ಬಳ್ಳಾರಿ

24ರಂದು ವಿಶ್ವಕರ್ಮ ಮಹೋತ್ಸವ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 21
ಬಳ್ಳಾರಿ ತಾಲೂಕಿನ ಕುರುಗೋಡಿನಲ್ಲಿ ಜಿಲ್ಲಾ ವಿಶ್ವಕರ್ಮ ಮಹೋತ್ಸವ ಸಮಿತಿಯಿಂದ ನವೆಂಬರ್ 24ರಂದು ಜಿಲ್ಲಾ ಮಟ್ಟದ ವಿಶ್ವಕರ್ಮ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಚಂದ್ರಕಾಂತ್ ಸೋನಾರ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯವನ್ನು ಸಂಘಟಿಸುವ, ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆ ನೆಲೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹೋತ್ಸವ ನಡೆಯುತ್ತಿದೆ. ಜಿಲ್ಲೆಯ ನಾನಾ ಕಡೆಗಳಿಂದ ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಗಣ್ಯರು ಭಾಗಿ: ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದ ಬಳಿ ಮಹೋತ್ಸವ ಜರುಗಲಿದೆ. 250 ಕೆ.ಜಿ. ತೂಕದ ವಿಶ್ವಕರ್ಮರ ಕಂಚಿನ ಪುತ್ಥಳಿಯನ್ನು ಮೆರವಣಿಗೆ ಮಾಡಲಾಗುವುದು. ಆನೆಗುಂದಿ ಪಂಚಸಿಂಹಾಸನ ಸರಸ್ವತಿ ಪೀಠದ ಶ್ರೀ ಶಿವಶಂಕರ ಸ್ವಾಮೀಜಿ ಹಾಗೂ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಸೇರಿದಂತೆ ಗಣ್ಯರು, ಜಿಲ್ಲೆಯ ರಾಜಕೀಯ ಮುಖಂಡರು ಹಾಗೂ ನಾನಾ ವಲಯದ ಪ್ರಮುಖರು ಪಾಲ್ಗೊಳ್ಳುವರು. ಸಮುದಾಯದ ಸಂಘಟನೆ, ಹೋರಾಟ ಹಾಗೂ ಹಕ್ಕೊತ್ತಾಯಗಳ ಬಗ್ಗೆ ಇದೇ ವೇಳೆ ಚರ್ಚಿಸಲಾಗುವುದಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ವಿಶ್ವಕರ್ಮರನ್ನು ಗುರುತಿಸಿ ಸೂಕ್ತ ಸೌಲಭ್ಯ ಹಾಗೂ ನೆರವು ನೀಡುವ ಕೆಲಸಗಳಾಗುತ್ತಿಲ್ಲ. ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಬಡ ವಿದ್ಯಾರ್ಥಿಗಳಿಗಾಗಿ ಬಳ್ಳಾರಿ ಹಾಗೂ ಕುರುಗೋಡಿನಲ್ಲಿ ವಸತಿ ನಿಲಯಕ್ಕಾಗಿ ನಿವೇಶನ ಖರೀದಿಸಿದ್ದು, ವಸತಿ ನಿಲಯಕ್ಕಾಗಿ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ರಜೆ ಘೋಷಿಸಲಿ: ಹಂಪಿ ಉತ್ಸವದಲ್ಲಿ ವಿಶ್ವಕರ್ಮರಿಗೆ ಯಾವುದೇ ಆದ್ಯತೆ ಸಿಗುತ್ತಿಲ್ಲ. ಸಮಾಜದ ಸ್ವಾಮೀಜಿಗಳಿಗೆ ಈ ಬಾರಿಯ ಉತ್ಸವದ ವೇದಿಕೆಯಲ್ಲಿ ಸಾನ್ನಿಧ್ಯದ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದ ಅವರು, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 17ರಂದು ವಿಶ್ವಕರ್ಮ ದಿನಾಚರಣೆಗೆ ಅಲ್ಲಿನ ಸರ್ಕಾರ ರಜೆ ಘೋಷಿಸಿದೆ. ಆದರೆ, ಕರ್ನಾಟಕ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರದಿಂದಲೇ ವಿಶ್ವಕರ್ಮ ದಿನಾಚರಣೆ ಆಚರಿಸುವಂತಾಗಬೇಕು ಎಂಬುದು ವಿಶ್ವಕರ್ಮರ ಒತ್ತಾಯ ಎಂದರು.
ಗೌರವಾಧ್ಯಕ್ಷ ಕೃಷ್ಣಾನಂದ, ಎಂ.ಕೆ. ರವೀಂದ್ರ, ಉಪಾಧ್ಯಕ್ಷ ಸೂರ್ಯನಾರಾಯಣಾಚಾರ್, ಕೆ.ಎಸ್. ಆಚಾರ್, ಪ್ರಕಾಶ್ ಪತ್ತಾರ್, ಕಪ್ಪಗಲ್ ಚಂದ್ರಶೇಖರ ಆಚಾರ್, ಶ್ರೀಧರಗಡ್ಡೆ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.