30ರಂದು ರಾಜ್ಯ ಹೆದ್ದಾರಿ ತಡೆ
ಹಗರಿಬೊಮ್ಮನಹಳ್ಳಿ: ಮುಕ್ತವಾಗಿ ಕಬ್ಬು ಮಾರಾಟ ಮಾಡುವುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ನ. 30ರಂದು ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಜಿ. ಗೋಣಿಬಸಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಬೆಳೆದಿರುವ ಕಬ್ಬನ್ನು ತಮಗೆ ಇಷ್ಟಬಂದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಲು ಬೆಳೆಗಾರರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೆ. 30ರಂದು ಹಗರಿಬೊಮ್ಮನಹಳ್ಳಿ ಬಂದ್ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಅಲ್ಲದೆ ಈ ಸಂಬಂಧ ಅ. 18ರಂದು ತಾಲೂಕಿನ ಕಬ್ಬು ಬೆಳೆಗಾರರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಹ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದಿರುವುದಿಂದಾಗಿ ಸರ್ಕಾರದ ಧೋರಣೆ ಖಂಡಿಸಿ ನಾವು ರಸ್ತೆತಡೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದರು.
ರೈತರನ್ನು ರಕ್ಷಿಸಿ: ಹೊಸಪೇಟೆಯ ಐಎಸ್ಆರ್ ಸಕ್ಕರೆ ಕಾರ್ಖಾನೆ ಸುಮಾರು 3 ಲಕ್ಷ ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯವನ್ನಷ್ಟೆ ಹೊಂದಿದೆ. ಆದರೆ ಈ ಕಾರ್ಖಾನೆ ವ್ಯಾಪ್ತಿಯಲ್ಲಿ ಏಳೆಂಟು ಲಕ್ಷ ಟನ್ನಷ್ಟು ಕಬ್ಬು ಬೆಳೆಯಲಾಗಿದೆ. ಈ ಮಧ್ಯೆ ನಮ್ಮ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ನಮಗೆ ಪೂರೈಸಬೇಕು. ಯಾವುದೆ ಕಾರಣಕ್ಕೂ ಬೇರೆ ಕಾರ್ಖಾನೆಗಳಿಗೆ ಪೂರೈಸದಂತೆ ಐಎಸ್ಆರ್ ಸಕ್ಕರೆ ಕಾರ್ಖಾನೆ ಮಾಲೀಕರು ಕೋರ್ಟ್ನಿಂದ ಆದೇಶ ತಂದು ಬೆಳೆಗಾರರ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ. ಕೋರ್ಟ್ ಆದೇಶದ ಮೂಲಕ ಬೆಳೆಗಾರರ ಪ್ರಾಣ ಹಿಂಡುತ್ತಿರುವ ಐಎಸ್ಆರ್ ಮಾಲೀಕರಿಂದ ರೈತರನ್ನು ರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ರು. 9 ಕೋಟಿ ಬಾಕಿ ನೀಡಬೇಕು: ಐಎಸ್ಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾರ್ಖಾನೆಯವರು ಬೆಳೆಗಾರರಿಗೆ ಸರಿಯಾದ ಬಟವಾಡೆ ಮಾಡುತ್ತಿಲ್ಲ. ಅಲ್ಲದೆ ಬೆಳೆಗಾರರಿಗೆ ಕೊಡಬೇಕಾದ ರು. 9 ಕೋಟಿ ಬಾಕಿಯನ್ನು ಇನ್ನೂ ಕೂಡ ಪಾವತಿಸಿಲ್ಲ. ಅಲ್ಲದೆ ಕಬ್ಬು ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕಬ್ಬು ಕಟಾವ್, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರೆ ಯಾವುದೆ ಸೌಲಭ್ಯವನ್ನು ಬೆಳೆಗಾರನಿಗೆ ನೀಡುತ್ತಿಲ್ಲ. ಈ ಮಧ್ಯೆ ನಾಡಿನ ಇತರೆ ಕಾರ್ಖಾನೆಗಳು ಬೆಳೆಗಾರನಿಗೆ ಈ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ. ಹೀಗಾಗಿ ಬೆಳೆಗಾರ ಆ ಕಡೆಗೆ ಮನಸ್ಸು ಮಾಡಿದ್ದಾನೆ ಎಂದು ಹೇಳಿದರು.
ಬೆಂಬಲ: ನ. 25ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸುವರ್ಣಸೌಧ ಮುತ್ತಿಗೆ ಕಾರ್ಯದಲ್ಲಿ ತಾಲೂಕಿನಿಂದಲೂ ಸಾಕಷ್ಟು ರೈತರು ಭಾಗವಹಿಸಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

