ ಅವರನ್ನು ರಕ್ಷಿಸಲು ಸಾಧ್ಯ. ಈಜು ಕಲಿಯಲು ಹೋಗುವವರು ಎಚ್ಚರ ವಹಿಸಬೇಕು. ನುರಿತ ಈಜುಗಾರರಿಂದ ತರಬೇತಿ ಪಡೆಯಬೇಕು. ಈಜು ಕಲಿಯಲು ಬೇಕಾದ ಅಗತ್ಯ ಮುಂಜಾಗ್ರತ ಕ್ರಮ, ಸಾಮಗ್ರಿಗಳು ಅಗತ್ಯ. ನೀರಿನಲ್ಲಿ ಇಳಿದಾಗ ಮೋಜು ಮಸ್ತಿ ಮಾಡದೇ ಅತ್ಯಂತ ಜಾಗರೂಕತೆ ವಹಿಸುವುದ ಉತ್ತಮ. ಹೋದ ಪ್ರಾಣ ಮತ್ತೆ ಬರುವುದಿಲ್ಲ. ಹೀಗಾಗಿ ನೀರಿನೊಂದಿಗೆ ಸರಸ ಬೇಡ ಎನ್ನುವುದು ನಮ್ಮ ಕಳಕಳಿ.
ಹರಿಯುವ ನೀರಿನಲ್ಲಿ ಈಜು ಕಲಿಯುವುದು ತುಂಬಾ ಕಷ್ಟ. ನೀರಿನಲ್ಲಿ ಯಾರಾದರು ಮುಳುಗಿದಾಗ ಸಹ ಈಜುಗಾರರು ರಕ್ಷಣೆ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು. ರಕ್ಷಣೆ ಮಾಡುವಾಗ ಮುಳುಗುವ ವ್ಯಕ್ತಿಯ ಮುಂದೆ ಹೋಗಬಾರದು. ಕಾರಣ ಸಾಯುತ್ತೇನೆ ಎಂಬ ಸಂಕಟದಿಂದ ಮುಳುಗುವವರು ರಕ್ಷಿಸುವವರನ್ನು ಬಿಗಿಯಾಗಿ ಹಿಡಿದುಕೊಳ್ಳುವ ಸಾಧ್ಯತೆ ಇರುತ್ತದೆ. ಆತನ ರಕ್ಷಣೆ ಉದ್ದೇಶದಿಂದ ಒಂದ ಅಗ್ಗ, ಸೀರೆಯನ್ನು ಆತನಿಗೆ ನೀಡಿ ರಕ್ಷಣೆ ಮಾಡಬೇಕು. ನೀರಿನಿಂದ ಹೊರತಂದು ಅಂಗಾತ ಮಲಗಿಸಿ ಉಸಿರಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.
- ಕುಬೇರನಾಯ್ಕ, ನುರಿತ ಈಜುಪಟು
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

