ಬಳ್ಳಾರಿ

ವಿಶ್ವಕರ್ಮರು ಸಂಘಟಿತರಾಗಿ

Published On :

ಕನ್ನಡಪ್ರಭ ವಾರ್ತೆ, ಕುರುಗೋಡು, ನ. 25
ಇಡೀ ಮನುಕುಲದ ಸೃಷ್ಟಿಕರ್ತರಾಗಿರುವ ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಬೇಕು ಎಂದು ವಿಶ್ವಕರ್ಮ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ವಿಶ್ವಕರ್ಮ ಜಿಲ್ಲಾ ಮಹೋತ್ಸವ ನಿಮಿತ್ತ ಸ್ಥಳೀಯ ಸಮಿತಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ ಪ್ರತಿ ಜಿಲ್ಲೆಯಲ್ಲಿ ವಸತಿ ನಿಲಯ ಹೊಂದಿದ ಕರಕುಶಲ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು. ಸೆ.17ರಂದು ವಿಶ್ವಕರ್ಮ ದಿನಾಚರಣೆ ಎಂದು ಸರ್ಕಾರ ರಜೆ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಂಪಿ ವಿವಿಯಲ್ಲಿ ಅನುದಾನ ಕೊರತೆಯಿಂದ ನೆನೆಗುದಿಗೆ ಬಿದ್ದ ಜಕಣಾಚಾರಿ ಪ್ರತಿಮೆ ಅನಾವರಣಕ್ಕೆ ಸೂಕ್ತ ಅನುದಾನ ನೀಡಬೇಕು ಹಾಗೂ ಹಂಪಿ ಉತ್ಸವದಲ್ಲಿ ವಿಶ್ವಕರ್ಮರಿಗೆ ಗೌರವಸ್ಥಾನ ನೀಡಬೇಕು. ತಪ್ಪಿದಲ್ಲಿ ಕಪ್ಪುಬಾವುಟ ಪ್ರದರ್ಶನ ನಡೆಸಲಾಗುವುದು ಎಂದು ಎಚ್ಚರಿಸಿದರು.
ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀ, ಆನೆಗುಂದಿ ಸರಸ್ವತಿ ಮಠದ ಶಿವಶಂಕರ ಶ್ರೀ, ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಿ. ಚಂದ್ರಕಾಂತ್ ಸೋನಾರ್, ಪ್ರಾಂತ ರೈತ ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿದರು. ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ತಿಪ್ಪೇಸ್ವಾಮಿ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಟ್ಟದ ವಿಶ್ವಕರ್ಮ ಯುವಕ ಸಂಘ ಉದ್ಘಾಟನೆಗೊಂಡಿತು. ಜಿಪಂ ಸದಸ್ಯೆ ಎನ್.ಎಂ. ಗಾಯಿತ್ರಮ್ಮ, ಯರ್ರಿಸ್ವಾಮಿ, ಮುಖಂಡ ಎನ್. ಜಯದೇವಗೌಡ, ಗ್ರಾಪಂ ಅಧ್ಯಕ್ಷೆ ಎನ್. ಸಣ್ಣಮ್ಮ, ಉಪಾಧ್ಯಕ್ಷೆ ಎಸ್.ಎಂ. ಮಂಗಳಗೌರಿ ವೇದಿಕೆಯಲ್ಲಿದ್ದರು. ನಾನಾ ಕಲೆಯಲ್ಲಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು.
ಮೆರವಣಿಗೆ: 250 ಕೆಜಿ ತೂಕದ ಪಂಚಲೋಹದ ವಿಶ್ವಕರ್ಮ ಪ್ರತಿಮೆ ಹಾಗೂ ಶ್ರೀದೇವಿ ಮೆರವಣಿಗೆ ಸಕಲ ವಾದ್ಯಗೋಷ್ಠಿಯೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಬಿ. ಮಾನಪ್ಪ ಆಚಾರಿ, ನಾಗಮೂರ್ತಿ, ವಿಜಕುಮಾರ್ ಆಚಾರಿ, ಕಾಳಪ್ಪ ಆಚಾರಿ, ಬಿ. ವೆಂಕೇಶಪ್ಪ, ಗೌರಿ ಶಂಕರ್ ಆಚಾರ್, ಟಿ.ವಿ. ವೀರೇಶ್ ಆಚಾರ, ವೀರಪ್ಪ, ಷಡಕ್ಷರಿ, ವಿ.ಜಿ. ಮೌನೇಶ ಆಚಾರಿ, ಕೃಷ್ಣಾನಂದ ಆಚಾರಿ ಮೆರವಣಿಗೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.